ದೇಹಕ್ಕೆ ಮುಪ್ಪಾದರೂ ಮನಸ್ಸಿಗೆ ಮುಪ್ಪಾಗಿಲ್ಲ, ದೇಶದ ಸೇವೆ ಮಾಡಬೇಕೆಂಬ ಅದಮ್ಯ ಉತ್ಸಾಹದ ಚಿಲುಮೆಯಾಗಿ ಇಡೀ ದೇಶವನ್ನು ಸಂಚಾರ ಮಾಡುತ್ತಿದ್ದಾರೆ 81 ವರ್ಷದ ವಯೋವೃದ್ಧ. ಇವರು ವಿಶ್ವ ಪ್ರಸಿದ್ಧಿಯನ್ನು ಪಡೆದವರಲ್ಲ, ಆದರೆ ತಮ್ಮ ಗುರಿ ಸಾಧನೆಯ ಕಾರ್ಯವನ್ನು ಮೌನವಾಗಿ ನಿರ್ವಹಿಸಿ ದೇಶದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಬಗೀಚ ಸಿಂಗ್ ಎಂಬ ಈ ಸಮಾಜ ಸೇವಕ ಒಂದಲ್ಲ ಎರಡಲ್ಲ ಬರೋಬ್ಬರಿ 21 ಬಾರಿ ಇಡೀ ದೇಶ ಪರ್ಯಟನೆ ಮಾಡಿದ್ದಾರೆ. 80 ಕೆಜಿ ತೂಕದ ಲಗೇಜ್ನ್ನು ಬೆನ್ನ ಮೇಲೆ ಹೊತ್ತುಕೊಂಡು ಅದಕ್ಕೆ ಎರಡು ತ್ರಿವರ್ಣ ಧ್ವಜವನ್ನು ಸಿಕ್ಕಿಸಿಕೊಂಡು ಇವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರಯಾಣಿಸಿದ್ದಾರೆ, ಪ್ರಯಾಣಿಸುತ್ತಿದ್ದಾರೆ. ಸುಮ್ಮನೆ ಕಾಲಹರಣ ಮಾಡಲು ಅವರು ಪ್ರಯಾಣಿಸುತ್ತಿಲ್ಲ, ಬದಲಿಗೆ ತಂಬಾಕು ಸೇವನೆ, ಪಾನ್ ಮಸಾಲ ಸೇವನೆ, ಗುಟ್ಕಾ ಸೇವನೆ, ಸಿಗರೇಟು ಸೇವನೆ, ಮದ್ಯ ವ್ಯಸನ ಇವುಗಳ ವಿರುದ್ಧ ಜಾಗೃತಿ ಮೂಡಿಸಲು, ಈ ಅನಿಷ್ಟಗಳನ್ನು ದೇಶದಿಂದ ನಿರ್ಮೂಲನೆಗೊಳಿಸುವ ಪಣತೊಟ್ಟು ದೇಶ ಪರ್ಯಟನೆ ಮಾಡುತ್ತಿದ್ದಾರೆ.
ಇದೀಗ ತನ್ನ 22 ದೇಶ ಪರ್ಯಟನೆಯಲ್ಲಿರುವ ಬಗೀಚ ಅವರು ಪ್ರಸ್ತುತ ಹೈದರಾಬಾದ್ನಲ್ಲಿದ್ದಾರೆ. 1992ರಲ್ಲಿ ಮನೆ ಬಿಟ್ಟ ಇವರು ಇದುವರೆಗೆ ಹಿಂದಿರುಗಿ ಮನೆಗೆ ಹೋಗಿಲ್ಲ. ಪ್ರಸ್ತುತ ಇಡೀ ದೇಶವೇ ಅವರ ಮನೆ. ದೇಶವನ್ನು ಮಾದಕ ವ್ಯಸನ ಮುಕ್ತಗೊಳಿಸಬೇಕು ಎಂಬ ಏಕೈಕ ಗುರಿ ಅವರದ್ದು, ಆ ಗುರಿ ಸಾಧನೆಗೆ ಅವರ ವಯಸ್ಸು ಅಡ್ಡ ಬಂದಿಲ್ಲ ಎಂಬುದೇ ವಿಶೇಷ. ಅವರ ಈ ಕಾರ್ಯ ಅವರನ್ನು ಸೆಲೆಬ್ರಿಟಿ ಮಾಡಬೇಕಿತ್ತು, ಅವರಿಗೆ ಸನ್ಮಾನ ಪ್ರಶಸ್ತಿಗಳು ಒಲಿದು ಬರಬೇಕಿತ್ತು. ಆದರೆ ದುರಾದೃಷ್ಟವಶಾತ್ ಅದ್ಯಾವುದೂ ನಡೆದಿಲ್ಲ.
ತಂಬಾಕು ಪದಾರ್ಥ, ಡ್ರಗ್ಸ್ಗಳ ಅಪಾಯ, ಲೈಂಗಿಕ ಕಾರ್ಯಕರ್ತರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಆಗುವ ಅಪಾಯಗಳ ಬಗ್ಗೆ ಇವರು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ’ಯುವ ಜನಾಂಗ ದುರ್ಬಲಗೊಂಡರೆ, ದೇಶ ಕೂಡ ದುರ್ಬಲಗೊಳ್ಳುತ್ತದೆ’ ಎಂಬುದನ್ನು ಇವರು ಜನರಿಗೆ ತಿಳಿ ಹೇಳುತ್ತಾರೆ.
ಇವರ ಪ್ರಯಾಣದಾದ್ಯಂತ ಮುಖ್ಯಮಂತ್ರಿಗಳನ್ನು, ರಾಜಕಾರಣಿಗಳನ್ನು, ಸಿನಿಮಾ ನಟರನ್ನು ಇವರು ಭೇಟಿಯಾಗಿದ್ದಾರೆ. ಆದರೆ ಯರೊಬ್ಬರು ನನ್ನ ಅಭಿಯಾನಕ್ಕೆ ಸ್ಪಂದಿಸಿಲ್ಲ, ಎಲ್ಲರೂ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ ಆದರೆ ನನ್ನ ಮಿಷನ್ಗೆ ನೆರವಾಗಲ್ಲ ಎಂಬ ನೋವು ಇವರದ್ದು. ಪ್ರಾಣಿಗಳಾದರೂ ನನ್ನ ಮೇಲೆ ದಯೆ ತೋರಿವೆ ಆದರೆ ರಾಜಕಾರಣಿಗಳಲ್ಲ ಎಂದು ಇವರು ಹೇಳುತ್ತಾರೆ.
ಅದೇನೆಯಿರಲಿ ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿ ದಾರಿಗೆ ತರಲು ಇವರು ನಡೆಸುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.