ಕರ್ನಾಟಕದಲ್ಲಿ ಈಗ ಎಲ್ಲರ ಬಾಯಲ್ಲೂ ಒಂದೇ ಸುದ್ದಿ. ಜನ ಸೇರಿದಲ್ಲೆಲ್ಲ ಒಂದೇ ಚರ್ಚೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 70 ಲಕ್ಷ ರೂ. ದುಬಾರಿ ವಾಚಿನ ಬಗ್ಗೆಯೇ ಈಗ ಎಲ್ಲೆಡೆ ಕಾವೇರಿದ ಮಾತು. ಆ ವಾಚು ಉಡುಗೊರೆಯಾಗಿ ಬಂದದ್ದೆಂದು ಸಿದ್ದರಾಮಯ್ಯನವರೇನೋ ಹೇಳಿದ್ದಾರೆ. ಆದರೆ ಆ ಪ್ರಕರಣ ಅಷ್ಟಕ್ಕೇ ಮುಗಿಯುವುದಿಲ್ಲ. ಆ ಉಡುಗೊರೆಯನ್ನು ಕೊಟ್ಟವರು ಯಾರು? ಯಾಕೆ ಕೊಟ್ಟರು? ಇತ್ಯಾದಿ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರಿಸಲೇಬೇಕಾಗುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬ ದುಬಾರಿ ವಾಚನ್ನು ಕಟ್ಟಿಕೊಂಡರೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವವರು. ಅವರು ಸಾರ್ವಜನಿಕ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೊಬ್ಬರು ಹೊಂದಿರುವ ವಸ್ತುಗಳು, ಆಸ್ತಿ-ಪಾಸ್ತಿ ಅಥವಾ ಅವರ ಖರ್ಚು-ವೆಚ್ಚಗಳ ವಿಚಾರದಲ್ಲಿ ಖಾಸಗೀತನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಜನಸಾಮಾನ್ಯರಿಗೆ ಈ ಎಲ್ಲ ವಿಚಾರಗಳು ಮತ್ತು ಅದರ ಹಿಂದಿನ ಹಣದ ಮೂಲವನ್ನು ತಿಳಿದುಕೊಳ್ಳುವ ಎಲ್ಲ ರೀತಿಯ ಹಕ್ಕುಗಳೂ ಇವೆ.
ಈಗಾಗಲೇ ಸಿದ್ದರಾಮಯ್ಯನವರ ಆಪ್ತರೆನಿಸಿಕೊಂಡವರು ಅವರಿಗೆ ಆ ದುಬಾರಿ ವಾಚನ್ನು ಕಿತ್ತೆಸೆಯುವಂತೆ ಸಲಹೆ ನೀಡಿದ್ದಾರೆ. ಇನ್ನು ಕೆಲವರು ಸಿದ್ದರಾಮಯ್ಯನವರು ಆ ವಾಚನ್ನು ಯಾರಿಂದ ಪಡೆದರೆಂದು ತಿಳಿಸಿ, ಸಂಭಾವ್ಯ ಅಪಾಯದಿಂದ ಪಾರಾಗುವಂತೆ ಸಲಹೆಯನ್ನೂ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮಾತ್ರ ಇದೇನೂ ಗಂಭೀರವಾದ ವಿಷಯವಲ್ಲ ಎಂಬಂತೆ ಆರಾಮವಾಗಿದ್ದಾರೆ. ಈ ದುಬಾರಿ ವಾಚಿನ ಪ್ರಕರಣ ಮುಂದೆ ಎಲ್ಲಿಗೆ ಮುಟ್ಟಬಹುದೆಂಬ ಬಗ್ಗೆ ಅವರಿಗೆ ಯಾವುದೇ ಭಯ, ಗಾಬರಿ ಕಾಡದಿರುವುದು ಆಶ್ಚರ್ಯಕರ. ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ಇಬ್ರಾಹಿಂ ರೊಲೆಕ್ಸ್ ವಾಚು ಹಗರಣದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಬೇಕಾಗಿ ಬಂದಿತ್ತು ಎಂಬುದು ಕೂಡಾ ಅವರಿಗೆ ನೆನಪಿದ್ದಂತಿಲ್ಲ. ಅವರ ಆಪ್ತರೂ ಈ ಬಗ್ಗೆ ಸಿದ್ದರಾಮಯ್ಯನವರಿಗೆ ಸೂಕ್ತ ಸಲಹೆಯನ್ನು ನೀಡಿದಂತೆ ಕಂಡುಬರುತ್ತಿಲ್ಲ.
ರಾಜಕಾರಿಣಿಯಾದವನು ಹಾಗಿದ್ದರೆ ದುಬಾರಿ ವಾಚು ಕಟ್ಟಬಾರದೆ? ಬೆಲೆಬಾಳುವ ತಂಪು ಕನ್ನಡಕ ಧರಿಸಬಾರದೆ? ದುಬಾರಿ ಬೆಲೆಯ ಬಟ್ಟೆ, ಬೂಟು ಇತ್ಯಾದಿ ಧರಿಸಬಾರದೆ? ಇಂತಹ ಪ್ರಶ್ನೆಗಳೇಳುವುದು ಸಹಜ. ರಾಜಕಾರಣಿಗಳು ಬೇರೆಯವರಿಗಿಂತ ಭಿನ್ನರೇನಲ್ಲ. ಅವರೂ ಇದೇ ಸಮಾಜದ ಮಧ್ಯದಿಂದ ಎದ್ದುಬಂದವರು. ಆದರೆ ಅವರು ವಹಿಸಿರುವ ಪಾತ್ರ – ಜನಸೇವಕರದು. ಜನಸೇವೆ ಮಾಡಬೇಕಾದರೆ ದುಬಾರಿ ಬೆಲೆಯ ವಸ್ತ್ರ, ವಾಚು, ಉಂಗುರ, ಬೂಟು ಇತ್ಯಾದಿ ಧರಿಸುವ ಅಗತ್ಯವಿರುವುದಿಲ್ಲ. ಸರಳ ಬದುಕು, ಮಿತವಾದ ಖರ್ಚು ಮಾಡುತ್ತಾ ಪ್ರಾಮಾಣಿಕ, ಪಾರದರ್ಶಕವಾಗಿರಬೇಕೆಂಬುದು ಅಪೇಕ್ಷೆ. ಸಮಾಜಸೇವೆಗಾಗಿಯೇ ತಮ್ಮ ಬದುಕು ಮೀಸಲಾಗಿಟ್ಟ ಗಾಂಧೀಜೀ, ವಿನೋಬಾ ಭಾವೆ, ಜಯಪ್ರಕಾಶ್ ನಾರಾಯಣ್, ಸಾನೆ ಗುರೂಜಿ ಮೊದಲಾದವರು. ಬದುಕಿದ್ದುದು ಅತ್ಯಂತ ಸರಳವಾಗಿ. ಗಾಂಧೀಜಿಯವರಂತೂ ಲಂಡನ್ನಿನ ದುಂಡು ಮೇಜಿನ ಪರಿಷತ್ ಸಭೆಗೂ ತುಂಡು ಬಟ್ಟೆಯುಟ್ಟೇ ತೆರಳಿದ್ದರು. ಗಾಂಧೀಜಿಯವರನ್ನು ತಮ್ಮ ಆದರ್ಶ ವ್ಯಕ್ತಿ ಎಂದು ಕೊಂಡಾಡುವ ಈಗಿನ ರಾಜಕಾರಣಿಗಳು ಮಾತ್ರ ಅವರ ಆದರ್ಶವನ್ನು ಕೇವಲ ವೇದಿಕೆಯ ತಮ್ಮ ಭಾಷಣಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ಆಚರಣೆಯಲ್ಲಿ ಅಪ್ಪಿತಪ್ಪಿಯೂ ಅಳವಡಿಸುವುದಿಲ್ಲ. ನೆಹರೂ ಅವರಿಂದ ಹಿಡಿದು ಈಗಿನ ಪ್ರಮುಖ ರಾಜಕಾರಣಿಗಳವರೆಗೂ ಇದೇ ಕಥೆ. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಅತ್ಯಂತ ಸರಳ ವ್ಯಕ್ತಿ, ಸೀದಾಸಾದಾ ಮನುಷ್ಯ ಎಂದೇ ಇದುವರೆಗಿನ ಪ್ರತೀತಿಯಾಗಿತ್ತು. ಆದರೆ ಮುಖ್ಯಮಂತ್ರಿಯಾದ ಬಳಿಕ ಅವರ ಚಹರೆಯೇ ಬದಲಾಗಿಬಿಟ್ಟಿರುವುದು ಅವರನ್ನು ಸಂಶಯದಿಂದ ಕಾಣುವಂತಾಗಿದೆ. ಯಾವಾಗಲೂ ಜುಬ್ಬಾ, ಪಂಚೆ, ಮೇಲೊಂದು ಟವೆಲ್ ಧರಿಸುತ್ತಿದ್ದ ಸಿದ್ದರಾಮಯ್ಯ ಈಗೀಗ ಟವಲ್ ಬದಲು ರೇಶ್ಮೆ ಶಾಲು, ಕೈಗೆ ದುಬಾರಿ ವಾಚು, ಕಾಲಿಗೆ ವಿಲಾಸೀ ಬೂಟು ಧರಿಸ ತೊಡಗಿರುವುದೇಕೆ ಎಂಬುದಕ್ಕೆ ಅವರೇ ಉತ್ತರಿಸಬೇಕು. ಮುಖ್ಯಮಂತ್ರಿಯಾದ ತಕ್ಷಣ ದುಬಾರಿ ಬೆಲೆಯ ವಸ್ತುಗಳನ್ನು ಧರಿಸಬೇಕೆಂದು ಯಾವ ನಿಯಮವೂ ಇಲ್ಲ. ಲಾಲ್ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗಲೂ ಅತ್ಯಂತ ಸರಳ ಬದುಕು ನಡೆಸಿದ್ದರು. ಅವರ ಮನೆಯ ಹರಿದಹೋದ ಸೋಫಾಸೆಟ್ ರಿಪೇರಿಯನ್ನು ಬಹಳ ದಿನಗಳ ಕಾಲ ಅವರು ಮಾಡಿಸಿರಲಿಲ್ಲ. ವಿಲಾಸಿ ಬಂಗಲೆ ಬೇಕೆಂದು ಅವರು ಬಯಸಿರಲಿಲ್ಲ. ಶಾಸ್ತ್ರಿಯವರ ಶರಟಿನ ಕಾಲರ್ ಸಾಧಾರಣವಾಗಿ ಹರಿದಿರುತ್ತಿತ್ತು. ಅದು ಕಾಣದಿರಲೆಂದು ಅದರ ಮೇಲೊಂದು ಕೋಟು ಧರಿಸುತ್ತಿದ್ದರು.
ಈಗಿನ ರಾಜಕಾರಣಿಗಳು ತಾವು ಸರಳ ವ್ಯಕ್ತಿಗಳೆಂದು ಬಿಂಬಿಸಲು ಸದಾ ಕಾಲ ಗರಿಗರಿಯಾದ ಖಾದಿ ಜುಬ್ಬಾ, ಪೈಜಾಮ ಧರಿಸುತ್ತಾರೆ. ಆದರೆ ಅವರ ಸರಳತೆ ಇಷ್ಟಕ್ಕೇ ಸೀಮಿತವಾಗಿರುತ್ತದೆ. ಧರಿಸುವ ಉಡುಪು ಮಾತ್ರ ಸರಳವಾಗಿದ್ದರೆ ಸಾಕೆ? ನಡವಳಿಕೆ, ಜೀವನ ಶೈಲಿ ಕೂಡಾ ಸರಳವಾಗಿರಬೇಡವೆ? ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ಘೋಷಿಸುವ ತಮ್ಮ ಆಸ್ತಿ ಪ್ರಮಾಣ ಪತ್ರದ ವಿವರಗಳನ್ನು ಗಮನಿಸಿದರೆ ಯಾರಾದರೂ ಗಾಬರಿಯಾಗದೇ ಇರಲಾರರು. ಕೋಟಿಗಿಂತ ಕಡಿಮೆ ಮೊತ್ತದ ಆದಾಯ ಘೋಷಿಸುವ ರಾಜಕಾರಣಿಗಳು ಕೈ ಬೆರಳೆಣಿಕೆಯಷ್ಟು. ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಕಾರ್ಪೊರೇಷನ್ನಂತಹ ಸಣ್ಣಮಟ್ಟದ ಚುನಾವಣೆಗಳಲ್ಲೂ ಕೋಟಿಕೋಟಿ ಹಣವನ್ನು ಅಭ್ಯರ್ಥಿಗಳು ನೀರಿನಂತೆ ಖರ್ಚುಮಾಡುತ್ತಾರೆ. ಆ ಹಣದ ಮೂಲ ಯಾವುದು? ಖರ್ಚುಮಾಡಿದ ಆ ಹಣವನ್ನು ಮತ್ತೆ ಹೇಗೆ ಗಳಿಸುತ್ತಾರೆ? ಎಂಬುದು ಮಾತ್ರ ಚಿದಂಬರ ರಹಸ್ಯ.
ಸಿದ್ದರಾಮಯ್ಯ ತಮಗೆ ಯಾರೋ ಉಡುಗೊರೆಯಾಗಿ ದುಬಾರಿ ವಾಚನ್ನು ಕೊಟ್ಟಿದ್ದಾರೆಂದು ಹೇಳಿ ಜಾರಿಕೊಳ್ಳುವಂತಿಲ್ಲ. ದುಬಾರಿ ಉಡುಗೊರೆಯನ್ನು ಕೊಡುವವರ ಉದ್ದೇಶ ಏನೆಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕು. ಯಾವುದೇ ಲಾಭದ ಉದ್ದೇಶವಿಲ್ಲದೆ ಇಂತಹ ದುಬಾರಿ ಉಡುಗೊರೆಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ದುಬಾರಿ ಉಡುಗೊರೆ ನೀಡುವುದು ಒಂದು ಬಗೆಯ ಲಂಚ ನೀಡಿಕೆಗೆ ಸಮಾನವೆಂದು ಕಾನೂನು ಹೇಳುತ್ತದೆ. ಹಾಗಿರುವಾಗ, ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ದುಬಾರಿ ಉಡುಗೊರೆ ಬಗ್ಗೆ ಜನತೆ ಪ್ರಶ್ನಿಸಿದಾಗ ಸೂಕ್ತ ಉತ್ತರ ನೀಡಬೇಕಾದುದು ತಮ್ಮ ಕರ್ತವ್ಯ ಎಂಬುದನ್ನು ಸಿಎಂ ತಿಳಿದುಕೊಂಡಿರಬೇಕು. ಇಂತಹ ಪ್ರಶ್ನೆಗಳಿಗೆ ತಾವು ಅತೀತರು ಎಂದು ಭಾವಿಸಿದಲ್ಲಿ ಒಂದೋ ಅವರು ದುರಹಂಕಾರಿ ಅಥವಾ ಅವರನ್ನು ಅಜ್ಞಾನಿಗಳೆಂದೇ ಭಾವಿಸಬೇಕಾಗುತ್ತದೆ. ಅಂತಹ ಪ್ರಶ್ನೆಗಳಿಂದ ನುಣುಚಿಕೊಳ್ಳುವುದೆಂದರೆ ಅದು ಮುಂದಿನ ಅಪಾಯಗಳಿಗೆ ಆಹ್ವಾನ ನೀಡಿದಂತೆ. ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ ತಮ್ಮ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ಈ ದುಬಾರಿ ವಾಚಿನ ಪ್ರಸ್ತಾಪವೇ ಇರಲಿಲ್ಲ. ಈಗ ದಿಢೀರನೆ ಆ ದುಬಾರಿ ವಾಚು ಬಂದದ್ದು ಹೇಗೆ? ತಮ್ಮ ನೈಜ ಆಸ್ತಿಪಾಸ್ತಿಗೆ ಹೊರತಾದ ಅಕ್ರಮ ಸಂಪತ್ತು ಇದು ಎಂಬ ಸಂದೇಶ ಜನರಿಗೆ ರವಾನೆಯಾಗದೆ ಇರಲು ಸಾಧ್ಯವೆ?
ಪ್ರಧಾನಿ ಮೋದಿ ಹತ್ತು ಲಕ್ಷ ರೂ. ಬೆಲೆಯ ಸೂಟು ಧರಿಸಿದ್ದೇಕೆಂದು ಕಾಂಗ್ರೆಸ್ ಮುಖಂಡರು ಈ ಹಿಂದೆ ಕೂಗಾಡಿದ್ದರು. ಮೋದಿ ಧರಿಸಿದ ಸೂಟಿನ ಬೆಲೆ ನಿಜವಾಗಿ ಎಷ್ಟಾಗಿತ್ತೆಂಬುದು ಗೊತ್ತಿಲ್ಲ. ಈಗ ಸಿದ್ದರಾಮಯ್ಯ 75 ಲಕ್ಷ ಬೆಲೆಯ ದುಬಾರಿ ವಾಚು ಧರಿಸಿರುವುದಂತೂ ನಿಜ. ಅದಕ್ಕೆ ಇದೇ ಕಾಂಗ್ರೆಸ್ ಮುಖಂಡರು ಯಾವ ಬಗೆಯ ಸಮರ್ಥನೆ ನೀಡುತ್ತಾರೆ?
ಕುಟುಂಬ ರಾಜಕಾರಣ
ಈ ವಿಷಯದಲ್ಲೂ ಈಗ ಯಾವುದೇ ಪಕ್ಷ ತಾವು ಭಿನ್ನರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಮೊದಮೊದಲು ಬಿಜೆಪಿಯವರು ನೆಹರು ಕುಟುಂಬ ರಾಜಕಾರಣದ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು. ಅನಂತರ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆಯೂ ಕುಟುಕುತ್ತಿದ್ದರು. ಆದರೆ ಈಗ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಹೆಪ್ಪುಗಟ್ಟತೊಡಗಿದೆ. ಚುನಾವಣೆಗಳು ಬಂದಾಗ ಇದ್ದಕ್ಕಿದ್ದಂತೆ ಬಿಜೆಪಿ ಮುಖಂಡರ ಸಂತತಿ ಪಕ್ಷದ ಅಭ್ಯರ್ಥಿಗಳಾಗಿ ಗೋಚರಿಸುತ್ತಾರೆ. ಪಕ್ಷದ ಅಭ್ಯರ್ಥಿಯಾಗಬೇಕಾದರೆ ಪಕ್ಷದಲ್ಲಿ ಸಾಕಷ್ಟು ಹಿಂದಿನಿಂದ ತೊಡಗಿಸಿಕೊಂಡಿರಬೇಕು, ನಿಷ್ಠಾವಂತ ಕಾರ್ಯಕರ್ತರಾಗಿರಬೇಕು, ಕ್ಷೇತ್ರದ ಜನರ ಗೌರವಕ್ಕೆ ಪಾತ್ರರಾಗಿರಬೇಕು ಮುಂತಾದ ಯಾವ ರೂಡಿಗತ ಮೌಲ್ಯಾದರ್ಶಗಳೂ ಈಗ ಕಾಣುತ್ತಿಲ್ಲ. ಮೊನ್ನೆ ಮೊನ್ನೆ ಜರುಗಿದ ತಾ.ಪಂ., ಜಿ.ಪಂ., ಚುನಾವಣೆಗಳಲ್ಲಿ ಪಕ್ಷದ ಮುಖಂಡರ ಸಂತಾನವೇ ಟಿಕೆಟ್ ಪಡೆದು ಅಭ್ಯರ್ಥಿಗಳಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂತಹವರಿಗೆ ಟಿಕೆಟ್ ಪಡೆಯುವುದು ಅತೀ ಸುಲಭ. ಹಣಬಲವೂ ಸಾಕಷ್ಟಿರುತ್ತದೆ. ರಾಜಕೀಯ ಪ್ರಭಾವಂತೂ ಜೊತೆಗೇ ಇರುತ್ತದೆ. ಆದರೆ ಸಾಮಾನ್ಯ ಕಾರ್ಯಕರ್ತರು ಸಮರ್ಥರಾಗಿದ್ದರೂ ಟಿಕೆಟ್ನಿಂದ ವಂಚಿತರಾಗುತ್ತಾರೆಂಬ ಸತ್ಯವನ್ನು, ಅಂತಹವರು ಅನ್ಯಾಯಕ್ಕೊಳಗಾಗುತ್ತಾರೆ ಎಂಬ ಕಟು ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವ ಮುಖಂಡರೆಷ್ಟು? ರಾಜಕಾರಣಿಯೊಬ್ಬರ ಪುತ್ರ ಈ ಬಾರಿ ಜಿ.ಪಂ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಿಜವಾಗಿ ಅವರಿಗೆ ಅಂತಹ ಅರ್ಹತೆ ಇರಲಿಲ್ಲ. ಅವರು ಉಪಮುಖ್ಯಮಂತ್ರಿಯವರ ಪುತ್ರ ಎಂಬುದಷ್ಟೇ ಅರ್ಹತೆ! ಆದರೆ ಅನಂತರ ಈ ಅಭ್ಯರ್ಥಿ ಕುಟುಂಬ ರಾಜಕಾರಣದ ವ್ಯಾಪ್ತಿಗೆ ಸೇರುವುದಿಲ್ಲ ಎಂಬ ಹೇಳಿಕೆಯನ್ನು ಪಕ್ಷದ ಸ್ಥಳೀಯ ಅಧ್ಯಕ್ಷರಿಂದ ಹೇಳಿಸಲಾಯಿತು. ಇಂತಹ ‘ವ್ಯಾಪ್ತಿ’ಯನ್ನು ನಿರ್ಧರಿಸಬೇಕಾದವರು ಮತದಾರರೇ ಹೊರತು ಮುಖಂಡರಲ್ಲ.
ತಾ.ಪಂ., ಜಿ.ಪಂ., ಕಾರ್ಪೊರೇಷನ್ ಚುನಾವಣೆಗಳ ಮಾತು ಹಾಗಿರಲಿ, ಇಡೀ ದೇಶದ ರಾಜಕೀಯವನ್ನು ಗಮನಿಸಿದರೆ, ಮುಖ್ಯವಾಗಿ ಎಂಎಲ್ಎ, ಎಂ.ಪಿ., ಮೇಲ್ಪಟ್ಟ ಅಧಿಕಾರದ ಹುದ್ದೆಗಳನ್ನು ದೇಶದ 500 ಮನೆತನಗಳು ಹಿಡಿದಿಟ್ಟುಕೊಂಡಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರಿದು ನಿಜ. ಈ 500 ಮನೆತನಗಳ ಮಕ್ಕಳು ಮೊಮ್ಮಕ್ಕಳು, ದೊಡ್ಡಪ್ಪ, ಚಿಕ್ಕಪ್ಪ, ಅವರ ಮಕ್ಕಳು… ಹೀಗೆ ಈ ಸೀಮಿತ ಪರಿಧಿಯಲ್ಲೇ ಅಧಿಕಾರದ ಹಂಚಿಕೆಯಾಗುತ್ತಿದೆ. ಈ ಮನೆತನಗಳು ವಂಶಪಾರಂಪರ್ಯವಾಗಿ ರಾಜಕೀಯದಲ್ಲೇ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಪಕ್ಷದ ಇತರ ಕಾರ್ಯಕರ್ತರಿಗೆ ರಾಜಕೀಯ ಅವಕಾಶಗಳು ಮರೀಚಿಕೆಯಾಗುತ್ತಿವೆ. ರಾಜಕೀಯ ಅನುಭವ, ವಿದ್ಯಾರ್ಹತೆ, ಹೋರಾಟ ಯಾವುದೂ ಇಲ್ಲದೆ ಶಾಸಕ, ಮಂತ್ರಿ, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಪಟ್ಟವನ್ನು ಸುಲಭವಾಗಿ ಏರುತ್ತಿರುವ ಈ ಪರಿಯ ವಿದ್ಯಮಾನ ಎಲ್ಲಾ ಪಕ್ಷಗಳ ಬಣ್ಣವನ್ನೂ ಬಯಲು ಮಾಡಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆರ್ಜೆಡಿ, ಸಮಾಜವಾದಿ, ತೆಲುಗುದೇಶಂ, ಡಿಎಂಕೆ, ಮುಂತಾದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಈ ಮಾತಿಗೆ ಹೊರತಾಗಿಲ್ಲ. ಹಾಗಾಗಿ ಇನ್ನುಮುಂದೆ ಬಿಜೆಪಿಯೂ ಸೇರಿದಂತೆ ಯಾವುದೇ ಪಕ್ಷವೂ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸುವುದು ತೀರಾ ಹಾಸ್ಯಾಸ್ಪದವೆನಿಸುತ್ತದೆ. ಜನರು ಇಂತಹ ಟೀಕೆಗಳನ್ನು ಇನ್ನುಮುಂದೆ ಖಂಡಿತ ಸಹಿಸಿಕೊಳ್ಳಲಾರರು ಎಂಬುದನ್ನು ರಾಜಕಾರಣಿಗಳು ಅರಿತಿರುವುದು ಲೇಸು.
ರಾಜಕೀಯ ರಂಗ ಎನ್ನುವುದು ಬಚ್ಚಲುಮನೆಯಿದ್ದಂತೆ ಎಂದು ಹಿರಿಯರೊಬ್ಬರು ಬಹಳ ಹಿಂದೆಯೇ ಹೇಳಿದ್ದರು. ಅಲ್ಲಿ ಜಾರಿ ಬೀಳುವವರೇ ಹೆಚ್ಚು, ಎಚ್ಚರವಹಿಸಿ ಬೀಳದಿರುವವರು ಕಡಿಮೆ. ಇಂತಹ ರಾಜಕೀಯ ರಂಗವೆಂಬ ಬಚ್ಚಲುಮನೆಯಲ್ಲಿ ಬೆತ್ತಲಾಗದವರೇ ಇಲ್ಲ ಎಂಬುದು ವರ್ತಮನದ ವಿದ್ಯಮಾನಗಳಿಂದ ಇನ್ನಷ್ಟು ಸ್ಪಷ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.