ಬೆಳ್ತಂಗಡಿ : ಕುಮ್ಕಿ ಭೂಮಿ ಬಗ್ಗೆ ರಾಜ್ಯ ಸರಕಾರ ರೈತರಲ್ಲಿ ಗೊಂದಲ ಮೂಡಿಸುತ್ತಿದೆ. ಈ ಬಗ್ಗೆ ಸರಕಾರಕ್ಕೆ ಅರಿವಿಲ್ಲದ ಕಾರಣ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಏನೇ ಆದರೂ ಕುಮ್ಕಿ ಭೂಮಿ ರೈತರ ಜನ್ಮಸಿದ್ದ ಹಕ್ಕು. ಇದನ್ನು ಸರಕಾರ ಮುಂದಕ್ಕೆ ರೈತರಿಗೆ ನೀಡುವ ಬಗ್ಗೆ ಭರವಸೆ ಇಲ್ಲ. ಅದಕ್ಕಾಗಿ ಹೈಕೋರ್ಟ್, ಸುಕ್ರೀಂಕೊರ್ಟ್ಗೆ ಮೊರೆ ಹೋಗಲಾಗುವುದು. ಅಗತ್ಯವಿದ್ದರೆ ರಾಷ್ಟ್ರಪತಿಯವರಲ್ಲಿಯೂ ಮೊರೆಹೋಗಲು ಸಿದ್ದ ಎಂದು ಕುಮ್ಕಿ ಹಕ್ಕು ಹೋರಾಟ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.
ಸೋಮವಾರ ಗುರುವಾಯನಕೆರೆ ಹವ್ಯಕ ಭವನದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಕುಮ್ಕಿ ಹಕ್ಕು ಹೋರಾಟದ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಕುಮ್ಕಿ ಹಕ್ಕಿನ ಬಗ್ಗೆ ಸಮಗ್ರ ದಾಖಲೆ ಸಹಿತ ಕಿಸಾನ್ ಸಂಘದ ಅಧ್ಯಕ್ಷ ಎಂ.ಜೆ. ಸತ್ಯನಾರಾಯಣ ಮಾಹಿತಿ ನೀಡಿ ಕುಮ್ಕಿ ಹಕ್ಕಿಗಾಗಿ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಇದಕ್ಕಾಗಿ ಎಲ್ಲಾ ರೈತರು ಬೆಂಬಲ ನೀಡಬೇಕು ಎಂದರಲ್ಲದೆ ಸಭೆಯಿಂದ ಬಂದ ರೈತರ ಗೊಂದಲದ ಪ್ರಶ್ನೆಗೆ ಉತ್ತರಿಸಿದರು. ರಾಜಕಾರಣಿಗಳು ತನ್ನ ಆಪ್ತರಿಗೆ ಅಧಿಕಾರಿಗಳ ಮೂಲಕ ಒತ್ತಡಹಾಕಿ ಸರಕಾರಿ ಜಮೀನು ಮಂಜೂರು ಗೊಳಿಸಬಹುದು. ಆದರೆ ರೈತರ ಹಕ್ಕಾದ ಕುಮ್ಕಿ ಭುಮಿ ಸರಕಾರ ವಶಪಡಿಸಿಕೊಳ್ಳಲು ಮುಂದಾದಾಗ ರಾಜಕಾರಣಿಗಳು ಮೌನವಾಗುತ್ತಾರೆ. ಇಲ್ಲಿ ಒಬ್ಬರಿಗೆ ಒಂದು ಕಾನೂನು ಎಂದು ಸಾಬೀತಾಗುತ್ತಿದೆ ಎಂದರು.
೧೯೮೧ರ ಸರಕಾರಿ ಆದೇಶ ಹಾಗೂ ೧೮೮೫ರ ಸರಕಾರಿ ಆದೇಶದಂತೆ ಪಟ್ಟಾ ಸ್ಥಳದಿಂದ ನೂರುಗಜ ದೂರ ಪಾಳು ಭೂಮಿ ಉಳಿವಿಕೆಗೆ ರೈತರು ಅನುಭವಿಸಿಕೊಂಡು ಬರಬಹುದಾಗಿದೆ. ೧೮೮೧ರಿಂದ ವಿಶೇಷ ಸವಲತ್ತಾಗಿ ಗೋಮಾಳ, ಮರಮಟ್ಟುಗಳಿಗೆ, ಸೊಪ್ಪು, ಕಟ್ಟಿಕೆಗೆ ಬಳಸಬಹುದು ಎಂಬ ಕಾನೂನು ಜಾರಿಗೆ ಬಂತು. ನಂತರ ೧೯೨೧ರ ಪ್ರಕಾರ ಕುಮ್ಕಿ ಸ್ಥಳದಲ್ಲಿ ಪರಿಣಾಮಕಾರಿ ಅಭಿವೃದ್ಧಿಯಾದಾಗ ನಂಜ, ಪುಂಜ ಅಥವಾ ತೋಟದ ಮೇಲಿನ ಭೂಕಂದಾಯ ಅನುಪಾತಕ್ಕೆ ಅನುಗುಣವಾಗಿ ತಾತ್ಕಾಲಿಕ ಹೊಲ ಬೇಸಾಯ ಮಾಡಿದಾಗ ತಾತ್ಕಾಲಿಕ ಭೂಕಂದಾಯ ವಿಧಿಸಲಾಗುತ್ತಿತ್ತು. ೧೯೭೯ರ ತನಕವೂ ಶಾಶ್ವತ ಬೇಸಾಯ ಮಾಡಿದ ಹಕ್ಕುದಾರರಿಗೆ ನಿಗದಿತದರದಲ್ಲಿ ಭೂಮಿ ವರ್ಗಾಯಿಸಲಾಗುತ್ತಿತ್ತು.
ನಂತರ ಅಧಿಕಾರಿ ಶಾಹಿಗಳ ಕೃತ್ಯದಿಂದ ಕುಮ್ಕಿ ಸ್ಥಳದ ಜಾಗದಲ್ಲಿ ಸರಕಾರಿ ಎಂದು ನಮೂದಿಸುತ್ತಿದ್ದಾರೆ. ಇದು ಶಾಸನ ಸಭೆಯಲ್ಲಿ ನಿರ್ಣಯವಾಗಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಚುನವಾಣಾ ಪ್ರಣಾಲಿಕೆಯಲ್ಲಿ ಕುಮ್ಕಿ ಹಕ್ಕು ರೈತರಿಗೆ ಕೊಡುವ ಭರವಸೆ ನೀಡಿತ್ತು ನಂತರ ಸುಪ್ರೀಂಕೋರ್ಟ್ಗೆ ಅಫಿದಾವಿತ್ ಹಾಕಿ ಕುಮ್ಕಿ ಭೂಮಿ ಸರಕಾರದ್ದು ಎಂದು ಪ್ರತಿಪಾದಿಸಿದೆ ಎಂದರು. ರೈತರಿಗೆ ಭೂಮಿ ನೀಡುವಾಗಇದಕ್ಕೆ ನೊಂದವಣಾ ಶುಲ್ಕ ವಿಧಿಸುವುದರಿಂದ ಸಾವಿರಾರು ಕೋಟಿ ರೂ. ಸರಕಾರಕ್ಕೆ ಲಾಭವೂ ಇದೆ. ಅಕ್ರಮ ಸಕ್ರಮದಲ್ಲಿ ಭೂಮಿ ಮಂಜೂರಾದರೆ ಸಕ್ರಮದಲ್ಲಿರುವ ಕುಮ್ಕಿ ಭೂಮಿಯ ಬಗ್ಗೆ ಗೊಂದಲ ಬರುವುದಾದರೂ ಏಕೆ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಕುಮ್ಕಿ ಹಕ್ಕಿನ ಬಗ್ಗೆ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು. ನ್ಯಾಯಕ್ಕಾಗಿ ಸದಾ ಸಿದ್ದ ಇದರಿಂದಾಗಿ ಗೊಂದಲಕ್ಕೀಡಾದ ಕುಟುಂಬಗಳು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಗೋಷ್ಠಿಯಲ್ಲಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಎಸ್ ಸುಬ್ರಾಯ ಭಟ್ ಉಪಸ್ಥಿತರಿದ್ದರು.ಮುಂದಿನ ದಿನಗಳಲ್ಲಿ ರೈತರು ಸಾಮೂಹಿಕವಾಗಿ ಹೋರಾಡುವ ನಿರ್ಣಯ ಕೈಗೊಳ್ಳಲಾಯಿತು. ಕುಮ್ಕಿ ಹಕ್ಕು ಕಾನೂನಿನ ಬಗ್ಗೆ ಮಾಹಿತಿ ವಿನಿಮಯ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.