ಕೆಲವರ ಜೀವನ ಕಥೆಗಳು ನಮ್ಮನ್ನು ಅಚ್ಚರಿಗೊಳಿಸುವುದು ಮಾತ್ರವಲ್ಲ, ನಮಗೆ ಜೀವನ ಪಾಠವನ್ನೂ ಕಲಿಸಿಕೊಡುತ್ತದೆ. ಹೆಸರು ಮಾಡಿದ ಗಣ್ಯ ವ್ಯಕ್ತಿಗಳು ಮಾತ್ರ ಆದರ್ಶ ವ್ಯಕ್ತಿಗಳಲ್ಲ, ಎಳೆಮರೆ ಕಾಯಿಯಂತೆ ಇದ್ದು ಅಸಾಧಾರಣ ತ್ಯಾಗವನ್ನು ಮಾಡಿ ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ವ್ಯಕ್ತಿಗಳು ನಮಗೆ ಆದರ್ಶರಾಗಬಲ್ಲರು, ಜೀಬನ ಪಾಠ ಕಲಿಸಬಲ್ಲರು.
ಹ್ಯೂಮನ್ಸ್ ಆಫ್ ಬಾಂಬೆ ಎಂಬ ಫೇಸ್ಬುಕ್ ಪೇಜ್ನಲ್ಲಿ ಪ್ರಕಟವಾದ ಇಂತಹ ಒಂದು ಕಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಜೀವನದಲ್ಲಿ ಒಳ್ಳೆಯದನ್ನು ಮಾಡಲು ಮಾತ್ರವಲ್ಲ, ಮಾನವೀಯತೆಯಲ್ಲಿನ ನಮ್ಮ ನಂಬಿಕೆಯನ್ನೂ ಇದು ಗಟ್ಟಿಗೊಳಿಸುತ್ತದೆ.
‘ನನಗೆ 74 ವರ್ಷ, 11 ಭಾಷೆಗಳನ್ನು ಮಾತನಾಡಬಲ್ಲೆ, ಖಾಸಗಿ ಕಂಪನಿಯಲ್ಲಿ ದುಡಿಯುವ ಮಕ್ಕಳಿದ್ದಾರೆ. ಎಂಜಿನಿಯರ್ ಆಗುವ ಸಾಮರ್ಥ್ಯ ನನಗಿದೆ’ ಹೀಗೆ ತನ್ನ ಕಥೆಯನ್ನು ಹೇಳತೊಡಗುತ್ತಾರೆ ಆ ಮುಂಬಯಿ ವಾಸಿ.
’ನನ್ನ ಹೆಂಡತಿ ಗರ್ಭಪಾತದಿಂದ ಬಳಲುತ್ತಿದ್ದಳು. ಒಂದು ದಿನ ರಾತ್ರಿ ಹೊಟ್ಟೆಯಲ್ಲಿ ತೀವ್ರ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಹೊರಟಾಗ ಒಂದೇ ಒಂದು ಕ್ಯಾಬ್ ಆಗಲಿ, ಟ್ಯಾಕ್ಸಿಯಾಗಲಿ ನಮಗಾಗಿ ನಿಲ್ಲಲಿಲ್ಲ. ಈ ಘಟನೆ ನನ್ನನ್ನು ತೀವ್ರವಾಗಿ ಬಾಧಿಸಿತು’ ಎನ್ನುವ ಆ ವ್ಯಕ್ತಿ ಅದೇ ನೋವಿನಲ್ಲಿ ತಿಂಗಳಿಗೆ 65 ಸಾವಿರ ರೂಪಾಯಿ ಸಂಬಳ ತಂದು ಕೊಡುತ್ತಿದ್ದ ಇಂಜಿನಿಯರ್ ವೃತ್ತಿಯನ್ನು ಬಿಟ್ಟು ಟ್ಯಾಕ್ಸಿ ಡ್ರೈವರ್ ಆದರು.
ಸಂಕಷ್ಟದಲ್ಲಿರುವವರಿಗೆ ಎಲ್ಲಾ ಕಾಲದಲ್ಲೂ ಲಭ್ಯವಿರಬೇಕು ಎಂಬ ಉದ್ದೇಶದಿಂದಲೇ ಟ್ಯಾಕ್ಸಿ ಓಡಿಸಲಾರಂಭಿಸಿದರು. ರಾತ್ರಿ ಹಗಲೆನ್ನದೇ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಇವರು ಲಭ್ಯರಾಗುತ್ತಾರೆ. ಎಲ್ಲರಿಗೂ ತಮ್ಮ ಕಾರ್ಡ್ ನೀಡಿದ್ದಾರೆ. ಒಂದು ದೂರವಾಣಿ ಕರೆ ಮಾಡಿದರೆ ಸಾಕು ಸಂಕಷ್ಟದಲ್ಲಿರುವವರ ಸಹಾಯಕ್ಕೆ ಇವರು ಟ್ಯಾಕ್ಸಿ ಸಮೇತ ರೆಡಿ.
2005ರ ನೆರೆ ಸಂದರ್ಭದಲ್ಲೂ, 26/11ರ ಮುಂಬಯಿ ದಾಳಿಯ ವೇಳೆಯಲ್ಲೂ ಇವರ ಸೇವೆ ನಿರಂತರವಾಗಿ ನಡೆದಿದೆ.
ಇಂಜಿನಿಯರ್ ಆಗಿ 65 ಸಾವಿರ ಸಂಪಾದನೆ ಮಾಡುತ್ತಿದ್ದ ಇವರು ಈಗ ಗಳಿಸುತ್ತಿರುವುದು ಕೇವಲ 10 ಸಾವಿರ ಮಾತ್ರ. ಆದರೂ ಅವರಿಗೆ ತನ್ನ ಕಾರ್ಯದಲ್ಲಿ ಸಂತೃಪ್ತಿಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.