ಬೆಳ್ತಂಗಡಿ : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಟ್ಪಾ ಕಾಯ್ದೆಯನ್ನು ವಿರೋಧಿಸಿ ಫೆ. 9 ರಂದು ಮಂಗಳೂರಿನಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದ.ಕ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಧ್ಯಕ್ಷ ಬಿ. ಎಂ. ಭಟ್ ತಿಳಿಸಿದ್ದಾರೆ.
ಅವರು ಶುಕ್ರವಾರ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಬೀಡಿ ಹಾಗೂ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಮುಂದಾಗಿರುವ ಸರಕಾರ ಲಕ್ಷಾಂತರ ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪರ್ಯಾಯ ಬದುಕುವ ದಾರಿಯನ್ನು ಅವರಿಗೆ ತೋರುತ್ತಿಲ್ಲ. ಜಿಲ್ಲೆಯಲ್ಲಿ ಬೀಡಿ ಉದ್ಯಮ ಸ್ಥಗಿತಗೊಂಡರೆ ಇಲ್ಲಿನ ಆರ್ಥಿಕತೆಯೇ ಕುಸಿಯಲಿದೆ. ಲಕ್ಷಾಂತರ ಜನರು ಬದುಕನ್ನು ಕಳೆದುಕೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಸರಕಾರವನ್ನು ಎಚ್ಚರಗೊಳಿಸಲು ಬೃಹತ್ ಪ್ರತಿಭಟನೆಯನ್ನು ಹಲವು ಸಂಘಟನೆಗಳ ಬೆಂಬಲದೊಂದಿಗೆ ಆಯೋಜಿಸಲಾಗುತ್ತಿದೆ. ಈ ಹೋರಾಟ ಸಿ.ಐ.ಟಿ. ಯು., ಎ.ಐ.ಟಿ.ಯು.ಸಿ., ಬಿ.ಎಂ.ಎಸ್., ಎಚ್.ಎಂ.ಎಸ್ ಹಾಗೂ ಬೀಡಿ ಗುತ್ತಿಗೆದಾರರ ಸಂಘದ ಜಂಟಿ ಆಶ್ರಯದಲ್ಲಿ ನಡೆಯುತ್ತಿದ್ದು ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಎರಡು ಲಕ್ಷದಷ್ಟು ಬೀಡಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಂಬಾಕು ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೆ ಅದರಿಂದ ಅಡಿಕೆ ಬೆಳೆಗಾರರಿಗೂ ತೊಂದರೆಯಾಗಲಿದ್ದು ಈ ಬಗ್ಗೆಯೂ ಸರಕಾರ ಗಮನ ಹರಿಸಬೇಕಾಗಿದೆ. ಕಾಯ್ದೆಯಿಂದಾಗಿ ಆಗುವ ಸಮಸ್ಯೆಗಳ ಬಗ್ಗೆ ಶಾಸಕರುಗಳಿಗೆ, ಸಚಿವರುಗಳಿಗೆ ಹಾಗೂ ಸಂಸದರುಗಳಿಗೆ ಈಗಾಗಲೇ ಮನವಿ ಸಲ್ಲಿಸಿ ಕಾರ್ಮಿಕರ ಹಿತ ಕಾಯುವಂತೆ ಕೇಳಿ ಕೊಂಡಿದ್ದೇವೆ. ಆದರೆ ಯಾರೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದ ಅವರು ಇದು ಬದುಕುವುದಕ್ಕಾಗಿನ ಹೋರಾಟವಾಗಿದೆ. ಮೊದಲು ಬೀಡಿಯನ್ನು ಅವಲಂಬಿಸಿರುವ ಕಾರ್ಮಿಕರಿಗೆ ಬದಲಿ ವ್ಯವಸ್ಥೆ ಮಾಡಿ ಬಳಿಕ ತಂಬಾಕು ನಿಷೇಧಕ್ಕೆ ಮುಂದಾಗಲಿ. ತಾಲೂಕಿನಿಂದ ಹೋರಾಟದಲ್ಲಿ ಸುಮಾರು ಮುವತ್ತು ಸಾವಿರ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರುಗಳಾದ ವಸಂತ ನಡ, ಈಶ್ವರಿ, ನೆಬಿಸ, ರೋಹಿಣಿ, ಜಯರಾಮ ಮಯ್ಯ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.