ಬೆಳ್ತಂಗಡಿ : ಸಂಸ್ಕೃತದ ಆಳವಾದ ಅಧ್ಯಯನ ಆಧುನಿಕ ತಂತ್ರಜ್ಞಾನ ಕಲಿಯುವಿಕೆಗೆ ಸಹಕಾರಿ ಎಂಬುದರ ಅರಿವನ್ನು ಸಂಸ್ಕೃತ ವಿದ್ವಾಂಸರಲ್ಲಿ, ಪ್ರಾಧ್ಯಾಪಕರಲ್ಲಿ, ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾಗಿದೆ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯ ಶಾಸ್ತ್ರ ಅಧ್ಯಯನದ ಡೀನ್ ಡಾ| ಶ್ರೀನಿವಾಸ ವರಖೇಡಿ ಹೇಳಿದರು.ಅವರು ಶುಕ್ರವಾರ ಉಜಿರೆ ಎಸ್ಡಿಎಂ ಕಾಲೇಜಿನ ಸಂಸ್ಕೃತಿ ವಿಭಾಗದ ಆಶ್ರಯದಲ್ಲಿ ನಡೆಯುವ ಸಂಸ್ಕೃತ ಕಲಿಕೆ ಮತ್ತು ಭೋಧನೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪಾತ್ರ ಎಂಬ ವಿಷಯದಲ್ಲಿನ ಎರಡು ದಿನ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಪ್ಪತ್ತು ವರ್ಷಗಳ ಹಿಂದೆ ಸಂಸ್ಕೃತ ಮತ್ತು ಕಂಪ್ಯೂಟರ್ನ ಸಂಬಂಧದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಆ ಬಳಿಕ ಪತ್ರಿಕೆಗಳಲ್ಲಿ ಈ ಬಗ್ಗೆ ಲೇಖನಗಳು ಪ್ರಕಟವಾದವು. ನಂತರ ಅನೇಕ ವಿದ್ವಾಂಸರು ಒಂದೆಡೆ ಸೇರಿ ಚರ್ಚೆ ನಡೆಸಿದ ಪರಿಣಾಮ ಇದೀಗ ಅದರ ಮಹತ್ವದ ಬಗ್ಗೆ ಅರಿವಾಗುತ್ತಿದೆ. ಸಂಸ್ಕೃತದ ಅಧ್ಯಯನ ತಂತ್ರಜ್ಞಾನದ ಅರಿವನ್ನು ಮೂಡಿಸುತ್ತದೆ ಎಂಬ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಹಾಗೆಯೇ ಕಂಪ್ಯೂಟರ್, ಸೆಲ್ಫೋನ್ಗಳನ್ನು ಉಪಯೋಗಿಸಿಕೊಂಡು ತಂತ್ರಜ್ಞಾನ ಮತ್ತು ಸಂಸ್ಕೃತದ ಸಂಬಂಧ, ಮಹತ್ವವನ್ನು ತಿಳಿಸಲೂ ಸಾಧ್ಯವಿದೆ. ಎಂದ ಅವರು ಕಂಪ್ಯೂಟರ್ ಜನಕ ಚಾರ್ಲ್ಸ್ ಬಬ್ಬೇಜ್ ಅಲ್ಲ. ಅದು ಸಂಸ್ಕೃತದ ವ್ಯಾಕರಣ ರಚಿಸಿದ ಪಾಣಿನಿ ಎಂಬುದು ಅಧ್ಯಯನಕ್ಕೆ ಯೋಗ್ಯವಾದ ವಿಚಾರ ಎಂದರು.
ಅಧ್ಯಕ್ಷತೆಯನ್ನುವಹಿಸಿದ್ದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ.ಯಶೋವರ್ಮ ಅವರು, ಇಂದು ಶಿಕ್ಷಣದಲ್ಲಿ ತಂತ್ರಜ್ಞಾನದ ಉಪಯೋಗ ಪವರ್ಪಾಯಿಂಟ್ ತನಕ ಮಾತ್ರ ಇದ್ದು ಅದರ ನಂತರ ಮುಂದುವರಿಯದಿರುವುದು ಆಶ್ಚರ್ಯ ಉಂಟುಮಾಡಿದೆ. ನಮ್ಮಲ್ಲಿರುವ ಲಾಪ್ಟಾಪ್, ಮೊಬೈಲುಗಳ ಕಾರ್ಯವೈಖರಿಯ ಬಗ್ಗೆ ನಮಗೆ ಶೇ. ೫ ರಷ್ಟು ಮಾತ್ರ ಗೊತ್ತು. ಯೂ ಟ್ಯೂಬ್ನಲ್ಲಿ ಬರುವ ಮಾಹಿತಿಯುಕ್ತ ವಿಚಾರಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಜ್ಞಾನಶೇಖರಣೆ ಮಾಡಬಹುದಾಗಿದೆ. ತರಗತಿಗಳಲ್ಲಿ ನಡೆಯುವ ಪಾಠಗಳನ್ನು ಅಂತರ್ಜಾಲದಲ್ಲಿ ಹಾಕಿದರೆ ಅದನ್ನು ಪದೇ ಪದೇ ಕೇಳಲು ಸಾಧ್ಯ ಇದರಿಂದ ನಮ್ಮ ಅರಿವಿನ ಮಟ್ಟ ಹೆಚ್ಚಾಗಬಲ್ಲುದು ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೋ. ಮೋಹನನಾರಾಯಣ ಉಪಸ್ಥಿತರಿದ್ದರು. ವಿಟ್ಲ ಮೈತ್ರೇಯಿ ಗುರುಕುಲಮ್ನ ಪ್ರಾಚಾರ್ಯ ವಿದ್ವಾನ್ ಉಮೇಶ್ ಹೆಗ್ಡೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ| ಶ್ರೀಧರ್ ಭಟ್ ಸ್ವಾಗತಿಸಿದರು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಪ್ರಸನ್ನ ಕುಮಾರ್ ಐತಾಳ್ ವಂದಿಸಿದರು.
ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ಸಂಸ್ಕೃತ ಮತ್ತು ಕಂಪ್ಯೂಟರ್ ಬಗ್ಗೆ ಬೆಂಗಳೂರು ಎಮ್ಎಎಸ್ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ| ವನಿತಾ ರಾಮಸ್ವಾಮಿ ಅವರು ವಿಚಾರ ಮಂಡಿಸಿದರು. ಎರಡನೇ ಗೋಷ್ಠಿಯಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಡಾ| ತಿರುಮಲ ಪಿ. ಕುಲಕರ್ಣಿ ಅವರು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಜ್ಞಾನದ ಮೂಲಕ ಸಂಸ್ಕೃತದ ಭೋಧನೆ ಮತ್ತು ಕಲಿಕೆಯನ್ನು ಸರಳ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ವಿ.ವಿ. ಯ ಡಾ| ಎಚ್.ಆರ್.ಲಕ್ಷ್ಮೀನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಗೋಷ್ಠಿಯಲ್ಲಿ ಸಂಸ್ಕೃತ ಕಲಿಕೆ ಬೋಧನೆಗೆ ಬೇಕಾದ ಸಲಕರಣೆಗಳು ಎಂಬ ವಿಚಾರವಾಗಿ ಮುಂಬಯಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಡಾ| ಕೆ.ಮಹೇಶ್ ಮಾತನಾಡಿದರು. ನಾಲ್ಕನೇ ಗೋಷ್ಠಿಯಲ್ಲಿ ವಿದ್ವಾಂಸರು ಹಾಗು ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಸಂಸ್ಕೃತ ನಿವೃತ್ತ ಪ್ರಾಧ್ಯಾಪಕ ಡಾ| ಶ್ರೀರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪಿಪಿಇಸಿಯ ಪ್ರಾಚಾರ್ಯ ಡಾ| ಟಿ.ಎಸ್. ರಮೇಶ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.