ಬೆಳ್ತಂಗಡಿ : ಪಾಶ್ಚಾತ್ಯ ನಾಗರಿಕತೆ, ಮಾಧ್ಯಮಗಳ ಹಾವಳಿ ಯುವಜನರಲ್ಲಿ ಧಾರ್ಮಿಕತೆಯ ಬಗ್ಗೆ ವಿಕೃತ ಹಾಗು ಔದಾಸೀನ್ಯ ಮನೋಭಾವಕ್ಕೆ ಕಾರಣವಾಗಿದೆ. ಧರ್ಮವನ್ನು ಉಳಿಸುವಲ್ಲಿ ದೇವಾಲಯಗಳ ಅನಿವಾರ್ಯತೆ ಇದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ನುಡಿದರು. ಅವರು ಬುಧವಾರ ಗೇರುಕಟ್ಟೆ ಸನಿಹದ ನಾಳ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪಾಶ್ಚಾತ್ಯರು ನಮ್ಮ ಸಂಸ್ಕೃತಿಯ ಅಧ್ಯಯನ ಮಾಡಲು ಭಾರತಕ್ಕೆ ಬರುತ್ತಿದ್ದಾರೆ. ಅಧ್ಯಯನದ ಪ್ರಭಾವದಿಂದ ಅವರು ನಮ್ಮವರೇ ಆಗುತ್ತಿದ್ದಾರೆ. ಆದರೆ ನಾವು ಅವರ ನಾಗರೀಕತೆಯನ್ನು ಅನುಸರಿಸುತ್ತಿದ್ದೇವೆ. ದೇವರನ್ನು ಟೀಕೆ ಮಾಡುವ ಬುದ್ದಿಜೀವಿಗಳ ಗುಂಪೊಂದು ಸೃಷ್ಟಿಯಾಗುತ್ತಿದೆ. ನಮ್ಮ ಧರ್ಮದ ಉಳಿವು ನಮ್ಮದೇ ಕೈಯಲ್ಲಿದೆ. ಸ್ವಧರ್ಮದಿಂದ ವಿಚಲಿತರಾಗದಿದ್ದಲ್ಲಿ ಭಗವಂತನ ಅನುಗ್ರಹ ನಮ್ಮ ಮೇಲೆ ಸದಾ ಇರುತ್ತದೆ ಎಂದು ಆಶೀರ್ವದಿಸಿದರು.
ಬೆಳ್ತಂಗಡಿ ವಕೀಲ ಧನಂಜಯ ರಾವ್ ಮಾತನಾಡಿ, ನಮ್ಮ ಕರ್ತವ್ಯವನ್ನು ನಾವೇ ನಿಭಾಯಿಸಬೇಕು. ಮಕ್ಕಳಿಗೆ ಸಂಸ್ಕಾರ ನೀಡುವುದು ಅತೀ ಮುಖ್ಯ ಎಂದರು. ಅಧ್ಯಕ್ಷತೆಯನ್ನು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿಗಳಾದ ಯೋಗೀಶ್ ಕುಮಾರ್ ಕಡ್ತಿಲ, ಉಮೇಶ್ ಶೆಟ್ಟಿ, ವಿದ್ಯಾಧರ ಜೈನ್ ಉಪ್ಪಿನಂಗಡಿ, ಮಡಂತ್ಯಾರು ಯಕ್ಷಕೂಟ ಬಳಗದ ಗೌರವಾಧ್ಯಕ್ಷ ರಾಮಣ್ಣ ಪೂಜಾರಿ ಕೋಟೆಗುತ್ತು, ಕೂಡಬೆಟ್ಟು ಶ್ರೀ ಸದಾಶಿವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ, ದೇವಳ ಅಭಿವೃದ್ಧಿ ಸಮಿತಿ ಸದಸ್ಯ ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಉದ್ಯಮಿ ಹೇಮಂತ ಕುಮಾರ್ ದಂಪತಿಯನ್ನು ಹಾಗು ಸುಬ್ರಹ್ಮಣ್ಯ ದೇವಳದ ನೌಕರ ಜಯರಾಮ ರಾವ್ ಅವರನ್ನು ಸಮ್ಮಾನಿಸಲಾಯಿತು. ಅಭಿವೃದ್ದಿ ಸಮಿತಿ ಕಾರ್ಯದರ್ಶಿಗಳಾದ ರಾಘವ ಹೆಚ್. ಸ್ವಾಗತಿಸಿ, ಅಶೋಕ್ ಆಚಾರ್ಯ ವಂದಿಸಿದರು. ಉಪನ್ಯಾಸಕ ದಿವಾಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.