ಬೆಳ್ತಂಗಡಿ: ತಾಲೂಕಿನ ಗಡಿಯಲ್ಲಿರುವ ಕುಗ್ರಾಮ ಪಾಲೇದು, ಇನೂ ಮೂಲಭೂತ ಸೌಲಭ್ಯಗಳು ಈ ಊರಿಗೆ ತಲುಪಿಯೇ ಇಲ್ಲ, ತಮ್ಮ ಊರಿಗೂ ಒಂದು ಸರಿಯಾದ ರಸ್ತೆ ಬೇಕು, ಇತರೆ ಸೌಲಭ್ಯಗಳು ಬೇಕು ಎಂಬ ಬೇಡಿಕೆಯನ್ನು ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರು ಜನಪ್ರತಿನಿಧಿಗಳ ಮುಂದೆ ತರುತ್ತಿದ್ದಾರೆ. ಆದರೆ ಇನ್ನೂ ಅದು ಯಾವುದೂ ಸರಿಯಾಗಿ ಈಡೇರಿಕೆಯಾಗದ ಹಿನ್ನಲೆಯಲ್ಲಿ ಪಾಲೇದು ಅಭಿವೃದ್ದಿ ಸಮಿತಿ ಎಂಬ ಸಂಘಟನೆ ರಚಿಸಿಕೊಂಡು ಮುಂದಿನ ತಾಲೂಕು ಪಂಚಾಯತು, ಜಿಲ್ಲಾ ಪಂಚಾಯತು ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ತಾಲೂಕಿನ ತಣ್ಣೀರು ಪಂತ ಗ್ರಾಮ ಪಂಚಾಯತು ವ್ಯಾಪ್ತಿಯ ಪಾಲೇದುವಿನಲ್ಲಿ ಈಗಾಗಲೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ನಾಗರಿಕರು ತಮಗೆ ಸರಿಯಾದ ಭರವಸೆ ಸಿಗದ ಹೊರತು ಮತದಾನವನ್ನೇ ಮಾಡುವುದಿಲ್ಲ ಎಂಬ ದೃಢ ನಿರ್ಧಾರದಲ್ಲಿದ್ದಾರೆ. ಕುದ್ರಡ್ಕದಿಂದ ಅಂಗಸ್ಥಳದ ವರೆಗೆ ರಸ್ತೆ ಅಭಿವೃದ್ದಿಯಾಗಬೇಕು. ಅಲ್ಲಿರುವ ಮುಳುಗು ಸೇತುವೆಯ ಬದಲಿಗೆ ಹೊಸ ಸೇತುವೆ ಹಾಗೂ ನೆರೆಯ ಬಂಟ್ವಾಳ ತಾಲೂಕಿಗೆ ಸಂಪರ್ಕ ಕಲ್ಪಸುವ ರಸ್ತೆಯಲ್ಲಿರುವ ಸೇತುವೆ ನಿರ್ಮಾಣವಾಗಬೇಕು, ಪಡಿತರ ಅಂಗಡಿ ತೆರೆಯಬೇಕು, ಶಾಲೆಗೆ ಶಿಕ್ಷಕರ ನೇಮಕಾತಿಯಾಗಬೇಕು ಎಂಬುದು ಇಲ್ಲಿನ ಜನರ ಬಹುಮುಖ್ಯ ಬೇಡಿಕೆಯಾಗಿದೆ. ಬೆಳ್ತಂಗಡಿ ತಾಲೂಕು ಪಂಚಾಯತು ಅಧ್ಯಕ್ಷರ ಮನೆಯೂ ಇಲ್ಲಿಯೇ ಆಗಿದ್ದು ತಾ. ಪಂ. ಅಧ್ಯಕ್ಷರ ಊರಿನ ನಾಗರಿಕರೇ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ಕುದ್ರಡ್ಕ- ಪಾಲೇದು-ಅಂಗಸ್ಥಳ ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಲ್ಲಿ ಕಿತ್ತುಹೋಗಿರುವ ಡಾಮರು ಕೆಲವೆಡೆ ಹಾಕಿರುವ ಡಾಮರಿನ ಕುರುಹುಗಳೇ ಇಲ್ಲವಾಗಿದೆ. ಪಾಲೇದುವಿನಲ್ಲಿ ಕಳೆದೆರಡು ವರ್ಷಗಳಲ್ಲಿ ಒಂದಿಷ್ಟು ದೂರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು ಇದರ ಹೊರತಾಗಿ ಎಲ್ಲಿಯೂ ರಸ್ತೆ ಸರಿಯಾಗಿಲ್ಲ. ಪಾಲೇದುವಿನಿಂದ ಅಂಗಸ್ಥಳದ ವರೆಗೆ ಸರಿಯಾದ ರಸ್ತೆಯೇ ಇಲ್ಲವಾಗಿದೆ. ಮಳೆಗಾಲದಲ್ಲಂತೂ ಇಲ್ಲಿ ವಾಹನ ಸಂಚಾರ ಅಸಾಧ್ಯದ ವಿಚಾರವಾಗಿದೆ. ಅಂಗಸ್ಥಳ ಎಂಬಲ್ಲಿ ದೊಡ್ಡ ತೋಡೊಂದು ಹರಿಯುತ್ತಿದ್ದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ತಾತ್ಕಾಲಿಕ ಮುಳುಗು ಸೇತುವೆಯೇ ಇದನ್ನು ದಾಟಲು ಜನರಿಗೆ ಆಧಾರ ಮಳೆಗಾಲದಲ್ಲಿ ಇದರ ಮೇಲಿನಿಂದ ಸದಾ ನೀರು ಹರಿಯುತ್ತಿರುತ್ತದೆ.
ಮಳೆ ಹೆಚ್ಚಾದರೆ ಅದನ್ನು ದಾಟುವುದೇ ಅಸಾಧ್ಯ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಹತ್ತಾರು ಕಿಲೋಮೀಟ್ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ರಸ್ತೆ ಸರಿಯಿಲ್ಲದ ಕಾರಣದಿಂದ ಬಸ್ ಸೇರಿದಂತೆ ಯಾವುದೇ ವಾಹನಗಳು ಇಲ್ಲಿ ಜನರ ಓಡಾಟಕ್ಕೆ ಲಭ್ಯವಿಲ್ಲವಾಗಿದ್ದು ಸ್ವಂತ ವಾಹನವಿಲ್ಲದವರಿಗೆ ಕಾಲ್ನಡಿಗೆಯೇ ಗತಿಯಾಗಿದೆ. ಮಳೆಗಾಲದಲ್ಲಂತೂ ರಿಕ್ಷಾಗಳೂ ಈ ರಸ್ತೆಯಲ್ಲಿ ಬರಲು ಸಿದ್ದರಿರುವುದಿಲ್ಲ ಬಂದರೂ ಹೆಚ್ಚು ಬಾಡಿಗೆ ಕೇಳುತ್ತಾರೆ ಇದನ್ನು ನೀಡುವ ಶಕ್ತಿ ಇಲ್ಲಿನ ಬಡ ಜನರಿಗಿಲ್ಲ.
ಇಲಿನ ಜನರು ಪಡಿತರ ಪಡೆಯಲು ಕುದ್ರಡ್ಕಕ್ಕೆ ಕೆಲವರು ದೂರದ ಕಲ್ಲೇರಿಗೆ ಹೋಗಬೇಕಾಗಿದೆ. ಅಲ್ಲಿಂದ ಪಡಿತರ ಸಾಮಾನುಗಳನ್ನು ತರುವುದೇ ಮಳೆಗಾಲದಲ್ಲಿ ಸಾಹಸದ ಕಾರ್ಯವಾಗುತ್ತದೆ. ಪಾಲೇದುವಿನಲ್ಲಿ ಒಂದು ಪಡಿತರ ಅಂಗಡಿ ಬೇಕು ಎಂಬ ಬೇಡಿಕೆಯೂ ಬಹಳ ಹಿಂದಿನದು ಆದರೆ ಅದರ ಬಗ್ಗೆ ಯರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಪಾಲೇದು ಸರಕಾರಿ ಶಾಲೆಯಲ್ಲಿ ಹಿಂದೆ 7 ನೇ ತರಗತಿಯ ವರೆಗೆ ಇತ್ತು. ಆದರೆ ಈಗ ಇಲ್ಲಿ ಕೇವಲ 5 ನೆಯ ತರಗತಿಯವರೆಗೆ ಮಾತ್ರ ಶಾಲೆಯಿದೆ. ಶಿಕ್ಷಕರು ಇಲ್ಲವಾಗಿದ್ದು ಇರುವ ಒರ್ವ ಶಿಕ್ಷಕನಿಗೆ ಎರಡು ಶಾಲೆಗಳ ಜವಾಬ್ದಾರಿ ಅವರು ವಾರದಲ್ಲಿ ಒಂದೆರಡು ದಿನ ಮಾತ್ರ ಇಲ್ಲಿರುತ್ತಾರೆ. ಶಿಕ್ಷಕರ ಕೊರತೆಯಿಂದಾಗಿ ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಮಕ್ಕಳ ಕೊರತೆಯ ನೆಪದಲ್ಲಿ ಶಾಲೆಯನ್ನು ಮುಚ್ಚಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ನಮ್ಮ ಶಾಲೆಗೂ ಶಿಕ್ಷಕರ ನೇಮಕಾತಿಯಾಗಬೇಕು ಶಾಲೆ ಮೊದಲಿನಂತಾಗಬೇಕು ಎಂಬುದು ಜನರ ಬೇಡಿಕೆಯಾಗಿದೆ.
ಚುನಾವಣೆ ಬಹಿಷ್ಕರಿಸುವುದಾಗಿ ಮೊದಲೇ ಪ್ರಕಟಿಸಲಾಗಿತ್ತು. ಆಗ ಬಂದ ತಹಶೀಲ್ದಾರರು ಎಲ್ಲ ಪರಿಹರಿಸುತ್ತೇನೆ ಎಂದು ಹೇಳಿ ಹೋಗಿದ್ದರು. ಆ ಬಳಿಕ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಜನರನ್ನು ಸಂಪರ್ಕಿಸುವ ಕಾರ್ಯ ಮಾಡಿಲ್ಲ. ಆದರಿಂದ ಈ ಬಾರಿ ಚುನಾಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸದಿದ್ದಲ್ಲಿ ಮುಂದೆಯೂ ಇದೇ ರೀತಿಯ ಹೋರಾಟ ಮಾಡಬೇಕಾಗಲಿದೆ. – ಶ್ಯಾಮ, ಅಧ್ಯಕ್ಷರು, ಪಾಲೇದು ಅಭಿವೃದ್ದಿ ಸಮಿತಿ.
ಕಳೆದ ಐದು ವರ್ಷದ ಅವಧಿಯಲ್ಲಿ ವಿವಿಧ ಮೂಲಗಳಿಂದ ಪಾಲೇದು ಪರಿಸರದ ಅಭಿವೃದ್ದಿಗಾಗಿ ಸಾಧ್ಯವಾದಷ್ಟು ಅನುದಾನಗಳನ್ನು ತರಲು ಪ್ರಯತ್ನಿಸಿದ್ದೇನೆ. ಸುಮಾರು ೨೦ ಲಕ್ಷದಷ್ಟು ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆದಿದೆ. ತಾಲೂಕು ಪಂಚಾಯತು ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಸಾಕಷ್ಟು ಪರಿಮತಿಗಳಿವೆ ಇರುವ ಅನುದಾನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇನ್ನೂ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಬೇಕಾಗಿದೆ. ಅದಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಕೇವಲ ತಾಲೂಕು ಪಂಚಾಯತಿನಿಂದ ಅದೆಲ್ಲ ಸಾಧ್ಯವಾಗುವುದಿಲ್ಲ.- ಜಯಂತಿ ಪಾಲೇದು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.