ಬೈಂದೂರು : ಪೊಲೀಸರು ಮತ್ತು ಜನರ ನಡುವೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡುವ ದೃಷ್ಟಿಯಿಂದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ೧೩ ಗ್ರಾಮಗಳಲ್ಲಿ ಪೊಲೀಸ್ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುವುದು ಎಂದು ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹೇಳಿದರು.
ಅವರು ಭಾನುವಾರ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಿಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆದಿದ್ದರೂ ಬಳಿಕ ಸಾರ್ವಜನಿಕರ ಸಹಕಾರದಿಂದ ಪುನ: ಶಾಂತಿ ಸುವ್ಯವಸ್ಥೆ ನೆಲೆಸಿದೆ. ಕೇವಲ ಪೊಲೀಸರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸಾಧ್ಯವಿಲ್ಲ. ಗ್ರಾಮದ ಜನರು ಪೊಲೀಸರೊಂದಿಗೆ ಸಹಕರಿಸಿದಾಗ, ತಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದಾಗ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.
ಗಂಗೊಳ್ಳಿಯಲ್ಲಿ ಸುಸಜ್ಜಿತ ಪೊಲೀಸ್ ಹೊರಠಾಣೆ ಆರಂಭಿಸುವ, ಸಿಬ್ಬಂದಿ ಕೊರತೆಯನ್ನು ನೀಗಿಸಿ ಠಾಣೆಗೆ ಸಾಕಷ್ಟು ಸಿಬ್ಬಂದಿಗಳನ್ನು ನೇಮಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು.
ತಾಪಂ ಸದಸ್ಯ ಎಚ್.ಮಂಜಯ್ಯ ಶೆಟ್ಟಿ, ಗಂಗೊಳ್ಳಿಯ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಸಿಡಬ್ಲ್ಯುಸಿಯ ಅರುಣಾಚಲ ಮಯ್ಯ, ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜನಾರ್ದನ, ಗಂಗೊಳ್ಳಿಯ ಉದ್ಯಮಿ ಎಂ.ಎಂ.ಸುವರ್ಣ, ಗಂಗೊಳ್ಳಿ ಗ್ರಾಪಂ ಸದಸ್ಯ ಯೂನಿಸ್ ಸಾಹೇಬ್, ದುರ್ಗರಾಜ್ ಪೂಜಾರಿ, ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಸಲಹೆ ಸೂಚನೆ ನೀಡಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಸ್ವಾಗತಿಸಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.