ಬೈಂದೂರು: ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಣದ ಮೂಲಕ ಭಾಷೆ ಬೆಳೆಯಲು ಸಾಧ್ಯ ಎಂದು ಮನಗಂಡು ಪ್ರಾಥಮಿಕ ಶಾಲೆಗಳಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಯಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಪಿಯುಸಿಯಲ್ಲಿ ಕೊಂಕಣಿಯನ್ನು ಕಲಿಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಭಾಷೆ ಅಧ್ಯಯನಕ್ಕಾಗಿ ಕೊಂಕಣಿ ಅಧ್ಯಯನ ಪೀಠ ಆರಂಭಕ್ಕೆ ಸರಕಾರ ಹಸಿರು ನಿಶಾನೆ ತೋರಿಸಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಹೇಳಿದರು.
ಅವರು ಭಾನುವಾರ ಖಂಬದಕೋಣೆಯ ನಿರ್ಮಲ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ರಂಗ ತರಂಗ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಕೊಂಕಣಿ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಕಳೆದ ಒಂದು ವರ್ಷದಲ್ಲಿ ಸುಮಾರು 25 ಹೊಸ ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಈ ಪೈಕಿ 15 ಪುಸ್ತಕಗಳು ಹೊಸ ಲೇಖಕರದ್ದಾಗಿದೆ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಮತ್ತು ಮಾರಾಟ ಮಾಡುವ ಮೊಬೈಲ್ ಕೊಂಕಣಿ ಬಜಾರ್ ಆರಂಭಿಸಲಾಗಿದ್ದು, ಈ ಮೂಲಕ ತಿಂಗಳಿಗೆ ಸರಾಸರಿ ಒಂದು ಲಕ್ಷ ರೂ. ಮೌಲ್ಯದ ಪುಸ್ತಕ ಮೊದಲಾದವುಗಳನ್ನು ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದರು.
ಹಿಂದು ಹಾಗೂ ಕ್ರೈಸ್ತ ಧರ್ಮದವರ ಮಾತೃ ಭಾಷೆ ಕೊಂಕಣಿ. ದೇಶದ 5 ರಾಜ್ಯಗಳಲ್ಲಿ ಐದು ಲಿಪಿಗಳನ್ನು ಹೊಂದಿರುವ ಕೊಂಕಣಿಯು ರಾಷ್ಟ್ರೀಯ ಭಾಷೆಯಾಗಿದೆ. ದೇಶದ 22 ರಾಷ್ಟ್ರೀಯ ಭಾಷೆಗಳ ಪೈಕಿ ಕೊಂಕಣಿಯೂ ಒಂದಾಗಿದ್ದು, ಕೇಂದ್ರ ಸರಕಾರ ಕೊಂಕಣಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಕೊಂಕಣಿ ಭಾಷೆಗೆ ದೊಡ್ಡ ಇತಿಹಾಸವಿದ್ದು, ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೊಂಕಣಿ ಭಾಷಿಗರು ಆಯಾ ಪ್ರದೇಶದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಕೊಂಕಣಿ ಕಲಿಕೆಗೆ ಅವಕಾಶ ಮಾಡಿಕೊಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಕೊಂಕಣಿ ಭಾಷಿಗರು ಕೊಂಕಣಿ ಕಲಿಕೆಗೆ ಮಕ್ಕಳನ್ನು ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.
ರಾಯಚೂರಿನ ಲೆಕ್ಕಪರಿಶೋಧಕ ರಾಮಚಂದ್ರ ಪ್ರಭು ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳದ ಉದ್ಯಮಿ ನಿತ್ಯಾನಂದ ಪೈ ಶುಭಾಶಂಸನೆಗೈದರು. ಇದೇ ಸಂದರ್ಭ ರಂಗಭೂಮಿ ನಿರ್ದೇಶಕ ರವೀಂದ್ರ ಕೃಷ್ಣ ಪ್ರಭು ಶಿರಾಲಿ, ಸಂಗೀತ ನಿರ್ದೇಶಕ ಶ್ರೀನಿವಾಸ ಪ್ರಭು ಉಪ್ಪುಂದ ಮತ್ತು ನಟ ನಿರ್ದೇಶಕ ಸಂತೋಷ ಶೆಣೈ ಮಂಗಳೂರು ಇವರಿಗೆ ರಂಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿದ್ಧಾಪುರದ ಸಂಯುಕ್ತ ಜಿಎಸ್ಬಿ ಸೇವಾ ಸಮಿತಿ ಅಧ್ಯಕ್ಷ ಡಿ.ಗೋಪಿನಾಥ ಕಾಮತ್, ಬೈಂದೂರಿನ ಉದ್ಯಮಿ ವೆಂಕಟೇಶ ಕಿಣಿ, ಉಪ್ಪುಂದ ಜಿಎಸ್ಬಿ ಯುವಕ ಸಂಘದ ಅಧ್ಯಕ್ಷ ನಾಗೇಶ ಭಟ್, ಬೆಣ್ಗೆರೆ ಶ್ರೀ ನಾಗದೇವಸ್ಥಾನದ ಸದಸ್ಯ ಹರೀಶ ಮೇಸ್ತ ಗುಜ್ಜಾಡಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಎಂ.ಎಂ.ಮೀರನ್, ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ, ರಂಗ ತರಂಗದ ಕಾರ್ಯದರ್ಶಿ ಶಶಿಧರ ಶೆಣೈ, ಸಂಚಾಲಕ ಶ್ರೀಶ ಭಟ್ ಉಪಸ್ಥಿತರಿದ್ದರು.
ರಂಗ ತರಂಗದ ಅಧ್ಯಕ್ಷ ಓಂಗಣೇಶ ಉಪ್ಪುಂದ ಸ್ವಾಗತಿಸಿ, ವಂದಿಸಿದರು. ಮಂಜುನಾಥ ಮಹಾಲೆ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.