ಮಂಗಳೂರು : ಹಲವು ದಾಖಲೆ, ಮೈಲುಗಳನ್ನು ನೆಡುತ್ತಾ ಇತಿಹಾಸ ನಿರ್ಮಾಣ ಮಾಡಿರುವ ಜಯಕಿರಣ ಫಿಲಂಸ್ ಬ್ಯಾನರ್ನ ಚೊಚ್ಚಲ ಸಿನಿಮಾ ಚಾಲಿಪೋಲಿಲು ಈಗ ಮತ್ತೊಂದು ಸಾಧನೆ ಮಾಡಿದ್ದು, ಅದು ಜನವರಿ 23 ಕ್ಕೆ 450 ನೇ ದಿನದ ಪ್ರದರ್ಶನ ಕಂಡಿದೆ. ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಈಗಲೂ ಪ್ರದರ್ಶನ ಮುಂದುವರಿಸುತ್ತಿರುವ ಈ ಸೂಪರ್ಹಿಟ್ ಸಿನಿಮಾವು ತುಳು ಚಿತ್ರರಂಗದ ಗೌರವವನ್ನು ಬಾನೆತ್ತರಕ್ಕೆ ಏರಿಸಿದೆ.
ಅಸಂಖ್ಯಾತ ಗುಣಾತ್ಮಕ ಅಂಶಗಳನ್ನು ಹೊಂದಿರುವ, ಕಡಿಮೆ ಬಜೆಟ್ನ ಈ ಸಿನಿಮಾವು ಅತ್ಯುತ್ತಮ ಗುಣಮಟ್ಟ ಹೊಂದಿರುವುದು ಮತ್ತು ಸಮಾಜದ ಎಲ್ಲ ವರ್ಗದ, ಎಲ್ಲ ಕೋಮಿನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಕೆಮರಾಮ್ಯಾನ್ ಕೇರಳದ ಚಿತ್ರರಂಗದ ಮೇರು ಪ್ರತಿಭೆ ಉತ್ಪಲ್ ನಾಯನಾರ್ ಅವರ ಕೊಡುಗೆಯನ್ನು ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಸದಾ ನೆನಪಿಸಿಕೊಳ್ಳುತ್ತಿದ್ದಾರೆ. ಹಾಸ್ಯ, ಮನೋರಂಜನೆ, ಸಂದೇಶ, ಮಾನವೀಯತೆ, ಕೋಮುಸೌಹಾರ್ದ..ಮುಂತಾದವುಗಳಿಗೆ ವಿಶೇಷ ಒತ್ತು ನೀಡಿರುವ ಈ ಚಿತ್ರದಲ್ಲಿ ದ್ವಂದ್ವಾರ್ಥ ಮತ್ತು ಅಶ್ಲೀಲತೆಗೆ ಅವಕಾಶವೇ ಇಲ್ಲದಿರುವುದು ಚಿತ್ರದ ಯಶಸ್ಸಿಗೆ ಕೊಡುಗೆ ನೀಡಿದೆ ಎಂದು ಹೇಳಬೇಕಾಗುತ್ತದೆ.
ತುಳು ಚಿತ್ರದ ಮೂಲಕವೂ ಭರ್ಜರಿ ಲಾಭ, ಹೆಸರು ಪಡೆಯಬಹುದು ಎಂದು ತೋರಿಸಿಕೊಟ್ಟಿರುವ ಚಾಲಿಪೋಲಿಲು ಚಿತ್ರವು, ೫ ಟಾಕೀಸ್ಗಳಲ್ಲಿ ೭೫ ದಿನ ಮತ್ತು ೩ ಟಾಕೀಸ್ಗಳಲ್ಲಿ ೧೦೦ ದಿನಗಳ ಪ್ರದರ್ಶನ ಕಾಣುವ ಮೂಲಕ ಆರಂಭದಲ್ಲೇ ಎಲ್ಲರ ಗಮನ ಸೆಳೆದಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ತುಳುವಿನಲ್ಲಿ ಗಣನೀಯ ಸಂಖ್ಯೆಯ ಚಿತ್ರಗಳ ನಿರ್ಮಾಣ, ಟೈಟಲ್ ನೋಂದಣಿಯಾಗಿರುವುದು ಕೂಡ ಉಲ್ಲೇಖನೀಯ ಸಂಗತಿ.
ದಬಕ್ ದಬಾ ಐಸಾ ಎಪ್ರಿಲ್ನಲ್ಲಿ ತೆರೆಗೆ : ಚಾಲಿಪೋಲಿಲು ತಂಡದ ಎರಡನೇ ಚಿತ್ರವಾಗಿರುವ ದಬಕ್ ದಬಾ ಐಸಾ ಚಿತ್ರದ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದ್ದು, ಮುಂದಿನ ಎಪ್ರಿಲ್ – ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಕೂಡ ಶೇ. 100 ಮನೋರಂಜನೆಯ ಚಿತ್ರವಾಗಿದ್ದು, ಚಾಲಿಪೋಲಿಲುಗಿಂತಲೂ ಉತ್ತಮವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇದನ್ನೂ ತುಳು ಚಿತ್ರಪ್ರೇಕ್ಷಕರು ಮೆಚ್ಚಿ, ಮತ್ತೊಂದು ಸೂಪರ್ ಹಿಟ್ ಚಿತ್ರದ ಸಾಲಿಗೆ ಸೇರಿಸುವ ವಿಶ್ವಾಸವಿದೆ ಎನ್ನುತ್ತಿದೆ ಚಿತ್ರತಂಡ. ಈ ಚಿತ್ರದಲ್ಲೂ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ ರೈ ಮಂದಾರ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆಂದು ಚಿತ್ರದ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.