ಬೆಳ್ತಂಗಡಿ : ಕಳೆದ 25 ವರ್ಷಗಳಿಂದ ಜನಪ್ರತಿನಿಧಿಗಳಿಂದ, ಸರಕಾರಿ ಅಧಿಕಾರಿಗಳಿಂದ ನಿರ್ಲಕ್ಷಿತವಾಗಿದ್ದ ನಾವೂರು ಗ್ರಾಮದ ರಸ್ತೆಯೊಂದನ್ನು ದುರುಸ್ಥಿಗೊಳಿಸುವಂತೆ ನಾಗರಿಕರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಆದರೆ ನಾಗರಿಕರ ಅಳಲಿಗೆ ಯಾರೂ ಸ್ಪಂದಿಸದೇ ಇರುವುದು ಸರಕಾರಿ ವ್ಯವಸ್ಥೆಯ ಜಿಗುಟುತನವನ್ನು ತೋರಿಸಿತು.
ಕೈಕಂಬದಿಂದ ಸುಮಾರು 7೭ ಕಿ.ಮೀ. ದೂರದ ಎರ್ಮಲೆ ಎಂಬಲ್ಲಿಗೆ, ಪರಾರಿ, ಕಣಾಲು, ಕುಂಡಡ್ಕ, ಬಾಲ್ತಾರಾ, ಗೊರ್ಮೆಲು, ಮಲ್ಲ, ಅಲ್ಯ, ಪುಳಿತ್ತಡಿ ಮುಖೇನ ಹಾದು ಹೋಗುವ ರಸ್ತೆಯು ಸುಳ್ಯೋಡಿ (4 ಕಿ.ಮೀ.) ಎಂಬಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕುಂಡ್ಯಡ್ಕ ಅಂಗನವಾಡಿ ಕೇಂದ್ರ ಮತ್ತು ಈ ಪ್ರದೇಶದ ಮಲೆಕುಡಿಯ ಜನರನ್ನು ಹಾಗೂ ಇತರರನ್ನು ಸಂಪರ್ಕಿಸುವ ರಸ್ತೆ ಇದಾಗಿದೆ.
ಈ ಭಾಗದಲ್ಲಿ ಸುಮಾರು 4,000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು 1500 ಮತದಾರರಿದ್ದಾರೆ. ಈ ರಸ್ತೆಯ ಬಗ್ಗೆ ಹಲವಾರು ವರ್ಷಗಳಿಂದ ಮನವಿ ನೀಡಲಾಗಿದ್ದರೂ ಸ್ಪಂದಿಸದ ಕಾರಣ ಚುನಾವಣಾ ಬಹಿಷ್ಕಾರಕ್ಕೆ ಮನ ಮಾಡಿದ್ದರು. ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಸ್ಥಳೀಯರು ಬ್ಯಾನರ್ನ್ನು ಅಳವಡಿಸಿದ್ದರು. ಈ ವಿಷಯವನ್ನು ತಿಳಿದು ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನಮೂರ್ತಿ ಮಂಗಳವಾರ ಸಂಜೆ ಮಾತುಕತೆಗೆ ತೆರಳಿದ್ದರು. ಈ ಸಂದರ್ಭ ಈ ಭಾಗದ ಜನರು ತಹಶೀಲ್ದಾರ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಧಿಕಾರಿಗಳಿಂದ ಸರಿಯಾದ ಉತ್ತರದೊರಕದ ಹಿನ್ನಲೆಯಲ್ಲಿ ಶುಕ್ರವಾರ ಮೂಲಭೂತ ಸೌಕರ್ಯ ವಂಚಿತ ಜನರು ಬೆಳ್ತಂಗಡಿ-ಕಿಲ್ಲೂರು ಮುಖ್ಯರಸ್ತೆಯ ಕೈಕಂಬದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಆದರೆ ಇವರ ಪ್ರತಿಭಟನಾ ಸ್ಥಳಕ್ಕೆ ಯಾವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಲಿಲ್ಲ. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮುಂದಿನ ದಿನಗಳಲ್ಲಿ ತಾಲೂಕುಕಛೇರಿಯ ಎದುರುಗಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳವ ಚಿಂತನೆಗಳನ್ನು ಸ್ಥಳೀಯರು ಹೊಂದಿದ್ದಾರೆ. ರಸ್ತೆಕಾಮಗಾರಿಯನ್ನು ಆರಂಭಿಸದೇ ಚುನಾವಣೆಯಲ್ಲಿ ಭಾಗಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಥಳಿಯಯ ಜನರ ಅಭಿಪ್ರಾಯವಾಗಿದೆ. ಬೆಳ್ತಂಗಡಿ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದರು.
ಧರ್ಣಪ್ಪ ಮೂಲ್ಯ, ಉಮೇಶ್ ಪರಾರಿ, ಪ್ರಕಾಶ್ ಸಂಪಿಂಜ, ಸುರೇಶ್ ಪಿ.ಎನ್. ಪರಾರಿ, ಸೋಮಣ್ಣಗೌಡ, ನಾರಾಯಣಕುಪ್ಲೊಟ್ಟು, ಶ್ರೀಧರ ಬಂಗೇರಕಾರಿಂಜ, ಜಾರಪ್ಪ ಪೂಜಾರಿ ಕೊಡ್ಯೇಲು, ಕುಶಾಲಪ್ಪ ಬಂಗೇರಕಾರಿಂಜ, ಬಾಬು ಮೂಲ್ಯ ಬಾಳ್ತರ, ಜೋಸ್ ಕೈಕಂಬ, ಮನೋಜ್ ಸಂಪಿಂಜ, ಕರಿಯ ಮೂಲ್ಯಕೋಡ್ಯೇಲು, ಬಾಲಕೃಷ್ಣ ಅರುವಾಲು, ದೇಜಪ್ಪಗೌಡ ಕುಂಡಡ್ಕ, ಓಬಯ್ಯಗೌಡಕುಂಡಡ್ಕ, ಲಿಂಗಪ್ಪಗೌಡಕುಂಡಡ್ಕ, ದಿನೇಶ್ಕುಪ್ಲೊಟ್ಟು, ಆನಂದಗೌಡ ಮೊದಲಾದವರು ನೇತೃತ್ವ ವಹಿಸಿದ್ದರು.
ಹಲವಾರು ವರುಷಗಳಿಂದ ಮನವಿಗಳ ಮೇಲೆ ಮನವಿ ನೀಡುತ್ತಾ ಬಂದಿದ್ದೇವೆ. ಭರವಸೆಗಳನ್ನೇ ನೀಡಿದ್ದಾರೆಯೇ ಹೊರತು ಕೆಲಸ ಆಗಿಲ್ಲ. ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಶುಕ್ರವಾರ ನಮ್ಮ ಸಮಸ್ಯೆಯನ್ನು ಆಲಿಸಲು ಬಂದಿಲ್ಲ. ಶೀಘ್ರದಲ್ಲಿ ನಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಬೆಳ್ತಂಗಡಿ ತಾಲೂಕು ಕಚೇರಿಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.- ದರ್ಣಪ್ಪ ಮೂಲ್ಯ, ಸ್ಥಳೀಯರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.