ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ವೈಖರಿ ಇಡೀ ಚುನಾವಣಾ ವ್ಯವಸ್ಥೆಯನ್ನೇ ಸಂಶಯದಿಂದ ನೋಡುವಂತಾಗಿದೆ. ವಿಧಾನ ಪರಿಷತ್ತಿಗೆ ಮೇಲ್ಮನೆ ಎಂದೂ ಹಿರಿಯರ ಮನೆ ಎಂದೂ ಹೇಳಲಾಗುತ್ತಿತ್ತು. ಅಲ್ಲಿ ಗುಣವಂತರು ಹಾಗೂ ಬುದ್ಧಿವಂತರು ಇರುತ್ತಾರೆ ಎಂಬುದು ಇದುವರೆಗಿನ ನಂಬಿಕೆಯಾಗಿತ್ತು. ಹಾಗೆಂದೇ ಅದನ್ನು ಚಿಂತಕರ ಚಾವಡಿ ಎನ್ನಲಾಗುತ್ತಿತ್ತು. ವಿವಿಧ ರಂಗಗಳಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ಕುರಿತು ಅಲ್ಲಿ ಮೇಲ್ಮಟ್ಟದ, ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಎಲ್ಲ ಕ್ಷೇತ್ರಗಳಿಗೆ ಸೇರಿದ ತಜ್ಞರು ಅಲ್ಲಿರುತ್ತಿದ್ದರಿಂದಲೇ ಇಂತಹ ಚರ್ಚೆಗಳು ಸಾಧ್ಯವಾಗುತ್ತಿತ್ತು.
ಆದರೆ ಈಗ ಮೇಲ್ಮನೆ ಅಂತಹ ಸ್ಥಿತಿಯನ್ನು ಉಳಿಸಿಕೊಂಡಿಲ್ಲ. ಅಲ್ಲಿಗೆ ಆಯ್ಕೆಯಾಗುತ್ತಿರುವವರು ಹಣವಂತರೇ ಹೊರತು ಗುಣವಂತರಲ್ಲ. ವಿವೇಕವಂತರಂತೂ ಖಂಡಿತ ಅಲ್ಲ. ರಿಯಲ್ ಎಸ್ಟೇಟ್ ಕುಳಗಳು, ಶ್ರೀಮಂತ ಉದ್ಯಮಿಗಳು, ರಾಜಕಾರಣದಲ್ಲಿ ಮೂಲೆಗುಂಪಾಗಿ ಹಿಂಬಾಗಿಲಿನಿಂದ ಮತ್ತೆ ಅಧಿಕಾರ ಬಯಸುವವರು… ಹೀಗೆ ಇಂತಹವರೇ ಈಗ ಅಲ್ಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು, ತಜ್ಞರು ಅಲ್ಲಿಲ್ಲ. ಈಗ ಇರುವ 75 ಸದಸ್ಯರ ಹಿನ್ನೆಲೆಯನ್ನು ಕೆದಕುತ್ತ ಹೋದರೆ ಅವರಲ್ಲಿ 32 ಮಂದಿ ರಿಯಲ್ ಎಸ್ಟೇಟ್ ಕುಳಗಳೇ ಇದ್ದಾರೆ. ಕಾಂಗ್ರೆಸ್ಸಿನ 15, ಬಿಜೆಪಿಯ 10, ಜೆಡಿಎಸ್ನ 5 ಹಾಗೂ ಇಬ್ಬರು ಪಕ್ಷೇತರರು ರಿಯಲ್ ಎಸ್ಟೇಟ್ ಉದ್ಯಮಿಗಳು. ಇವರಲ್ಲದೇ ಗಣಿ ಉದ್ಯಮಿಗಳು, ಚಿನ್ನ, ಬೆಳ್ಳಿ ವ್ಯಾಪಾರಿಗಳು, ಬಡ್ಡಿ ವ್ಯವಹಾರ ನಡೆಸುವವರು, ದುಬಾರಿ ಶಿಕ್ಷಣ ಸಂಸ್ಥೆಗಳ ಮಾಲೀಕರೇ ಮೇಲ್ಮನೆಯಲ್ಲಿ ತುಂಬಿದ್ದಾರೆ. ಇಂತಹವರು ಸಾರ್ವಜನಿಕ ರಂಗದ ವಿವಿಧ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸುತ್ತಾರೆಂದು ಭಾವಿಸುವುದು ಮೂರ್ಖತನವಾದೀತಷ್ಟೆ. ಅಷ್ಟಕ್ಕೂ ಸಾರ್ವಜನಿಕ ರಂಗದ ಸಮಸ್ಯೆಗಳ ಕುರಿತು ಈ ಮಂದಿಗೆ ಕಿಂಚಿತ್ತಾದರೂ ಅರಿವಿದ್ದರೆ ತಾನೇ ಚರ್ಚೆ ನಡೆಸುವುದು?
ಮೇಲ್ಮನೆ ಈಗ ಪಡೆದುಕೊಂಡಿರುವ ವಿಚಿತ್ರ ಸ್ವರೂಪದ ಬಗ್ಗೆ ಸುರೇಶ್ ಕುಮಾರ್, ಬಿ.ಎಲ್.ಶಂಕರ್, ಎಂ.ಸಿ.ನಾಣಯ್ಯ ಮೊದಲಾದ ಬೆರಳೆಣಿಕೆಯ ಹಿರಿಯ ರಾಜಕಾರಣಿಗಳು ಮಾತ್ರ ತೀವ್ರ ನೊಂದಿದ್ದಾರೆ. ಇಂತಹ ಪರಿಸ್ಥಿತಿ ಬದಲಾಗಬೇಕೆಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ರಾಜಕಾರಣದ ಉಳಿದ ಹಿರಿಯ ತಲೆಗಳು ಈ ಬಗ್ಗೆ ಮೌನ ಧರಿಸಿರುವುದು ಮಾತ್ರ ಶೋಚನೀಯ. ಈ ಬಾರಿ ಮೇಲ್ಮನೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ ನೀಡಬೇಕಿತ್ತು. ನಿಜವಾಗಿ ಅದೊಂದು ಪ್ರಚಾರವೇ ಇಲ್ಲದ, ಸುದ್ದಿಯೇ ಆಗದ ಚುನಾವಣೆಯಾಗಬೇಕಾಗಿತ್ತು. ಆದರೆ ಈ ಬಾರಿ ಈ ಚುನಾವಣೆಯ ಖದರ್ರೇ ಬೇರೆಯಾಗಿತ್ತು. ಮತದಾರರಿಗೆ ಹಣದ ಹೊಳೆಯನ್ನೇ ಹರಿಸಲಾಯಿತು. ದುಬಾರಿ ಉಡುಗೊರೆಗಳ ಆಮಿಷ ಒಡ್ಡಲಾಯಿತು. ಪ್ರಚಾರದ ಸಂದರ್ಭದಲ್ಲಿ ಮತಭಿಕ್ಷೆ ಬೇಡಲು ಹೋದ ಅಭ್ಯರ್ಥಿಗಳಿಗೆ ಚುನಾಯಿತ ಪ್ರತಿನಿಧಿಗಳೆಂಬ ಮತದಾರರು ಕೇಳಿದ ಒಂದೇ ಒಂದು ಪ್ರಶ್ನೆ : ನೀವೆಷ್ಟು ರೊಕ್ಕ ಕೊಡುತ್ತೀರಿ ಎಂದು! ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳಿಂದಲೂ ಹಣ ಹಾಗೂ ಉಡುಗೊರೆ ಪಡೆದ ಮತದಾರರು ಕೊನೆಗೆ ಯಾವುದೋ ಒಬ್ಬ ಅಭ್ಯರ್ಥಿಗೆ ಮತ ಹಾಕಿದ್ದು ಪ್ರಜಾಪ್ರಭುತ್ವದ ಸಂವರ್ಧನೆಗಾಗಿ ಖಂಡಿತ ಅಲ್ಲ, ಕೇವಲ ಕಾಟಾಚಾರಕ್ಕಾಗಿ! ಅಭ್ಯರ್ಥಿಗಳು ಹಣ ಕೊಡಲೇಬೇಕು ಎಂಬ ಮನಃಸ್ಥಿತಿಗೆ ಮತದಾರರಾಗಿದ್ದ ಚುನಾಯಿತ ಪ್ರತಿನಿಧಿಗಳು ತಲುಪಿದ್ದರ ಸಂಕೇತ ಇದು. ನಾವು ಹಣ ಕೊಟ್ಟರೆ ಮಾತ್ರ ನಮಗೆ ಓಟು ಸಿಗುತ್ತದೆ ಎಂಬ ಮಾನಸಿಕತೆ ಅಭ್ಯರ್ಥಿಗಳಿಗೂ ಬಂದು ಬಿಟ್ಟಿರುವುದರ ಪ್ರತೀಕ ಇದು. ಇಂತಹ ಪರಿಸ್ಥಿತಿಯಲ್ಲಿ ಗುಣವಂತರು ಚುನಾವಣೆಗೆ ಸ್ಪರ್ಧಿಸಿದರೆ ಗೆಲ್ಲುವುದಾದರೂ ಹೇಗೆ?
ವಿಧಾನ ಪರಿಷತ್ತಿನ ಈ ಚುನಾವಣೆಗೆ ಚುನಾವಣಾ ಆಯೋಗವು ಅಭ್ಯರ್ಥಿಗಳಿಗೆ ಖರ್ಚು ಮಾಡುವ ಹಣದ ಬಗ್ಗೆ ಗರಿಷ್ಠ ಮಿತಿ ವಿಧಿಸಿರಲಿಲ್ಲ ಎಂಬ ಸಂಗತಿಯಂತೂ ಇನ್ನಷ್ಟು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಪ್ರತಿಯೊಂದು ಚುನಾವಣೆಯಲ್ಲೂ ಪ್ರತಿ ಅಭ್ಯರ್ಥಿ ಇಷ್ಟೇ ಹಣ ಖರ್ಚು ಮಾಡಬೇಕೆಂಬ ನಿರ್ಬಂಧ ವಿಧಿಸಲಾಗುತ್ತದೆ. ಹಾಗಿರುವಾಗ ವಿಧಾನ ಪರಿಷತ್ತಿನ ಈ ಚುನಾವಣೆಗೆ ಏಕೆ ಅಂತಹ ನಿರ್ಬಂಧವಿಲ್ಲ? ಚುನಾವಣಾ ಆಯೋಗದ ಇಂತಹ ನಡೆಯು ಹಣದ ಹೊಳೆ ಹರಿಸುವ ಅಭ್ಯರ್ಥಿಗಳ ಪಾಲಿಗಂತೂ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು. ಮನಸೋಇಚ್ಛೆ ಹಣದ ಹೊಳೆ ಹರಿಸಿ ಮತದಾರರನ್ನು ಒಲಿಸಿಕೊಳ್ಳಲು ಮುಂದಾಗಿದ್ದು ನಮ್ಮ ಪ್ರಜಾತಂತ್ರ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಟಿ.ಎನ್. ಶೇಷನ್ ಅವರಂತಹ ಚುನಾವಣಾ ಆಯುಕ್ತರು ತಂದಿದ್ದ ಬಿಗಿಯಾದ ಚುನಾವಣಾ ಸುಧಾರಣೆಗಳಿಗೆ ಈಗ ಗ್ರಹಣ ಹಿಡಿದಿರುವುದು ನಿಜ.
ಚುನಾವಣೆಯನ್ನು ಗೆಲ್ಲಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನುಸರಿಸದ ಹುನ್ನಾರಗಳೇ ಇಲ್ಲ ಎನ್ನಬಹುದು. ಚುನಾವಣಾ ಆಯೋಗ ಅದೆಷ್ಟೇ ವಿಧಿ-ನಿಷೇಧಗಳನ್ನು ಹೇರಿದರೂ ಬಿಗಿ ನಿರ್ಬಂಧಗಳನ್ನು ವಿಧಿಸಿದರೂ ರಾಜಕೀಯ ಪಕ್ಷಗಳ ಪಾಲಿಗೆ ಅದೊಂದು ಎಚ್ಚರಿಕೆಯ ಸಂಗತಿ ಆಗುತ್ತಲೇ ಇಲ್ಲ. ಆಯೋಗ ಚಾಪೆ ಕೆಳಗೆ ತೂರಿದರೆ ಪಕ್ಷಗಳು ರಂಗೋಲಿ ಕೆಳಗೆ ತೂರುವ ಜಾಣ್ಮೆ ಕಲಿತಿವೆ. ಈ ಹಿಂದೆ ರಾಜ್ಯದಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯೊಂದರಲ್ಲಿ ಪಕ್ಷದ ಮುಖಂಡರೊಬ್ಬರು ಮತದಾರರಿಂದ ಗುರುತು ಚೀಟಿಗಳನ್ನು ಮೊದಲೇ ಸಂಗ್ರಹಿಸಿ, ಅವರ ಕೈಬೆರಳಿಗೆ ಮಸಿಯನ್ನೂ ಹಚ್ಚಿಬಿಟ್ಟಿದ್ದರು. ಚುನಾವಣೆಯ ದಿನ ಅವರ್ಯಾರೂ ಮತಗಟ್ಟೆಗೆ ಹೋಗಬಾರದು ಹಾಗೂ ಮತ ಹಾಕಬಾರದು. ಆ ದಿನ ಸಂಜೆ ವೇಳೆಗೆ ಅವರೆಲ್ಲ ತಮ್ಮ ತಮ್ಮ ಗುರುತು ಚೀಟಿಗಳನ್ನು ಸಂಗ್ರಹಿಸಿದವರಿಂದ ಮರಳಿ ಪಡೆಯಬೇಕು. ಹೀಗೆ ಮರಳಿ ಪಡೆಯುವ ಸಂದರ್ಭದಲ್ಲಿ ಅವರಿಗೆ ‘ಕಾಸಿನ ಕಜ್ಜಾಯ’ ಸಿಗುತ್ತಿತ್ತು! ಚುನಾವಣೆ ಗೆಲ್ಲಲು ಎಂತೆಂತಹ ಷಡ್ಯಂತ್ರಗಳನ್ನು ರಾಜಕೀಯ ಪಕ್ಷಗಳು ಹೆಣೆಯುತ್ತವೆ ಎಂಬುದಕ್ಕೆ ಇದೊಂದು ಸಣ್ಣ ಸ್ಯಾಂಪಲ್!
ವಿಧಾನ ಪರಿಷತ್ತಿನ ಚುನಾವಣೆಯಲ್ಲೇ ಈ ಪರಿಯ ಹಣದ ಹೊಳೆ, ಉಡುಗೊರೆಗಳ ಆಮಿಷ ಕಂಡುಬಂದರೆ ಇನ್ನು ಉಳಿದ ಚುನಾವಣೆಗಳ ಪಾಡೇನು? ಮತದಾರರು ತಮ್ಮ ಮತಹಕ್ಕನ್ನು ಹೀಗೆ ಮಾರಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಏನರ್ಥ? ನಿಜವಾಗಿ ಈ ಬಗ್ಗೆ ರಾಜಕೀಯ ಪಕ್ಷಗಳ ಹಿರಿಯ ಮುಖಂಡರು ಒಟ್ಟಿಗೆ ಕುಳಿತು ಗಂಭೀರ ಚರ್ಚೆ ನಡೆಸಿ, ಮುಂದಾದರೂ ಚುನಾವಣೆಗಳ ಪಾವಿತ್ರ್ಯ, ಮತಹಕ್ಕಿನ ಮಾನ ಉಳಿಸುವ ಪ್ರಯತ್ನ ಕೈಗೊಳ್ಳಬೇಕು. ಆದರೆ ರಾಜಕೀಯ ಪಕ್ಷಗಳ ಮುಖಂಡರು ಈ ಬಗ್ಗೆ ಮಾತೇ ಆಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಚುನಾವಣಾ ವೆಚ್ಚಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ ಎಂದು ಘೋಷಿಸಿದ ಚುನಾವಣಾ ಆಯೋಗ ಒಂದು ರೀತಿಯಲ್ಲಿ ಚುನಾವಣಾ ಭ್ರಷ್ಟಾಚಾರಕ್ಕೆ ತನ್ನ ಮೌನ ಸಮ್ಮತಿ ನೀಡಿದಂತಾಗಲಿಲ್ಲವೇ?
ಭ್ರಷ್ಟಾಚಾರದ ಕಬಂಧ ಬಾಹುಗಳು ಆಳವಾಗಿ ಎಲ್ಲೆಡೆಯೂ ಚಾಚಿರುವುದು ಈಗ ಹೊಸದೇನಲ್ಲ. ಆದರೆ ಭ್ರಷ್ಟಾಚಾರಕ್ಕೆ ಮೊದಲು ಶಂಕುಸ್ಥಾಪನೆ ಮಾಡಿದ್ದು ದೇವರಾಜ ಅರಸು ಸರ್ಕಾರ ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾಗ! ಸರ್ಕಾರಿ ಹುದ್ದೆಗಳಿಗೆ ಎಷ್ಟೆಷ್ಟು ಲಂಚ ಕೊಡಬೇಕೆಂದು ಮೌಖಿಕವಾಗಿ ನಿಗದಿಯಾಗಿದ್ದು ಆವಾಗಲೇ. ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಇಷ್ಟು, ಪೊಲೀಸ್ ಆಯುಕ್ತರ ಹುದ್ದೆಗೆ ಇಷ್ಟು, ಕಂದಾಯ ಅಧಿಕಾರಿ ಹುದ್ದೆಗೆ ಇಷ್ಟು… ಹೀಗೆ ಪ್ರತಿಯೊಂದು ಸರ್ಕಾರಿ ಹುದ್ದೆಗಳಿಗೆ ಲಂಚದ ಪ್ರಮಾಣ ಆಗ ನಿಗದಿಯಾಗಿದ್ದು ರಹಸ್ಯವಾಗಿರಲಿಲ್ಲ. ಆ ಪರಂಪರೆ ಈಗಲೂ ಮುಂದುವರೆದುಕೊಂಡು ಬಂದಿದೆ! ಭ್ರಷ್ಟಾಚಾರವೆಂಬುದು ಈಗ ಕರ್ನಾಟಕದ ಮನೆ ಮಾತಾಗಿದೆ. ಅದೊಂದು ಹೊಸ ವಿಷಯವೇ ಅಲ್ಲ ಎನಿಸಿದೆ. ಭ್ರಷ್ಟಾಚಾರ ಎಸಗುವುದು, ಸರ್ಕಾರಿ ಕೆಲಸಗಳಾಗಬೇಕಾದರೆ ಸಂಬಂಧಿಸಿದವರಿಗೆ ಕೈ ಬೆಚ್ಚಗೆ ಮಾಡುವುದು ತಪ್ಪೆಂದು ಯಾರಿಗೂ ಅನಿಸುತ್ತಿಲ್ಲ. ಅದೇ ಸ್ಥಿತಿ ಚುನಾವಣೆಯಲ್ಲಿ ಮತ ನೀಡಬೇಕಾದರೂ ಹಣ ಪಡೆಯಬೇಕೆಂಬ ಮಾನಸಿಕತೆ ಬಹುತೇಕ ಮತದಾರರಲ್ಲಿ ಆಳವಾಗಿ ಬೇರೂರಿದೆ. ಹಣ ಕೊಡದಿದ್ದರೆ ನಾವೇಕೆ ಮತ ಹಾಕಬೇಕು ಎಂಬ ಜಿಜ್ಞಾಸೆ ಮೂಡಿಬಿಟ್ಟಿದೆ.
ಭ್ರಷ್ಟಾಚಾರ ನಿಗ್ರಹಕ್ಕಾಗಿ ರಾಜ್ಯದಲ್ಲಿ ಸ್ಥಾಪನೆಗೊಂಡ ಲೋಕಾಯುಕ್ತ ಸಂಸ್ಥೆಯ ಅವಸ್ಥೆ ಎಲ್ಲಿಗೆ ತಲುಪಿದೆ ಎಂಬ ಬಗ್ಗೆ ವ್ಯಾಖ್ಯಾನದ ಅಗತ್ಯವೇ ಇಲ್ಲ. ಲೋಕಾಯುಕ್ತ ಕಚೇರಿಯೇ ಲಂಚ ಪಡೆಯುವ ತಾಣವಾಗಿ ಮಾರ್ಪಟ್ಟಿದ್ದು, ಸ್ವತಃ ಲೋಕಾಯುಕ್ತರೇ ಭ್ರಷ್ಟಾಚಾರಕ್ಕೆ ಹಸಿರು ನಿಶಾನೆ ತೋರಿದ್ದು, ಕೊನೆಗೆ ವಿಧಾನಮಂಡಲದಲ್ಲಿ ಲೋಕಾಯುಕ್ತರ ಪದಚ್ಯುತಿಗೆ ಸರ್ವಾನುಮತದ ಒಪ್ಪಿಗೆ ದೊರೆತದ್ದು… ಇವೆಲ್ಲಾ ಈಗ ಹಳೆಯ ವಿದ್ಯಮಾನಗಳು. ಭ್ರಷ್ಟಾಚಾರಕ್ಕೆ ಅಂಕುಶ ಹಾಕಬೇಕಿದ್ದ ಲೋಕಾಯುಕ್ತ ಸಂಸ್ಥೆಯ ಮರ್ಯಾದೆ ಈಗ ಸಂಪೂರ್ಣ ಮೂರಬಟ್ಟೆಯಾಗಿ ಹೋಗಿದೆ.
ಇತ್ತೀಚೆಗೆ ಕೇಳಿಬಂದ ದೆಹಲಿಯ ಡಿಡಿಸಿಎ ಭ್ರಷ್ಟಾಚಾರ ಹಗರಣ ಬಹುದೊಡ್ಡ ಪ್ರಕರಣವೆಂದು ಯಾರಿಗೂ ಅನಿಸಲಿಲ್ಲ. ಏಕೆಂದರೆ ಅಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಕ್ರೀಡಾ ಸಂಸ್ಥೆಗಳಲ್ಲಿ ಅಂತಹ ಭ್ರಷ್ಟಾಚಾರ ಹಗರಣ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಆದರೆ ಡಿಡಿಸಿಎ ಹಗರಣದಲ್ಲಿ ಸುದ್ದಿಯಾದ ಸಂಗತಿಯೊಂದು ಮಾತ್ರ ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸಿತ್ತು. ತನ್ನ ಮಗನಿಗೆ ಕ್ರಿಕೆಟ್ನಲ್ಲಿ ಆಯ್ಕೆಯ ಅವಕಾಶ ಕೋರಿದ್ದ ತಾಯಿಗೆ ಕ್ರಿಕೆಟ್ ಮಂಡಳಿ ಅಧಿಕಾರಿಯೊಬ್ಬರು ಲೈಂಗಿಕ ಆಮಿಷಕ್ಕೆ ಒಳಗಾಗಬೇಕೆಂದು ಆಗ್ರಹಿಸಿದ್ದರಂತೆ. ಇದರಲ್ಲಿ ನಿಜಾಂಶ ಎಷ್ಟು ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು. ಆದರೆ ಇಂತಹ ವಿದ್ಯಮಾನ ಕರ್ನಾಟಕದಲ್ಲೂ ಹಿಂದೆ ನಡೆದಿತ್ತು. ಮುಖ್ಯಮಂತ್ರಿಯೊಬ್ಬರ ಆಡಳಿತ ಕಾಲದಲ್ಲಿ ಅಧಿಕಾರ, ಸ್ಥಾನಮಾನಗಳಿಗಾಗಿ ಲೈಂಗಿಕ ಬಳಕೆಯ ಷರತ್ತಿಗೆ ಒಳಗಾಗಬೇಕಾದ ಪ್ರಸಂಗ ನಡೆದಿತ್ತೆಂದು ಆಗ ಅದಕ್ಕೆ ಸಾಕ್ಷಿಯಾಗಿದ್ದವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಚಿವರೊಬ್ಬರು ಸರ್ಕಾರದಲ್ಲಿ ಹೆಚ್ಚಿನ ಅಧಿಕಾರ, ಸ್ಥಾನಮಾನಗಳನ್ನು ಪಡೆಯಲು ತಮ್ಮ ಸುಂದರ ಪತ್ನಿಯನ್ನೇ ಮುಖ್ಯಮಂತ್ರಿಯವರಿಗೆ ಒಪ್ಪಿಸಿದ್ದರು ಎಂದು ಆಗ ವದಂತಿ ಹರಡಿತ್ತು. ದೇಶದಲ್ಲಿ ನಡೆದ ಬೇರೆ ಬೇರೆ ಭ್ರಷ್ಟಾಚಾರ ಪ್ರಕರಣಗಳಲ್ಲೂ ಈ ಪರಿಯ ವಿದ್ಯಮಾನಗಳು ಕಂಡುಬಂದಿದ್ದವು.
ಹೀಗೆ ಅಧಿಕಾರ, ಸ್ಥಾನಮಾನ ಗಳಿಕೆಗಾಗಿ ಯಾವ ದರಿದ್ರ ಹಂತಕ್ಕಾದರೂ ತಲುಪುವ ಸ್ಥಿತಿ ನಿರ್ಮಾಣವಾಗಿರುವುದು ವರ್ತಮಾನದ ದುರಂತ. ಪ್ರಜಾತಂತ್ರ ವ್ಯವಸ್ಥೆಯ ಬೇರುಗಳನ್ನೇ ಈ ದುರಂತ ಅಲುಗಾಡಿಸುತ್ತಿದೆ. ಆದರೆ ಈ ಬಗ್ಗೆ ಮಾತ್ರ ನಮ್ಮ ಪ್ರಗತಿಪರರಾಗಲೀ, ಬುದ್ಧಿಜೀವಿಗಳಾಗಲೀ ಧ್ವನಿ ಎತ್ತುತ್ತಿಲ್ಲ. ದೇಶದೆಲ್ಲೆಡೆ ಅಸಹಿಷ್ಣುತೆ ಇದೆಯೆಂದು ಬೊಬ್ಬೆ ಹೊಡೆಯುವ ಈ ಮಂದಿಗೆ ಭ್ರಷ್ಟಾಚಾರದ ಅರ್ಬುದ ರೋಗ ಹರಡದಂತೆ ತಡೆಗಟ್ಟಲು ಸೊಲ್ಲೆತ್ತಬೇಕೆಂದು ಅನಿಸದಿರುವುದು ಇನ್ನೊಂದು ದೊಡ್ಡ ದುರಂತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.