ಚಂಡೀಗಢದ ಹಿಸಾರ್ ಜಿಲ್ಲೆಯ ಸ್ಯಹಾದ್ವಾ ಗ್ರಾಮಸ್ಥರು ಅನುಸರಿಸಿದ ಮಾರ್ಗ ಒಂದು ಅನನ್ಯ ಮತ್ತು ಅದ್ಭುತ ಉದಾಹರಣೆ. ಓರ್ವ ಶಿಕ್ಷಕನನ್ನು ತಮ್ಮ ಗ್ರಾಮದ ಸರಪಂಚ್ ಆಗಿ ಆಯ್ಕೆ ಮಾಡುವ ಸಲುವಾಗಿ ಆತನ ಬ್ಯಾಂಕ್ ಹಾಗೂ ವಿದ್ಯುತ್ ಬಾಕಿ ತುಂಬಲು ಒಟ್ಟು ರೂ.1.75 ಲಕ್ಷ ಸಂಗ್ರಹಿಸಿದ್ದಾರೆ.
ಸರಪಂಚ್ ಸ್ಥಾನಕ್ಕೆ ನಡೆಯಬೇಕಾದ ಚುನಾವಣೆಯಲ್ಲಿ ನಡೆಯುವ ಲಾಬಿ ಮತ್ತು ರಾಜಕೀಯ ಪೈಪೋಟಿ ತಪ್ಪಿಸಲು ಗ್ರಾಮಸ್ಥರು ಈ ಶಿಕ್ಷಕನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಮೆಟ್ರಿಕ್ಯುಲೇಟ್ ಓದಿರುವ 48 ವರ್ಷದ ಅಶ್ವನಿ ಕುಮಾರ್, ಗ್ರಾಮ ಮಟ್ಟದ ಖಾಸಗಿ ಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಕಂಡೊಡನೆ ಗ್ರಾಮಸ್ಥರ ಅಭ್ಯರ್ಥಿ ಹುಡುಕಾಟ ಇಲ್ಲಿಗೆ ಕೊನೆಗೊಂಡಿದೆ. ಈ ಸ್ಥಾನಕ್ಕೆ ಅಶ್ವನಿ ಕುಮಾರ್ ಅಲ್ಲದೇ ಇನ್ನೂ 14 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಆದರೆ ವಿದ್ಯಾವಂತ ಅಶ್ವಿನ್ ಅವರನ್ನು ಸರ್ವಾನುಮತದಿಂದ ಸರಪಂಚ್ ಆಯ್ಕೆ ಮಾಡುವ ಸಲುವಾಗಿ ವರು ತಮ್ಮ ನಾಮಪತ್ರ ಹಿಂಪಡೆದರು.
ಒಂದು ಅಚ್ಚರಿ ಮತ್ತು ಸ್ಫೂರ್ತಿದಾಯಕ ವಿಷಯವೆಂದರೆ ಅಶ್ವನಿ ಕುಮಾರ್ ಲೋಹಾರ ಸಮುದಾಯಕ್ಕೆ ಸೇರಿದ ಹಿಂದುಳಿದ ವರ್ಗದ ಕಮ್ಮಾರ ಕುಟುಂಬದವರಾಗಿದ್ದಾರೆ. ಅದೇ ಸ್ಯಹಾದ್ವಾ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಜಾಟ್ ಸಮುದಾಯಸ್ಥರು ವಾಸಿಸುತ್ತಿದ್ದಾರೆ. ಒಟ್ಟು 3,600 ಮತದಾರರಲ್ಲಿ ಲೋಹಾರ ಸಮುದಾಯಸ್ಥರ ಸಂಖ್ಯೆ 45 ಮಾತ್ರ.
ಬ್ಯಾಂಕ್ ಮತ್ತು ವಿದ್ಯುತ್ ಬಿಲ್ ಬಾಕಿ ಇದ್ದುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಸಾಧ್ಯ ಎಂದು ಅಶ್ವನಿ ಮಾಹಿತಿ ನೀಡಿದಾಗ ಗ್ರಾಮಸ್ಥರೇ ಆತನ ಬಾಕಿ ತುಂಬಲು ಮುಂದಾದರು. ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ತೋರದ ಅಶ್ವನಿ ಕುಮಾರ್ ಈಗ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಗ್ರಾಮಸ್ಥರು ಎಲ್ಲಾ 15 ಪಂಚ್ಗಳನ್ನು ಮತ್ತು ಒಂದು ಬ್ಲಾಕ್ ಸಮಿತಿ ಸದಸ್ಯನನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಗ್ರಾಮಸ್ಥರು ಜ.10 ನಡೆಯುವ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.