ಬೆಳ್ತಂಗಡಿ: ರಬ್ಬರ್ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕೃಷಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕೃಷಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಸೀರೋಮಲಬಾರ್ ಕಥೋಲಿಕ್ ಅಸೋಸಿಯೇಶನ್ನ ಕೇಂದ್ರೀಯ ಸಮಿತಿ ಅಧ್ಯಕ್ಷ ಕ್ಸೇವಿಯರ್ ಪಾಲೇಲಿ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ವರ್ಷಗಳ ಹಿಂದೆ ರಬ್ಬರ್ಗೆ ಕೆ.ಜಿ.ಗೆ 250 ರೂ. ವರೆಗೆ ದರವಿತ್ತು. ಆದರೆ ಈಗ ಅದು ಕೇವಲ 100 ರೂ. ಮಟ್ಟಕ್ಕೆ ಇಳಿದಿದೆ. ಕನಿಷ್ಟ 200 ರೂ. ದರವಾದರೂ ಸಿಗದಿದ್ದಲ್ಲಿ ರೈತರು ಬದುಕನ್ನು ನಡೆಸುವುದು ಕಷ್ಟಸಾಧ್ಯವಾಗಲಿದೆ. ಆಧ್ದರಿಂದ ಸರಕಾರ ರಬ್ಬರ್ಗೆ ರೂ. 200ರಂತೆ ಬೆಂಬಲ ಬೆಲೆ ಘೋಷಿಸಿ ರಬ್ಬರ್ ಖರೀದಿಗೆ ಕ್ರಮ ಕೈಗೊಳ್ಳಬೇಕು. ಕೃಷಿಕರ ಸಾಲವನ್ನು ಮನ್ನಾ ಮಾಡಬೇಕು ಮುಂತಾದ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಗಮನಕ್ಕೆ ತರಲು ಸಂಘಟನೆಯ ವತಿಯಿಂದ ಪ್ರಧಾನಮಂತ್ರಿಯವರಿಗೆ ಹಾಗೂಮುಖ್ಯಮಂತ್ರಿಯವರಿಗೆ ಕಾರ್ಡ ಚಳವಳಿಯನ್ನು ಹಮ್ಮಿಕೊಂಡಿದೆ. ಈಗಾಗಲೇ ಸುಮಾರು ಹತ್ತು ಸಾವಿರ ಮಂದಿ ಸದಸ್ಯರು ಅಂಚೆಯ ಮೂಲಕ ಪತ್ರಗಳನ್ನು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದ ಆರು ಜಿಲ್ಲೆಗಳ ಸುಮಾರು 50 ಸಾವಿರ ಕೃಷಿಕ ಕುಟುಂಬಗಳು ರಬ್ಬರ್ ಬೆಳೆಯಲ್ಲಿ ನಿರತರಾಗಿದ್ದಾರೆ. ಸುಮಾರು ೭೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಸಾವಿರಾರು ಮಂದಿ ಕಾರ್ಮಿಕರು ಇದನ್ನು ಅವಲಂಬಿಸಿಕೊಂಡು ಬದುಕನ್ನು ನಡೆಸುತ್ತಿದ್ದಾರೆ. ಹಲವಾರು ಬಾರಿ ಕೃಷಿಕರ ಸಂಕ್ಷಗಳ ಬಗ್ಗೆ ಸರಕಾರಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದರೂ ಯಾರು ಈ ವಿಚಾರದಲ್ಲಿ ರೈತರ ಪರವಾಗಿ ಮಾತನಾಡುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ರಬ್ಬರ್ ಕೃಷಿಕರು ಮತ್ತು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಮುಂದುವರೆಯಲಿದ್ದು, ಸರಕಾರಗಳನ್ನು ಎಚ್ಚರಿಸಲು ಸಮಾನ ಮನಸ್ಕರೊಂದಿಗೆ ಸೇರಿ ಬೆಳ್ತಂಗಡಿ ಹಾಗೂ ಮಂಗಳೂರಿನಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಮುಖಂಡರುಗಳಾದ ಪ್ರದೀಪ್ ಕೆ.ಸಿ, ವಿ.ಟಿ ಸೆಬಾಸ್ಟಿನ್, ರೋಯಿಜೋಸೆಫ್ ಹಾಗೂ ಅಲ್ಫೋನ್ಸಾ ಉಪಸ್ಥಿತರಿದ್ದದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.