ಬೆಳ್ತಂಗಡಿ: ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ರೋಗಿಯ ಹೆಚ್ಚುವರಿ ಚಿಕಿತ್ಸಾ ವೆಚ್ಚದ ರೂ. 30,000 ತನಕ ಭರಿಸುವ ಯೋಜನೆಯನ್ನು ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಮಂಗಳೂರಿನ ಕೆ.ಎಂ.ಸಿ. ಉಪ ಪ್ರಬಂಧಕ ಡಾ| ಜಯರಾಮ್ ಹೇಳಿದ್ದಾರೆ.
ಅವರು ಬೆಳ್ತಂಗಡಿಯ ಸುದ್ದಿ ಮಾಹಿತಿ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಚಿಕಿತ್ಸಾ ವೆಚ್ಚ ನಿಗದಿತ ಮೊತ್ತಕ್ಕಿಂತ ಮೀರಿದಲ್ಲಿ ಅಂತಹ ರೋಗಿಗಳಿಗೆ ಹೆಚ್ಚುವರಿಯಾಗಿ ರೂ. ಮೂವತ್ತು ಸಾವಿರದಷ್ಟು ಭರಿಸಲು ಸಂಸ್ಥೆ ನಿರ್ಧರಿಸಿದೆ. ಅಲ್ಲದೆ ರೋಗಿಯು ಒಳಗೊಂಡಿರುವ ಸುರಕ್ಷಾ ಯೋಜನೆಯ ಕಾರ್ಡ್ ಅವಧಿ ಮೀರಿದ್ದರೂ ಅಂತಹವರಿಗೆ ಈ ಸೌಲಭ್ಯ ನೀಡಲು ಸಿದ್ಧರಿದ್ದೇವೆ. ಇದು ಆಸ್ಪತ್ರೆಯ ಹಲವು ಜನಪರ ಯೋಜನೆಗಳಿಗೆ ನೂತನ ಸೇರ್ಪಡೆಯಾಗಿದೆ ಎಂದರು.
ಬೆಳ್ತಂಗಡಿ ಸುದ್ದಿ ಮಾಹಿತಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಕೆ.ಎಂ.ಸಿ. ಆಸ್ಪತ್ರೆ ವತಿಯಿಂದ ಪ್ರಾರಂಭಿಸಲಾಗಿರುವ ಕೇಂದ್ರವು 31ನೇ ಕೇಂದ್ರವಾಗಿದೆ. ಇಲ್ಲಿ ಮಂಗಳೂರಿನ ಆಸ್ಪತ್ರೆಗಳಲ್ಲಿ ಇರುವಂತೆಯೇ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುವುದು. ನಮ್ಮ ಜನಪರ ಸೇವಾ ಕಾರ್ಯವನ್ನು ಜನರು ಇರುವಲ್ಲಿಯೇ ತರುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ರೋಗಿಯ ಖರ್ಚುವೆಚ್ಚಗಳ ವಿವರವನ್ನು ಮುಂಚಿತವಾಗಿ ನೀಡುವುದು, ಹೊರರೋಗಿಗಳಿಗೆ ಸಂದರ್ಶನ ಸಮಯವನ್ನು ನಿಗದಿಪಡಿಸುವುದು, ಲ್ಯಾಬ್ ಕಲೆಕ್ಷನ್ ಸೆಂಟರ್, ಕ್ಲಿನಿಕ್ ಸೇವೆ ಮೊದಲಾದ ಸೇವೆಗಳನ್ನು ಕೇಂದ್ರವು ಒಳಗೊಂಡಿರುತ್ತದೆ ಎಂದರು.
ಬೆಳ್ತಂಗಡಿ ಕೇಂದ್ರಕ್ಕೆ ಶಸ್ತ್ರ ಚಿಕಿತ್ಸಾ ತಜ್ಞರ ಹಾಗೂ ಕೀಲು ತಜ್ಞರು ನಿಯಮಿತವಾಗಿ ತಿಂಗಳ 12 ಮತ್ತು 16 ನೇ ದಿನಾಂಕದಂದು ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ವಿಶೇಷ ತಜ್ಞರು ಬರಲಿದ್ದಾರೆ. ಅಂತರ್ಜಾಲದ ಮೂಲಕ ಮಂಗಳೂರಿನಲ್ಲಿರುವ ತಜ್ಞ ವೈದ್ಯರೊಂದಿಗೆ ಸಮಾಲೋಚಿಸುವ ಅವಕಾಶವನ್ನೂ ಮಾಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಆಸ್ಪತ್ರೆಯ ಡಾ| ಸತ್ಯರಾಜ್, ಸುದ್ದಿ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಯು.ಪಿ.ಶಿವಾನಂದ, ಪ್ರಬಂಧಕ ಮಂಜುನಾಥ ರೈ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.