ಸುರತ್ಕಲ್: ಕಾಟಿಪಳ್ಳ ಶ್ರೀಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು 18 ಎಕರೆ ಖಾಸಗಿ ಮೈದಾನ ಪ್ರದೇಶ ಮಧ್ಯಭಾಗದಲ್ಲಿ ಐಎಸ್ಪಿಆರ್ಎಲ್ ಕೊಳವೆ ಅಳವಡಿಸಲು ಮತ್ತು ಪೈಪ್ ದಾಸ್ತಾನು ಮಾಡಿ ಇಡುವುದಕ್ಕಾಗಿ ಗುತ್ತಿಗೆದಾರರು ಮಾಡಿದ ಪ್ರಯತ್ನವನ್ನು ಸ್ಥಳೀಯರು ತಡೆಹಿಡಿದರು.
ಕೆಎಐಡಿಬಿಐ ಕೊಳವೆ ಮಾರ್ಗಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ ಭೂಸ್ವಾಧೀನ ಪಡಿಸಲಾಗಿದೆ ಎಂದು ವರದಿ ಸಲ್ಲಿಸಿ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ್ದರೂ ಇಲ್ಲಿನ 18ಎಕರೆ ಜಮೀನಿನ ನ್ಯಾಯವಾದಿ ಮಾಲೀಕರ ಕೈಗೆ ಇನ್ನೂ ಈ ಬಗ್ಗೆ ಯಾವುದೇ ನೋಟಿಸ್ ಸಿಕ್ಕಿರಲಿಲ್ಲ. ಆದರೆ ಕಾಮಗಾರಿಗೆ ಆಗಮಿಸಿದವರು ನೊಟಿಸ್ ತಲುಪಿದೆ ಎನ್ನುತ್ತಾ ತಮ್ಮ ಫೈಲುಗಳಲ್ಲಿರುವ ದಾಖಲೆಗಳನ್ನು ತೋರಿಸುತ್ತಿರುವುದನ್ನು ಕಂಡು ಬಂದಿತು. ಕೊಳವೆ ಮಾರ್ಗಕ್ಕಾಗಿ ಭೂಮಿಯನ್ನು ಅಗೆಯುವುದಕ್ಕಾಗಿ ಯಾರಿಗೂ ನಿರಾಕ್ಷೇಪಣಾ ಪತ್ರವನ್ನು ಪಂಚಾಯತ್ ನೀಡಿಲ್ಲ ಎಂದು ಈ ವ್ಯಾಪ್ತಿಗೆ ಬರುವ ಪೆರ್ಮುದೆ ಪಂಚಾಯತ್ ಪಿಡಿಒ ತಿಳಿಸಿದ್ದಾರೆ.
ಕೆಎಐಡಿಬಿಐಯ ಶೇಖರ್ ಮೊಯ್ಲಿ ಎಂಬ ಸರ್ವೇಯರ್ ಪೈಪ್ಲೈನ್ ಅಳವಡಿಸುವ ಸಲುವಾಗಿ ಸ್ಥಳವನ್ನು ತೋರಿಸಿದ್ದಾರೆ. ಇಲ್ಲಿನ ಮೈದಾನದಲ್ಲಿ ಪೈಪ್ಲೈನ್ ದಾಸ್ತಾನು ಮಾಡಿ ಇಡಲು ತಮಗೆ ಗುತ್ತಿಗೆದಾರರು ಸೂಚನೆ ನೀಡಿದ್ದಾರೆ. ಅದರಂತೆ ತಾವು ಕಾರ್ಯ ನಿರ್ವಹಿಸಲು ಬಂದಿರುವುದಾಗಿ ಕಾರ್ಯಕರ್ತರು ತಿಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶೇಖರ ಮೊಯ್ಲಿಯವರು ಪೈಪ್ಲೈನ್ ಅಳವಡಿಸುವ ಸಲುವಾಗಿ ತಾನು ಯಾರನ್ನೂ ಕಳುಹಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾನೂನು ಬದ್ಧವಾದ ನೋಟಿಸ್ ನೀಡದೆ ಭೂಮಿ ಕಳೆದುಕೊಳ್ಳುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸರಿಯಾದ ಗಡಿಗುರುತು ಮಾಡದೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಪೈಪ್ಲೈನ್ ಕಾಮಗಾರಿ ಮಾಡುವುದು, ಕೃಷಿ ಭೂಮಿಯ ಸ್ಥಿತಿಯನ್ನು ಬದಲಿಸಿ ರೈತರಿಗೆ ತೊಂದರೆ ನೀಡುವುದು ಸರಿಯಲ್ಲ. ಈಗ ನಡೆದಿದೆ ಎನ್ನಲಾದ ಭೂಸ್ವಾಧೀನವು ಸಂಪೂರ್ಣವಾಗಿ ಬೋಗಸ್ ಆಗಿದ್ದು ಪೈಪ್ಲೈನ್ಗಾಗಿ ಮತ್ತೆ ಕಾನೂನು ಬದ್ಧವಾದ ಸಮೀಕ್ಷೆ ನಡೆಸಿ ಹೊಸ ಕಾಯಿದೆಯಂತೆ ಪರಿಹಾರ ನಿಗದಿ ಮಾಡಿ, ಮೂಲಭೂತ ವ್ಯವಸ್ಥೆಗಳನ್ನು ಪೂರೈಸಿದ ಬಳಿಕ ಪೈಪ್ಲೈನ್ ಅಳವಡಿಸಬೇಕೆಂಬುದು ರೈತರ ಬೇಡಿಕೆಯಾಗಿದೆ.
ಈ ಸಂದರ್ಭದಲ್ಲಿ ಪೈಪ್ಲೈನ್ ಬಾಧಿತ ಸ್ಥಳೀಯರಾದ ಸುರೇಶ್ ಶೆಟ್ಟಿ, ಭೋಜ ಶೆಟ್ಟಿ, ಪ್ರಫುಲ್ಲಚಂದ್ರ ರೈ, ಜಗನ್ನಾಥ ಶೆಟ್ಟಿ, ರತ್ನಾ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.