ಬೆಳ್ತಂಗಡಿ : ತಾಲೂಕಿನ ಮೊದಲ ಬಾನುಲಿ ಕೇಂದ್ರ ‘ರೇಡಿಯೋ ನಿನಾದ’ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಡಿ. 28 ರಿಂದ ಕಾರ್ಯಾರಂಭಗೊಳ್ಳಲಿದ್ದು ಅಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರು ಚಾಲನೆ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಯಶೋವರ್ಮ ತಿಳಿಸಿದರು.ಅವರು ಶನಿವಾರ ಕಾಲೇಜಿನಲ್ಲಿ ಪತ್ರಿಕಾಗೊಷ್ಠಿ ನಡೆಸಿ ಕೇಂದ್ರದ ಬಗ್ಗೆ ವಿವರ ನೀಡಿದರು.
ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಪರವಾನಗಿಯೊಂದಿಗೆ ಆರಂಭಗೊಳ್ಳುತ್ತಿರುವ ಈ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮಗಳು 90.4 ತರಂಗಾಂತರದಲ್ಲಿ ಸುಮಾರು 25 ಕಿ.ಮೀ. ಸುತ್ತಳತೆ ವ್ಯಾಪಿಯಲ್ಲಿ ಪ್ರಸಾರಗೊಳ್ಳಲಿವೆ. ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಧ್ವನಿಮುದ್ರಣದ ಸ್ಟುಡಿಯೋವನ್ನು ರಚಿಸಲಾಗಿದೆ. ರೇಡಿಯೋ ಪ್ರಸಾರಕ್ಕೆ ಸರ್ವ ಸಿದ್ದತೆಗಳು ಪೂರ್ಣಗೊಂಡಿದ್ದು ಕೇಂದ್ರದ ಪ್ರಸಾರದ ಪರೀಕ್ಷಾರ್ಥ ಪ್ರಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಕಾರ್ಯಕ್ರಮದ ಲಭ್ಯತೆ ಧೃಢವಾಗಿದೆ. ತಾಲೂಕಿನ 81 ಹಳ್ಳಿ ವ್ಯಾಪ್ತಿಗೂ ಪ್ರಸಾರವಾಗಬಹುದೆಂದು ತಂತ್ರಜ್ಞಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಪತ್ರಿಕೋದ್ಯಮ ವಿಭಾಗದ ನಿರ್ವಹಣೆಯಲ್ಲಿ ನಡೆಯಲಿರುವ ಈ ಬಾನುಲಿ ಕೇಂದ್ರದಲ್ಲಿ ಸದ್ಯಕ್ಕೆ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಿಂದ 9 ಗಂಟೆಯವರೆಗೆ ವಿವಿಧ ಕಾರ್ಯಕ್ರಮಮಗಳ ಪ್ರಸಾರದ ಉದ್ದೇಶ ಹೊಂದಲಾಗಿದೆ. ಬೆಳಗ್ಗೆ ಪ್ರಸಾರವಾದ ಕಾರ್ಯಕ್ರಮಗಳನ್ನು ಸಂಜೆ 5 ಗಂಟೆಯಿಂದ 6 ಗಂಟೆಯವರಿಗೆ ಮರುಪ್ರಸಾರಗೊಳಿಸಲಾಗುತ್ತದೆ. ಯಾವುದೇ ರೇಡಿಯೋ ಸೆಟ್ಗಳ ಮೂಲಕ, ಸೆಲ್ಫೋನ್ ಮೂಲಕ ಮನೆಯಲ್ಲಿ ಹಾಗೂ ವಾಹನ ಸಂಚಾರ ಸಮಯದಲ್ಲಿ ನಿನಾದದಲ್ಲಿ ಬರುವ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ತಾಲೂಕಿನ ಅಭಿವೃದ್ಧಿ ಹಾಗೂ ಸಾಮಾಜಿಕ ಬದಲಾವಣೆ ಕೇಂದ್ರದ ಪ್ರಮುಖ ಉದ್ದೇಶ ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನಿರ್ವಹಣೆಯಲ್ಲಿ ನಡೆಯಲಿರುವ ಈ ಆಕಾಶವಾಣಿ ಕೇಂದ್ರದ ಮೂಲಕ ತಾಲೂಕಿನ ಶಾಲಾ,ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕೃಷಿಕರು, ಉದ್ಯಮಿಗಳು, ವಿವಿಧ ಧರ್ಮಿಯರ, ಸಂಘ ಸಂಸ್ಥೆಗಳನ್ನೊಳಗೊಂಡ ಸ್ಥಳೀಯ ಸಮುದಾಯಕ್ಕೆ ಉಪಯುಕ್ತವಾಗುವ ಮಾಹಿತಿ, ಕಾರ್ಯಕ್ರಮ ಹಾಗೂ ಮನರಂಜನೆ ನೀಡುವುದು ಪ್ರಮುಖ ಉದ್ಧೇಶವಾಗಿದೆ. ಕಲೆ, ಸಂಸ್ಕೃತಿ, ಆಚಾರ, ವಿಚಾರ, ಜನಜೀವನ, ವೈದ್ಯಕೀಯ ಸೇವೆ, ಸ್ವ ಉದ್ಯೋಗ, ಸಾಧಕರ ಮಾಹಿತಿ, ಹಬ್ಬ ಹರಿದಿನ ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ಇಲ್ಲಿ ವಿಶೇಷ ಅವಕಾಶ ನೀಡಲಾಗುತ್ತದೆ. ಪರಿಸರ ಸಂಬಂಧಿತ ಕಾರ್ಯಕ್ರಮ , ಪ್ರವಾಸೋದ್ಯಮ, ನಾಟಕ, ಯಕ್ಷಗಾನಗಳು ಪ್ರಸಾರವಾಗಲಿವೆ. ಸ್ಥಳೀಯ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಡೆಸಲಾಗುತ್ತದೆ. ತಾಲೂಕಿನ ಸಮುದಾಯದವರಿಗೆ ಈ ಕೇಂದ್ರದಲ್ಲಿ ಭಾಗಿಯಾಗಿ ಕಾರ್ಯಕ್ರಮ ನೀಡಲು ಮುಕ್ತ ಅವಕಾಶ ನೀಡಲಾಗುತ್ತದೆ ಮತ್ತು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ. ಸುದ್ದಿ ಪ್ರಸಾರಕ್ಕೆ ಅವಕಾಶವಿಲ್ಲ ಎಂದು ಪ್ರಾಚಾರ್ಯರು ವಿವರಿಸಿದರು.
ಬಾನುಲಿ ಮತ್ತೆ ಜನಪ್ರಿಯವಾಗುತ್ತಿದ್ದು, ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ದೃಷ್ಟಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ತರಬೇತಿ ಕೇಂದ್ರವಾಗಿಯೂ ನಿನಾದ ಕಾರ್ಯನಿರ್ವಹಿಸಲಿದೆ. ಎಂದ ಅವರು ಕೇಂದ್ರದ ಯಶಸ್ಸಿಗೆ ತಾಲೂಕಿನ ಜನತೆಯ ಸಹಕಾರವನ್ನು ಕೋರಿದರು. ರಾಜ್ಯದಲ್ಲಿ ಈಗಾಗಾಲೇ ಸುಮಾರು 15 ಸಮುದಾಯ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದ.ಕ.ಜಿಲ್ಲೆಯಲ್ಲಿ ನಾಲ್ಕನೆಯ ಹಾಗೂ ತಾಲೂಕಿನ ಮೊದಲ ಕೇಂದ್ರವಾಗಿ ರೇಡಿಯೋ ನಿನಾದ 90.4 ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಕಾರ್ಯಾರಂಭಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.