ಪುತ್ತೂರು : ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಪುತ್ತೂರು ಘಟಕದ ಅಧ್ಯಕ್ಷರಾಗಿ ನೇತ್ರತಜ್ಞ ಡಾ| ವಿಶ್ವನಾಥ ಭಟ್ ಕಾನಾವು, ಕಾರ್ಯದರ್ಶಿಯಾಗಿ ಚರ್ಮರೋಗ ತಜ್ಞ ಡಾ| ನರಸಿಂಹ ಶರ್ಮ ಕಾನಾವು, ಕೋಶಾಧಿಕಾರಿ ರೇಡಿಯೋಲಜಿಸ್ಟ್ ಡಾ| ಅಶೋಕ್ ಜಿ.ಕೆ. ಪದಗ್ರಹಣ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ವೈದ್ಯಕೀಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಮಂಗಳೂರು ಶಾಖೆಯ ನಿಕಟಪೂರ್ವ ಅಧ್ಯಕ್ಷ ಡಾ| ಜಿ.ಕೆ. ಭಟ್ ಸಂಕಬಿತ್ತಿಲು,ವೈದ್ಯಕೀಯ ಸೇವೆಯು ಸಮಾಜದ ಎಲ್ಲಾ ಜನರಿಗೂ ಅಗತ್ಯವಾಗಿದೆ. ಹೀಗಾಗಿ ನೂತನವಾಗಿ ವೈದ್ಯಕೀಯ ಸೇವೆಯತ್ತ ಬರುವವರು ಸೇವೆಯೇ ಮೊದಲ ಆದ್ಯತೆಯಾಗಿರಬೇಕು, ವೈದ್ಯಕೀಯ ತಜ್ಞರು ಮಾತ್ರ ಎಲ್ಲಾ ರೋಗಗಳಿಗೆ ಮದ್ದು ನೀಡಬಲ್ಲವರು ಎಂಬುದೂ ನೆನಪಿರಬೇಕು. ಸಂಘದ ಮೂಲಕ ಉತ್ತಮ ಕಾರ್ಯಗಳು ನಡೆಯಲಿ ಎಂದು ಹೇಳಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಮಂಗಳೂರು ಶಾಖೆಯ ನಿಕಟಪೂರ್ವ ಅಧ್ಯಕ್ಷ ಡಾ| ಜಿ.ಕೆ. ಭಟ್ ಸಂಕಬಿತ್ತಿಲು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿದರು.
ಅಧ್ಯಕ್ಷತೆಯನ್ನು ಸ್ವೀಕರಿಸಿದ ಡಾ|ವಿಶ್ವನಾಥ ಭಟ್ ಕಾನಾವು, ಮುಂದಿನ ದಿನಗಳಲ್ಲಿ ಪ್ರತೀ ತಿಂಗಳಿಗೊಮ್ಮೆ ಸಭೆ ನಡೆಸುವುದರ ಜೊತೆಗೆ, ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ, ಎಲ್ಲಾ ಜನರಿಗೂ ಸೇವೆ ಹಾಗೂ ವೈದ್ಯರಿಗೂ ಸೂಕ್ತ ರಕ್ಷಣೆ, ಭದ್ರತೆ ಕಡೆಗೂ ಗಮನಹರಿಸಬೇಕಿದೆ.ಈ ಎಲ್ಲಾ ಕಾರ್ಯಗಳಿಗೂ ಸರ್ವರ ಸಹಕಾರ ಅಗತ್ಯ ಎಂದರು.
ನಿರ್ಗಮನ ಅಧ್ಯಕ್ಷ ಎಲುಬು ಮತ್ತು ಕೀಲು ತಜ್ಞ ಡಾ| ಭಾಸ್ಕರ್ ಎಂ. ಮಾತನಾಡಿ, ಅಧ್ಯಕ್ಷತೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಷತೆ ಸಲ್ಲಿಸಿದರು. ಮಕ್ಕಳ ತಜ್ಞ ಡಾ| ಶ್ರೀಕಾಂತ್ ರಾವ್ ಐಎಂಎಗೆ ಬೇಕಾಗುವ ಸ್ವಂತ ಕಟ್ಟಡದ ಬಗ್ಗೆ ಮಾಹಿತಿ ನೀಡಿದರು.
ಚರ್ಮರೋಗ ತಜ್ಞ ಡಾ| ಬದರಿನಾಥ್ ಪ್ರಾರ್ಥಿಸಿದರು.ಎಲುಬು ಮತ್ತು ಕೀಲು ತಜ್ಞ ಡಾ| ಭಾಸ್ಕರ್ ಎಂ ಸ್ವಾಗತಿಸಿ, ರೇಡಿಯೋಲಜಿಸ್ಟ್ ಡಾ| ಅಶೋಕ್ ಜಿ.ಕೆ ವರದಿ ವಾಚಿಸಿದರು. ನಿರ್ಗಮನ ಕೋಶಾಧಿಕಾರಿ ಅರಿವಳಿಕೆ ತಜ್ಞ ಡಾ.ರವೀಂದ್ರ ಲೆಕ್ಕಪತ್ರ ಮಂಡಿಸಿದರು.ನೂತನ ಕಾರ್ಯದರ್ಶಿ ಚರ್ಮರೋಗ ತಜ್ಞ ಡಾ| ನರಸಿಂಹ ಶರ್ಮ ಕಾನಾವು ವಂದಿಸಿದರು.ಪ್ರಸೂತಿ ತಜ್ಞ ಡಾ.ಅನಿಲ್ ಬೈಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.