ಬೆಳ್ತಂಗಡಿ : ವಿಧಾನ ಪರಿಷತ್ ಚುನಾವಣೆಯಲ್ಲಿ ನಿಷ್ಕಳಂಕ, ಸರಳ ವ್ಯಕ್ತಿತ್ವದ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಲು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬೆಳ್ತಂಗಡಿ ಬ್ಲಾಕ್ ಅಧ್ಯಕ್ಷ ಹರೀಶ್ ಕುಮಾರ್ ವಿನಂತಿಸಿದ್ದಾರೆ. ಅವರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಎರಡನೇ ಪ್ರಾಶಸ್ತ್ಯದ ಮತವನ್ನು ಚಲಾಯಿಸದಂತೆ ಅವರು ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ನಾಲ್ಕು ಸಲ ಶಾಸಕರಾಗಿದ್ದು ಯಾವುದೇ ಕಪ್ಪುಚುಕ್ಕೆಯನ್ನು ಅಂಟಿಸಿಕೊಳ್ಳದ ನಿಷ್ಕಳಂಕ ವ್ಯಕ್ತಿ. ಶೋಷಿತರ, ಬಡವರ ಪರವಾಗಿರುವ ಇವರು ಭ್ರಷ್ಟಾಚಾರದ ಸೋಂಕು ಇಲ್ಲದೆ ಸರಳ, ಉತ್ತಮಗುಣದ ವ್ಯಕ್ತಿತ್ವವನ್ನು ಹೊಂದಿ ಜನಪ್ರಿಯವಾಗಿದ್ದಾರೆ. ವಿಧಾನ ಪರಿಷತ್ನಲ್ಲಿ ಗ್ರಾ.ಪಂ.ಗಳ ವಿದ್ಯುತ್ ಬಿಲ್ ಸರಕಾರವೇ ಭರಿಸುವಂತೆ ಸತತ ಒತ್ತಾಯ ಮಾಡಿದ್ದಾರೆ. ತಮ್ಮ ಕ್ಷೇತ್ರದ 15 ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲಾ ಪಂ.ಗಳಿಗೆ ಭೇಟಿ ಮಾಡಿದ ಎಕೈಕ ಶಾಸಕರೆಂದರೆ ಪ್ರತಾಪಚಂದ್ರ ಶೆಟ್ಟಿಯವರಾಗಿದ್ದಾರೆ. ಅವರು ತಮಗೆ ಬಂದ ಅನುದಾನವನ್ನು ಸಮಾನವಾಗಿ ಪಂ.ಗಳಿಗೆ ಹಂಚಿದ್ದಾರೆ. ಇವರು ತಾನು ಸ್ಪರ್ಧಿಸುವುದಿಲ್ಲ. ಹೊಸಬರಿಗೆ ಅವಕಾಶ ನೀಡಿ ಎಂದು ವಿನಂತಿಸಿದ್ದರು.
ಆದರೆ ಇವರನ್ನು ಪಕ್ಷದ ಮಂತ್ರಿ, ಶಾಸಕರುಗಳು ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಅದನ್ನು ಶೆಟ್ಟಿಯವರು ಪಕ್ಷದ ನಿಷ್ಠಾವಂತ ಸದಸ್ಯನಾಗಿ ಸ್ವೀಕರಿಸಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದ ಅವರು ಬೆಳ್ತಂಗಡಿಯಲ್ಲಿ ಪಕ್ಷದ ಅಭ್ಯರ್ಥಿ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಪಕ್ಷಕ್ಕೆ 323 ಮತವಿದ್ದು ಅದಕ್ಕಿಂತಲೂ ಹೆಚ್ಚಾಗಿ ಪ್ರಥಮ ಪ್ರಾಶಸ್ತ್ಯದ ಮತ ಸಿಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಂಡಾಯ ಅಭ್ಯರ್ಥಿಗಳ ಬಗ್ಗೆ ಮಾತನಾಡಿದ ಹರೀಶ್ ಅವರು, ಜಯಪ್ರಕಾಶ್ ಹೆಗ್ಡೆ ಅವರು ಕಳೆದ 6 ವರ್ಷದಲ್ಲಿ ಒಂದು ಬಾರಿ ವಿಧಾನ ಸಭೆಗೆ, ಮೂರು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದರೂ ಇನ್ನೂ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವ ಅವಶ್ಯಕತೆ ಏನಿತ್ತು. ಎಲ್ಲರಂತೆ ಹರಿಕೃಷ್ಣ ಬಂಟ್ವಾಳ ಅವರಿಗೂ ಟಿಕೆಟ್ ಕೇಳುವ ಹಕ್ಕು ಇದೆ. ಆದರೆ ಪಕ್ಷದ ಸೂಚನೆ ಮೀರಿ ನಿಂತವರು ನಿಷ್ಠಾವಂತ ಕಾಂಗ್ರೇಸಿಗಲಾರರು. ಪಕ್ಷದ ಮಾತನ್ನು ಧಿಕ್ಕರಿಸುವವರನ್ನು ಉಚ್ಛಾಟಿಸಲಾಗಿದೆ ಎಂದರು.ಗೋಷ್ಠಿಯಲ್ಲಿ ಪಕ್ಷದ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಾಮಚಂದ್ರ ಗೌಡ, ಜಿ.ಪಂ.ಸದಸ್ಯ ಶೈಲೇಶ್ ಕುಮಾರ್, ರಾಜೇಶ್ ಮೂಡುಕೋಡಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.