ಬೆಳ್ತಂಗಡಿ : ಮದ್ಯಪಾನಮುಕ್ತರಾಗಿ ಶ್ರೀ ಕ್ಷೇತ್ರಧರ್ಮಸ್ಥಳಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಭಾಗ್ಯವನ್ನು ಪಡೆಯುವುದು ಶ್ರೇಷ್ಠ ಭಕ್ತಿಯ ಪ್ರತೀಕವಾಗಿದೆ. ಹಲವಾರು ವರ್ಷಗಳಿಂದ ಕುಡಿತವೆಂಬ ಮಾರಣಾಂತಿಕ ವ್ಯಾದಿಗೆ ಸಿಲುಕಿ ಒದ್ದಾಡುತ್ತಿರುವ ಕುಟುಂಬಗಳಿಗೆ ಈ ಭೇಟಿಯು ಸ್ವರ್ಗೀಯ ಸುಖದ ಅನುಭವ ಪಡೆಯುವುದರಲ್ಲಿ ಸಂಶಯವಿಲ್ಲ. ಈ ಸಂತೋಷ ತಾತ್ಕಾಲಿಕವಾಗಿರದೆ ಶಾಶ್ವತವಾಗಿರಬೇಕು. ಹಳೆ ಸ್ನೇಹಿತರಿಂದ ದೂರವಿದ್ದು, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಕಳೆದುಹೋದ ಹಣ, ಪ್ರೀತಿ, ಆರೋಗ್ಯ ಸಂಪಾದಿಸಬೇಕು. ಯಾವುದೇ ಒತ್ತಡ, ಒತ್ತಾಸೆಗಳಿಗೆ ಮಣಿಯದೆ ದೃಢಸಂಕಲ್ಪದೊಂದಿಗೆ ನೆಮ್ಮದಿಯಜೀವನ ನಡೆಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಕುಂಬ್ಳೆ, ಬೆಳಗಾವಿ, ಗಂಗಾವತಿ, ಕೆ.ಆರ್.ಪೇಟೆ., ಮದ್ದೂರು, ರಾಮದುರ್ಗಾ, ಸಿರಗುಪ್ಪ, ಮೂಡಿಗೆರೆ, ಉಡುಪಿಯಲ್ಲಿ ನಡೆದ ಮದ್ಯವರ್ಜನ ಶಿಬಿರಗಳ ಒಟ್ಟು 692 ಶಿಬಿರಾರ್ಥಿಗಳ ಶತದಿನೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಯಾತ್ರೆಯ ಸಂಧರ್ಭದಲ್ಲಿ ವಸಂತ ಮಹಲ್ನಲ್ಲಿ ಹಮ್ಮಿಕೊಂಡಂತಹ ಸಹಮಿಲನ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು.
ಮದ್ಯವರ್ಜನ ಶಿಬಿರಗಳಲ್ಲಿ ನಿಗದಿತ ಪಠ್ಯವಸ್ತುವಿನೊಂದಿಗೆ ಶಿಬಿರಾರ್ಥಿಗಳನ್ನು ಮನವೊಲಿಸಲಾಗುತ್ತಿದೆ. ಶ್ರೀ ಕ್ಷೇತ್ರದ ಅಪಾರ ಭಕ್ತಿಯುಳ್ಳ ಶಿಬಿರಾರ್ಥಿಗಳು ಪಾನಮುಕ್ತತೆಯ 100 ನೇ ದಿನವನ್ನು ಸ್ವಾಮಿಯದರ್ಶನ ಪಡೆದು ಹೆಗ್ಗಡೆಯವರ ಆಶೀರ್ವಾದದೊಂದಿಗೆ ಆಚರಿಸಬೇಕೆಂಬ ಅಪೇಕ್ಷೆಯಂತೆ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿ.ಪಾಸ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಂಬ್ಳೆ ಕಾಸರಗೋಡು ಜಿಲ್ಲಾ ವೇದಿಕೆಯ ಅಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲು, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಶಿಬಿರಾಧಿಕಾರಿಗಳಾದ ದೇವಿಪ್ರಸಾದ್, ನಂದಕುಮಾರ್, ಮನೋಹರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.