ಚೆನ್ನೈಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಭಾಗವಾಗಿ ಅಲ್ಲಿನ ಸ್ವಯಂಸೇವಕ ಸಂಘಗಳು ಹಗಲು, ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಪ್ರವಾಹದಿಂದಾಗಿ ಶಾಲಾ-ಕಾಲೇಜುಗಳನ್ನು ಹಲವು ದಿನಗಳ ಕಾಲ ಮುಚ್ಚಲಾಗಿತ್ತು. ಆದರೀಗ ಪರೀಕ್ಷೆಗಳು ಸಮೀಪಿಸುತ್ತಿವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದೀಗ ಹಲವಾರು ಸ್ವಯಂಸೇವಕ ಸಂಘಗಳು 10ನೇ ಮತ್ತು 12ನೇ ತರಗತಿಯ ಅಸಹಾಯಕ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಹೇಳಿಕೊಡಲು ಮುಂದಾಗಿವೆ.
ವಿವಿಧ ಸಂಘಗಳು ಈ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ನೀಡಬಲ್ಲ ಅಧ್ಯಾಪಕರನ್ನು ಸಂಪರ್ಕಿಸುತ್ತಿವೆ. ವಿದ್ಯಾರ್ಥಿಗಳು ಪ್ರವಾಹದಿಂದಾಗಿ ಮೂರು ವಾರಗಳ ಕಾಲ ಕೇವಲ ತಮ್ಮ ಪಾಠಗಳಿಂದ ವಿಮುಖರಾಗಬೇಕಾಗಿ ಬಂತು. ಅಲ್ಲದೇ ಪಠ್ಯಪುಸ್ತಕ, ನೋಟ್ಸ್ಗಳಂತಹ ಹಲವಾರು ಸಾಮಾಗ್ರಿಗಳನ್ನು ಕಳೆದುಕೊಂಡಿದ್ದಾರೆ. ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಬೋರ್ಡ್ ಪರೀಕ್ಷೆಗಳನ್ನು ಬರೆಯಲಿರುವ ಈ ವಿದ್ಯಾರ್ಥಿಗಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.
ಇಂತಹ ವಿದ್ಯಾರ್ಥಿಗಳಿಗಾಗಿ ಶ್ರಮಿಸುತ್ತಿರುವ ಸಂಘಗಳಲ್ಲಿ ಬೆಸೆಂಟ್ ನಗರದ ಸೀನಿಯರ್ ಸಿಟಿಝನ್ಸ್ ಗ್ರೂಪ್ ಆಫ್ ಬೆಸೆಂಟ್ ನಗರ್ (SCGOBN) ಸಂಘ ಒಂದಾಗಿದೆ. ನಗರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಸಕ್ರಿಯವಾಗಿ ನಡೆಸಲು SCGOBN ಸಂಘವನ್ನು 2012ರಲ್ಲಿ ಸ್ಥಾಪಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಪ್ರಾ. ವಿ. ಚಂದ್ರಶೇಖರ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈಗಾಗಲೇ ಅಲ್ಲಿನ ಸ್ಲಂ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಬೇತಿ ಆರಂಭಿಸಿದ್ದಾರೆ. ಚೆನ್ನೈಯ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಕೂಡ ವ್ಯಾಸರಪಾಡಿ ಮತ್ತು ಪೆರಂಬೂರ್ನ ಹಲವು ಆಯ್ದ ಶಾಲೆಗಳಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಗಣಿತ ಹಾಗೂ ವಿಜ್ಞಾನ ಪಾಠಗಳನ್ನು ಆರಂಭಿಸಿದ್ದಾರೆ. ಶಾಲಾ ಅಧಿಕಾರಿಗಳು ಪಾಠಗಳನ್ನು ನಡೆಸಲು ಪ್ರತ್ಯೇಕ ಕೊಠಡಿಗಳನ್ನು ಮೀಸಲಿಟ್ಟಿದ್ದಾರೆ. ರೈಲ್ವೆ ಅಧಿಕಾರಿಗಳ ಕುಟುಂಬ ಸದಸ್ಯರುಗಳು ಕೂಡ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.