ಉಡುಪಿ : ಶ್ರೀಕೃಷ್ಣನ ಪೂಜಾಧಿಕಾರ ಸ್ವೀಕರಿಸಲು ಪೇಜಾವರಶ್ರೀಗಳಿಗೆ ಬಾಕಿಯಿರುವುದು ಇನ್ನು ಒಂದೇ ತಿಂಗಳು. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಇಂದು ಮಠದಲ್ಲಿ ಚಪ್ಪರ ಮಹೂರ್ತ ನಡೆಯಿತು. ಈಗಾಗಲೇ ನಾಲ್ಕು ಮಹೂರ್ಥಗಳು ಪೂರ್ಣಗೊಂಡಿದ್ದು, ನಿನ್ನೆ ವಿಧಿವತ್ತಾಗಿ ಚಪ್ಪರ ಮಹೂರ್ಥ ನೆರವೇರಿತು. ಇನ್ನು ಒಂದು ತಿಂಗಳ ಕಾಲ ಚಪ್ಪರಗಳನ್ನು ವಿವಿಧೆಡೆ ಹಾಕಲಾಗುತ್ತದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಈಗ ಕಾಣಿಯೂರು ಮಠದ ಪರ್ಯಾಯ ನಡೆಯುತ್ತಿದೆ. ಜನವರಿ 17ರಿಂದ ಪೇಜಾವರ ಪರ್ಯಾಯ ಆರಂಭವಾಗಲಿದೆ. ಮುಂದಿನ ಎರಡು ವರ್ಷಗಳ ಕಾಲ ವಿಶ್ವೇಶತೀರ್ಥರು ಶ್ರೀಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಪಡೆಯಲಿದ್ದಾರೆ. ಈಗಾಗಲೇ ಬಾಳೆ, ಕಟ್ಟಿಗೆ, ಭತ್ತ, ಧಾನ್ಯ ಮಹೂರ್ಥ ನಡೆದಿದ್ದು ನಿನ್ನೆ ಚಪ್ಪರ ಮಹೂರ್ಥ ನೆರವೇರಿತು. ಚಪ್ಪರ ಮಹೂರ್ಥಕ್ಕೆ ಮುನ್ನ ಅನಂತೇಶ್ವರ, ಕೃಷ್ಣ ಮಠ, ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡಲಾಯಿತು.
ಮಠದ ರಾಜಾಂಗಣ, ಪಾರ್ಕಿಂಗ್ ಏರಿಯಾದಲ್ಲಿ ಅಡಿಕೆ ಮರವನ್ನು ಸಿಂಗರಿಸಿ ನೆಡುವ ಮೂಲಕ ಚಪ್ಪರ ಮಹೂರ್ಥಕ್ಕೆ ಚಾಲನೆ ನೀಡಲಾಯಿತು. ಪರ್ಯಾಯ ದರ್ಬಾರ್ ಈ ಬಾರಿ ರಾಜಾಂಗಣದಿಂದ ಸ್ಥಳಾಂತರವಾಗಲಿದೆ. ಹೀಗಾಗಿ ಪಾರ್ಕಿಂಗ್ ವ್ಯಾಪ್ತಿಯಲ್ಲಿ ಬೃಹತ್ ಸಭಾಂಗಣ ಮಾಡಲಾಗುತ್ತದೆ.
ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್, ಸಚಿವ ವಿನಯ ಕುಮಾರ್ ಸೊರಕೆ ಸೇರಿದಂತೆ ಮಠದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನವರಿ 17 ಮತ್ತು 18ರ ನಡುವೆ ಪೂಜಾಧಿಕಾರ ಕಾಣಿಯೂರು ಸ್ವಾಮೀಜಿಯವರಿಂದ ಪೇಜಾವರಶ್ರೀಗಳಿಗೆ ಹಸ್ತಾಂತರವಾಗಲಿದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಈ ಬಾರಿ ಪಾಲ್ಗೊಳ್ಳಲಿದ್ದು ನಾಲ್ಕು ಎಕರೆ ವ್ಯಾಪ್ತಿಯಲ್ಲಿ ಹೊರೆಕಾಣಿಕೆ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಪೇಜಾವರಶ್ರೀಗಳು ಈ ಹಿಂದೆಯೇ ಶಿಷ್ಯ ಸ್ವೀಕಾರ ಮಾಡಿದ್ದರು. ಭಕ್ತರ ಮತ್ತು ಕಿರಿಯ ಶ್ರೀಗಳ ಮನವೊಲಿಕೆಯಿಂದ ಶ್ರೀಗಳು 5ನೇ ಪರ್ಯಾಯ ಪೀಠಕ್ಕೇರಲಿದ್ದಾರೆ. ಅಷ್ಟಮಠಗಳ ಹಿರಿಯ ಶ್ರೀಗಳಾದ ವಾದಿರಾಜ ಸ್ವಾಮಿಗಳು ಐದು ಬಾರಿ ಪರ್ಯಾಯ ಪೀಠಕ್ಕೇರಿದ್ದರು. ಪೇಜಾವರಶ್ರೀಗಳು ಈ ದಾಖಲೆಯನ್ನು ಸರಿಗಟ್ಟಿ ಐದನೇ ಬಾರಿ ಸಿಂಹಾಸನವೇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.