ಹೈದರಾಬಾದ್: ಭವಿಷ್ಯದಲ್ಲಿ ಪೊಲೀಸ್ ಕಮಿಷನರ್ ಆಗಿ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂಬ ಕನಸು ಮಡಿಪಲ್ಲಿ ರೂಪ್ ಅರೋನ ಎಂಬ 8 ವರ್ಷದ ಬಾಲಕನದ್ದು, ಆದರೆ ಆತನ ಕನಸು ಈಡೇರಿಕೆ ವಿಧಿ ಸಾಥ್ ನೀಡುತ್ತಿಲ್ಲ. ಥಲಸ್ಸಿಮಿಯಾ ಕಾಯಿಲೆಯಿಂದ ಬಳಲುತ್ತಿರುವ ಆತ ಸಾವಿನ ಭಯದಿಂದಲೇ ಜೀವನ ದೂಡಬೇಕಾಗಿದೆ.
ಆದರೆ ಪೊಲೀಸ್ ಕಮಿಷನರ್ ಆಗುವ ಆತನ ಅದಮ್ಯ ಆಸೆಯನ್ನು ಈಡೇರಿಸಲು ಬಯಸಿರುವ ಆತನ ಪೋಷಕರು ಆ ಬಗ್ಗೆ ಮೇಕ್-ಎ-ವಿಶ್ ಫೌಂಡೇಶನ್ಗೆ ಮಾಹಿತಿ ನೀಡಿದ್ದಾರೆ. ಇದರಂತೆ ಫೌಂಡೇಶನ್ ಹೈದರಾಬಾದ್ ಪೊಲೀಸ್ ಇಲಾಖೆಗೆ ರೂಪ್ ಬಗ್ಗೆ ತಿಳಿಸಿ, ಆತನ ಆಸೆ ಈಡೇರಿಕೆಗೆ ನೆರವಾಗುವಂತೆ ಕೋರಿದೆ.
ತಕ್ಷಣ ಸ್ಪಂದಿಸಿದ ಪೊಲೀಸ್ ಇಲಾಖೆ ರೂಪ್ನನ್ನು ಮಂಗಳವಾರ ಒಂದು ದಿನ ಕಮಿಷನರ್ ಆಗಿ ನೇಮಿಸಿದೆ. ಒಂದು ದಿನದಲ್ಲಿ ಆತನ ಇಲಾಖೆಯಲ್ಲಿ ಪೆಂಡಿಂಗ್ ಇದ್ದ ಕಡತಗಳಿಗೆ ಸಹಿ ಹಾಕಿದ್ದಾನೆ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಾನು ಅಪರಾಧ ಪ್ರಕರಣಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾನೆ.
ರೂಪ್ಗೆ ಪ್ರತಿ 20-25 ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡುತ್ತಿರಬೇಕು, ದೇಹದ ಐರನ್ ಅಂಶವನ್ನು ಸಮತೋಲದಲ್ಲಿ ಇಡಲು ಆಹಾರ ಮತ್ತು ಔಷಧಗಳನ್ನು ನಿಯಮಿತವಾಗಿ ಪಾಲಿಸುತ್ತಿರಬೇಕು. ಈ ಸ್ಥಿತಿಯಲ್ಲೂ ಆತ ಲವಲವಿಕೆಯಿಂದ ಒಂದು ದಿನ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದಾನೆ.
ಈ ಹಿಂದೆ ಕೂಡ ಕ್ಯಾನ್ಸರ್ ಪೀಡಿತ ೧೦ ವರ್ಷದ ಬಾಲಕನಿಗೆ ಹೈದರಾಬಾದ್ ಪೊಲೀಸ್ ಕಮಿಷನರ್ ಆಗುವ ಅವಕಾಶ ಕಲ್ಪಿಸಿಕೊಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.