ಕಾರ್ಕಳ: ಯಾಂತ್ರ್ರೀಕೃತ ಯುಗ ನಮ್ಮದಾಗಿದ್ದು, ನೂತನ ಆವಿಷ್ಕಾರಗಳ ಜತೆಗೆ ತಾಂತ್ರಿಕತೆಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಅವರು ಗುಂಡ್ಯಡ್ಕದಲ್ಲಿ ಬುಧವಾರ ಮಹಿಳಾ ಪಾಲಿಟೆಕ್ನಿಕ್ನ ನೂತನ ಕಟ್ಟಡವನ್ನು ಉದ್ಘಾಟಿಸಿ, ತಂತ್ರಜ್ಞಾನದಲ್ಲಿ ಭಾರತವು ವಿಶ್ವದ ಮುಂಚೂಣಿಯಲ್ಲಿದ್ದು, ಮುಂದಿನ ೧೫ ವರ್ಷದೊಳಗೆ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಆ ಹಿನ್ನೆಲೆಯಲ್ಲಿ ಯುವಜನಾಂಗ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಮಹಿಳಾ ಪಾಲಿಟೆಕ್ನಿಕ್ನಲ್ಲಿ ಪ್ರಸ್ತುತ ಇಲ್ಲಿರುವುದು ೭೯ ವಿದ್ಯಾರ್ಥಿಗಳು ಮತ್ತು ೨೫ ಸಿಬ್ಬಂದಿಗಳು. ೯.೦೪ ಕೋ.ರೂ ವ್ಯಯಿಸಿ ಸುಂದರವಾದ ಕಟ್ಟಡ ನಿರ್ಮಾಣದ ಮೂಲಕ ತಾಂತ್ರಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡುತ್ತಿರುವುದು ರಾಜ್ಯದಲ್ಲೇ ದಾಖಲೆ ಎನ್ನಬಹುದು. ಆದರೆ ಮುಂದಿನ ದಿನಗಳಲ್ಲಿ ಬೇಡಿಕೆ ಪಟ್ಟಿಯೊಂದಿಗೆ ಕಲಿಕಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಹೊಣೆಗಾರಿಕೆ ಇಲಾಖಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ಹೊಣೆಯಾಗಿದೆ. ಅಲ್ಲದೆ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೋ-ಎಜ್ಯುಕೇಶನ್ಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕಾರ್ಕಳ ತಾಲೂಕು ಒಂದರಲ್ಲಿ ೩ ಪದವಿ ಕಾಲೇಜು ಆರಂಭಗೊಂಡಿವೆ ಎಂದ ಅವರು, ಮಹಿಳಾ ಹಾಸ್ಟೆಲ್ಗೆ ರೂ.೧ ಕೋಟಿ ಹಣ ಬಿಡುಗಡೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ವಿದ್ಯಾರ್ಥಿನಿಯರ ಸ್ವಾವಲಂಬಿ ಜೀವನಕ್ಕೆ ತಾಂತ್ರಿಕ ಶಿಕ್ಷಣದ ಅಗತ್ಯವಿದೆ. ಅದಕ್ಕಾಗಿ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ನೀಡಲು ಕಂಕಣಬದ್ಧವಾಗಿದ್ದು, ರಾಜ್ಯ ಸರಕಾರ ಈ ಬಗ್ಗೆ ಪ್ರಸ್ತಾಪನೆ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ಸುಗಮವಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಉಡುಪಿ ಜಿ.ಪಂ ಅಧ್ಯಕ್ಷೆ ಸವಿತಾ ಕೋಟ್ಯಾನ್, ತಾ.ಪಂ ಅಧ್ಯಕ್ಷೆ ವಿಜಯಾ ಕುಮಾರಿ, ಉಪಾಧ್ಯಕ್ಷೆ ಮಾಲಿನಿ ರೈ, ಪುರಸಭೆ ಉಪಾಧ್ಯಕ್ಷೆ ಶಶಿಕಲಾ, ತಹಶೀಲ್ದಾರ್ ರಾಘವೇಂದ್ರ, ಮಹಿಳಾ ಕಾಲೇಜಿನ ಪ್ರಾಂಶುಪಾಲ ವಿಜಯ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.