ಕುಂದಾಪುರ- ಸುರತ್ಕಲ್ ರಾಷ್ಟ್ರೀ ಯ ಹೆದ್ದಾರಿ ಕಾಮಗಾರಿ ಇದೀಗ ಮತ್ತೆ ವೇಗ ಪಡೆದುಕೊಂಡಿದೆ. ಪಾಂಗಾಳ ಸಮೀಪ ನಿರ್ಮಾಣಗೊಳ್ಳುತ್ತಿರುವ ಪಾಂಗಾಳ ಅವಳಿ ಸೇತುವೆಗಳು ಸಿದ್ಧಗೊಂಡಿದ್ದು, ಚತುಷ್ಪಥ ಸಂಚಾರಕ್ಕೆ ಮುಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಗೊಂಡಿರುವ ಪ್ರಥಮ ಚತುಷ್ಪಥ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ಪಾಂಗಾಳ ಸೇತುವೆಯ ಎರಡೂ ಅಪಾರ್ಟ್ಮೆಂಟ್ಗಳು ಸಿದ್ಧ ಗೊಂಡಿದ್ದು, ಇದೀಗ ಸಂಚಾ ರಕ್ಕೆ ಯೋಗ್ಯವೆನಿಸಿದೆ. ಈ ಹಿಂದೆ ಈ ಪ್ರದೇಶದಲ್ಲಿ ಹೆದ್ದಾರಿ ಕಿರಿದಾಗಿ ಮತ್ತು ತಿರುವು ಹೆಚ್ಚಾಗಿರುವ ಕಾರಣಕ್ಕೆ ಹಲ ವಾರು ಅಪಘಾತಗಳಿಗೆ ಕಾರಣವಾಗಿತ್ತು.
ಈಗ ಸಾಕಷ್ಟು ವಿಶಾಲವಾಗಿ ಮತ್ತು ನೇರವಾಗಿ ಎರಡು ಸೇತುವೆಗಳು ನಿರ್ಮಾಣವಾಗಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕರವೆನಿಸಿದೆ. ಅಲ್ಲದೆ, ಸೇತುವೆಗಳ ನಿರ್ಮಾಣದಿಂದ ಅಪಘಾತಗಳನ್ನು ತಡೆ ಗಟ್ಟುವಲ್ಲಿ ಕೂಡಾ ಸಹಾಯಕವಾಗಿದೆ.ಇದೀಗ ವಾಹನ ಸಂಚಾರಕ್ಕೆ ತೆರೆದು ಕೊಂಡಿರುವ ಈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುವ ಪಾಂಗಾಳ ಹೊಳೆಗೆ ಮೂರನೇ ಸೇತುವೆಯಾಗಿದೆ. ಶತಮಾನದ ಹಿಂದೆ ಬ್ರಿಟಿಷರು ನಿರ್ಮಿಸಿದ್ದ ಕಲಾತ್ಮಕ ಕಿರು ಸೇತುವೆ ಈಗ ಅಳಿವಿನಂಚಿಗೆ ಸರಿದು ಶಿಥಿಲವಾಗಿದ್ದು, ಆ ಸೇತುವೆಯನ್ನು ಭಾಗಶಃ ತೆರವುಗೊಳಿಸಿ ನೆಲಸಮ ಮಾಡಲಾಗಿದೆ.
ಇದರ ಅಂಚಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನಂತರ ನಿರ್ಮಿಸಿದ್ದ ಹಳೆ ಸೇತುವೆ ತನ್ನ ಅವೈಜ್ಞಾನಿಕ ತಿರುವಿನಿಂದಾಗಿ ಹಲವು ಅಪಘಾತಗಳಿಗೆ ಕಾರಣವಾಗಿ ವಾಹನ ಚಾಲಕರಿಗೆ ಪ್ರಾಣಾಪಾಯ ಒಡ್ಡುತ್ತಿತ್ತು. ಇದೀಗ ನೂತನ ಚತುಷ್ಪಥ ಸೇತುವೆ ಸಂಪೂರ್ಣಗೊಂಡಿರುವ ಕಾರನ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, ನೂತನ ಸೇತುವೆ ಮೇಲೆ ವಾಹನ ಸಂಚಾರದ ಹಾದಿ ಸುಗಮಗೊಂಡಂತಾಗಿದೆ.
ಕುಂದಾಪುರ-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿನ ಸೇತುವೆಗಳಲ್ಲಿ ಪಾಂಗಾಳ ಸೇತುವೆ ಮಾತ್ರ ಚತುಷ್ಪಥ ಸೇತುವೆಯಾಗಿದೆ. ಇತರೆಡೆಗಳಲ್ಲಿ ಈಗಾಗಲೇ ಇರುವ ಹಳೆಸೇತುವೆಗಳನ್ನು ಉಳಿಸಿಕೊಂಡು, ಅವುಗಳಿಗೆ ಹೊಸರೂಪಕೊಟ್ಟು ಚತುಷ್ಪಥ ರಸ್ತೆಗೆ ಒಂದೇ ಕಂಪಾರ್ಟ್ಮೆಂಟಿನ ಸೇತುವೆ ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಹಳೆ ಸೇತುವೆ ಭಾಗಶಃ ಜರ್ಜರಿತಗೊಂಡಿದ್ದು, ತಿರುವು ಕಡಿದಾದ ರೀತಿಯಲ್ಲಿದ್ದ ಕಾರಣ ಹೆದ್ದಾರಿಯನ್ನು ನೇರಗೊಳಿಸಿ ಎರಡೂ ಕಡೆ ಹೊಸ ಸೇತುವೆ ನಿರ್ಮಿಸಲಾಗಿದೆ.
ಪಾಂಗಾಳಕ್ಕೆ ಹತ್ತಿರದಲ್ಲೇ ಕಟಪಾಡಿ ಸಮೀಪದ ಉದ್ಯಾವರದಲ್ಲಿ ಕೂಡಾ ಒಂದು ಮಾತ್ರ ಹೊಸ ಸೇತುವೆಯನ್ನು ನಿರ್ಮಿಸಿದ್ದು, ಇಲ್ಲಿರುವ ಮತ್ತೊಂದು ಹಳೆಯ ಸೇತುವೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಸಿದ್ಧಗೊಳಿಸಲಾಗುತ್ತಿದೆ. ಉದ್ಯಾವರದ ಹೊಸ ಸೇತುವೆಯಲ್ಲಿ ಈಗಾಗಲೇ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು. ಹಳೆ ಸೇತುವೆಯ ರಿಪೇರಿ ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ವರ್ಷಕ್ಕೆ ಈ ಸೇತುವೆಯೂ ಕೂಡಾ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.
ಸೇತುವೆಯ ವೈಶಿಷ್ಟ್ಯತೆ : ಈ ಹೊಸ ಸೇತುವೆ 58 ಮೀಟರ್ ಉದ್ದದ ಎರಡು ಅಪಾರ್ಟ್ಮೆಂಟ್ ಹೊಂದಿದ್ದು, ಒಂದೊಂದು ಅಪಾರ್ಟ್ಮೆಂಟಲ್ಲಿ 29 ಮೀಟರ್ ಉದ್ದದ ಎರಡೆರಡು ಸ್ಪಾನ್ಗಳನ್ನು ಹೊಂದಿದೆ. ತಲಾ 8 ರಂತೆ 16 ಗರ್ಡರ್ ಹಾಗೂ ಎರಡು ಸೆಂಟರ್ ಪಿಲ್ಲರ್ಗಳ ಮೇಲೆ ಸೇತುವೆ ಆಧುನಿಕ ವಿನ್ಯಾಸದೊಂದಿಗೆ ಸದೃಢವಾಗಿ ತಲೆಎತ್ತಿ ನಿಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.