ಲಕ್ನೋ: ಇತ್ತೀಚಿನ ದಿನಗಳಲ್ಲಿ ರೈಲ್ವೇ ಒಳ್ಳೆಯ ಕಾರ್ಯಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದ್ದು, ಸೋಶಲ್ ನೆಟ್ವರ್ಕ್ಗಳನ್ನು ಬಳಸಿಕೊಂಡು ಅದು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ರೈಲ್ವೇ ಸಚಿವಾಲಯ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಯಾಣಿಕರ ದೂರುಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಸಕಾರಾತ್ಮಕ ಬೆಳೆವಣಿಗೆಯಾಗಿದೆ.
ಉತ್ತರಪ್ರದೇಶದಲ್ಲಿ ಹೌರಾ-ಕುಂಬಾ ಎಕ್ಸ್ಪ್ರೆಸ್ನಲ್ಲಿ ಪ್ರವಾಸಕ್ಕೆ ಹೊರಟಿದ್ದ 27 ವಿದ್ಯಾರ್ಥಿಗಳು ರೈಲ್ವೆಯ ಕಾಮಗಾರಿಯ ಪರಿಣಾಮವಾಗಿ ಏಳು ಗಂಟೆಗಳ ಕಾಲ ರೈಲಿನಲ್ಲಿ ಆಹಾರವಿಲ್ಲದೆ ಕಳೆಯಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು. ಇವರೊಂದಿಗಿದ್ದ ಶಿಕ್ಷಕರು ಈ ಮಾಹಿತಿಯನ್ನು ಟ್ವಿಟರ್ ಮೂಲಕ ರೈಲ್ವೇ ಸಚಿವಾಲಯಕ್ಕೆ ತಲುಪಿಸಿದ್ದಾರೆ. ಶೀಘ್ರದಲ್ಲೇ ಸ್ಪಂದಿಸಿದ ಸಚಿವಾಲಯ ಈ ಮಕ್ಕಳಿಗೆ ಆಹಾರ ಪೂರೈಸುವ ವ್ಯವಸ್ಥೆ ಮಾಡಿದೆ.
ರೈಲ್ವೇ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಮಕ್ಕಳಿದ್ದ ರೈಲು ಬೇರೆ ಮಾರ್ಗವಾಗಿ ಚಲಿಸಿದೆ. ಇದರಿಂದಾಗಿ ನಿಗಧಿತ ಗುರಿಯನ್ನು ತಲುಪುವುದು ಏಳು ಗಂಟೆ ವಿಳಂಬವಾಗಿದೆ. ಆಹಾರವಿಲ್ಲದ ಈ ಮಕ್ಕಳು ಒದ್ದಾಟ ನಡೆಸಿದ್ದಾರೆ. ಸಹಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಶಿಕ್ಷಕರೊಬ್ಬರು ರೈಲ್ವೇ ಸಚಿವರ ಟ್ವಿಟರ್ ಖಾತೆಗೆ ಸರ್, ಪ್ಲೀಸ್ ಆಹಾರದ ವ್ಯವಸ್ಥೆ ಮಾಡಿ, ಮಕ್ಕಳು ಹಸಿವೆಯಲ್ಲಿದ್ದಾರೆ ಎಂಬ ಪೋಸ್ಟ್ನ್ನು ಟ್ಯಾಗ್ ಮಾಡಿದ್ದಾರೆ.
ಆಶ್ವರ್ಯವೆಂಬಂತೆ, ವಾರಣಾಸಿ ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ ಅವರು ನಿಮಗೆ ಫುಡ್ ಅರೇಂಜ್ ಮಾಡುತ್ತಾರೆ ಎಂದು ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಅದರಂತೆ ರೈಲು ಪ್ರತಾಪ್ಗಢ ಸ್ಟೇಶನ್ಗೆ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಮಕ್ಕಳಿಗಾಗಿ ಆಹಾರವನ್ನು ಹಿಡಿದು ನಿಂತಿದ್ದರು. ಮಕ್ಕಳು ಇವರಿಗೆ ಧನ್ಯವಾದ ಅರ್ಪಿಸಿದ್ದಲ್ಲದೇ ಸೆಲ್ಫಿ ತೆಗೆದು ಟ್ವಿಟರ್ನಲ್ಲೂ ಹಾಕಿದ್ದಾರೆ.
ಈ ಹಿಂದೆಯೂ ಎರಡು ಬಾರಿ ಪ್ರಯಾಣಿಕರ ಸಹಾಯಕ್ಕೆ ಧಾವಿಸಿ ರೈಲ್ವೇ ಸಚಿವಾಲಯ ಭೇಷ್ ಎನಿಸಿಕೊಂಡಿದೆ. ನಮ್ಮ ತಂದೆಗೆ ವೀಲ್ ಚೇರ್ ಬೇಕಿದೆ ಎಂದು ಟ್ವಿಟ್ನಲ್ಲಿ ಮನವಿ ಮಾಡಿದಾತನಿಗೆ ವೀಲ್ಚೇರ್ ತಂದು ಕೊಟ್ಟಿದೆ, ಅಲ್ಲದೇ ದೌರ್ಜನ್ಯ ನಡೆಯುತ್ತಿದ್ದ ಬಗ್ಗೆ ಯುವತಿಯೊಬ್ಬಳು ನೀಡಿದ ದೂರಿಗೆ ಶೀಘ್ರವಾಗಿ ಸ್ಪಂದಿಸಿ ಸಹಾಯಕ್ಕೆ ಧಾವಿಸಿದೆ.
ಒಟ್ಟಿನಲ್ಲಿ ರೈಲ್ವೇ ಈಗ ಪ್ರಯಾಣಿಕ ಸ್ನೇಹಿಯಾಗುತ್ತಿದೆ, ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ರೈಲ್ವೇಯನ್ನು ಹೆಚ್ಚು ಜನಪ್ರಿಯಗೊಳಿಸುತ್ತಿರುವ ಸಚಿವ ಸುರೇಶ್ ಪ್ರಭುಗೆ ಭೇಷ್ ಎನ್ನಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.