* ‘ಒಂದು ಬರ್ಗರ್ ತುಂಡು ನನಗೆ 2 ದಿನಗಳ ಆಹಾರವಾಗಿತ್ತು. ಬಳಿಕ ಎಷ್ಟು ಹುಡುಕಿದರೂ ಚೂರು ಬ್ರೆಡ್ಡೂ ಸಿಗಲಿಲ್ಲ. ಹೇಗೋ ಕಂಪೆನಿ ಸಹಾಯದಿಂದ ವೆಲ್ಲೂರಿಗೆ ಬಂದೆವು. ಅಲ್ಲಿಂದ ಖಾಸಗಿ ಬಸ್ಸಿನವರನ್ನು ಕಾಡಿಬೇಡಿ ಬೆಂಗಳೂರಿಗೆ ತಲುಪಿದೆವು. ಚೆನ್ನೈನಲ್ಲಿ ನಾವಿದ್ದ ಜಾಗ ದ್ವೀಪವಾಗಿತ್ತು. ಬದುಕುವ ಭರವಸೆಯೇ ಇಲ್ಲವಾಗಿತ್ತು…’
– ಎಂ. ಕಾರ್ತಿಕ್, ಬೆಂಗಳೂರು ಮೂಲದ ಟೆಕಿ
* ‘6 ತಿಂಗಳಿಂದ ಚೆನ್ನೈನ ಫೋರ್ಡ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ತಿಂಗಳಿಂದ ಮಳೆ ಬರುತ್ತಲೇ ಇತ್ತು. 4 ದಿನ ಹಿಂದೆ ಮಳೆ ಜೋರಾಗಿ, ನಮ್ಮ ಮನೆ ಸುತ್ತ ನೀರು ತುಂಬಿತ್ತು. ನಮ್ಮ ಬೀದಿಯ 11 ಮನೆಗಳಲ್ಲಿ 5 ಮನೆಗಳು ಕಣ್ಣೆದುರೇ ಕೊಚ್ಚಿಹೋದವು. ಮೃಗಾಲಯದಿಂದ ಮೊಸಳೆಗಳು ತಪ್ಪಿಸಿಕೊಂಡು ನೀರು ಸೇರಿವೆ ಎಂಬ ಸುದ್ದಿ ಮತ್ತಷ್ಟು ಗಾಬರಿ ಹುಟ್ಟಿಸಿತು. ಅಲ್ಲಿ ಹಣವಿದ್ದವರಿಗೂ ಊಟ ಸಿಗುತ್ತಿಲ್ಲ. ಚೆನ್ನೈ ಜನರನ್ನು ದೇವರೇ ಕಾಪಾಡಬೇಕು.
-ಪುನೀತಾ, ಮಂಡ್ಯದ ಇಂಜಿನಿಯರ್
* ‘ಮಂಗಳವಾರ ಖುಷಿಯಾಗಿ ವಿಪ್ರೋ ಕಚೇರಿಗೆ ತೆರಳಿ ಕೆಲಸ ಮಾಡುತ್ತಿದ್ದೆ. ಮಳೆ ಜೋರಾಗಿತ್ತು. ಸಂಜೆ ವೇಳೆಗೆ ಸುತ್ತಲ ಪ್ರದೇಶವೆಲ್ಲಾ ಜಲಾವೃತಗೊಂಡಿತು. ಹೊರ ಜಗತ್ತಿನ ಸಂಪರ್ಕ ಕಡಿಯಿತು. ವಿದ್ಯುತ್, ಮೊಬೈಲ್ಗಳೂ ಬಂದ್ ಆದವು. ಬ್ಯಾಂಕಲ್ಲಿ, ಕೈಯಲ್ಲಿ ಹಣವಿತ್ತು. ಆದರೆ ಕುಡಿಯಲು ನೀರಿಲ್ಲ. ತಿನ್ನಲು ಏನೂ ಇಲ್ಲ. ಅತಿಥಿಗಳಿಗೆ ತಂದ ಬಿಸ್ಕತ್ ತಿಂದೆವು. ಅನ್ನ ಕಂಡಿದ್ದು ಗುರುವಾರ ರಾತ್ರಿ ಬೆಂಗಳೂರಿಗೆ ಬಂದ ಮೇಲೆ!
-ಭಾವನಾ, ನಂಜನಗೂಡಿನ ಟೆಕಿ
* ‘1975 ರಿಂದ ಚೆನ್ನೈನ ಮೈಲಾಪುರದಲ್ಲಿದ್ದೇನೆ. 21 ದಿನಗಳಿಂದ ಸುರಿದ ಮಳೆ ನನ್ನ ಕುಟುಂಬಕ್ಕೂ ಬಿಸಿ ಮುಟ್ಟಿಸಿದೆ. ನಾನಿರುವ ಪ್ರದೇಶ ಕೊಂಚ ಎತ್ತರದಲ್ಲಿದೆ. ಹೀಗಾಗಿ ಮನೆಗೆ ನೀರು ನುಗ್ಗಲಿಲ್ಲ. ಆಹಾರದ ಕೊರತೆಯಾಗಿದ್ದರಿಂದ ಸಮೀಪದ ಕನ್ನಡಿಗರೊಬ್ಬರ ಮಾಲೀಕತ್ವದ ಬೇಕರಿಯಿಂದ ಬ್ರೆಡ್-ಜಾಮ್ ತಂದು ತಿಂದೆವು. ಆದರೆ ಈಗ ಬ್ರೆಡ್-ಜಾಮ್ ಕೂಡ ಸಿಗುತ್ತಿಲ್ಲ. ಕುಡಿಯುವ ನೀರು ಸಿಗುವುದೇ ಇಲ್ಲ. ಸರೋವರ, ಕೆರೆ, ಬಾವಿ, ನದಿ, ಹೊಳೆ ಎಲ್ಲಾ ಮಳೆನೀರಿನಿಂದ ತುಂಬಿ ಹರಿಯುತ್ತಿವೆ…’
-ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ನಿವೃತ್ತ ಕನ್ನಡ ಪ್ರಾಧ್ಯಾಪಕರು
ಚೆನ್ನೈನ ಜಲಪ್ರಳಯ ಅದೆಷ್ಟು ಭೀಕರವಾಗಿತ್ತು ಎನ್ನುವುದಕ್ಕೆ ಇವೆಲ್ಲಾ ಕೆಲವು ಸ್ಯಾಂಪಲ್ಗಳು. ಇಂತಹ ಕಹಿ ಅನುಭವಗಳು ಇನ್ನೂ ನೂರಾರು. ಚೆನ್ನೈನಲ್ಲೇ ವಾಸಿಸುವ ಟೆಕ್ಕಿಯೊಬ್ಬರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು ಹೀಗೆ: ‘ನನಗೆ ವರ್ಷಕ್ಕೆ 7 ಲಕ್ಷ ವೇತನ. ಸ್ವಂತ ಮನೆ, ಐಶಾರಾಮಿ ಕಾರು, ಪ್ರೀತಿಸುವ ಮಡದಿ… ಎಲ್ಲವೂ ಇದೆ. ಆದರೆ ಮೊನ್ನೆ ಭಾರೀ ಮಳೆ ಸುರಿದಾಗ ನನ್ನ ಬಳಿ ಇವೆಲ್ಲಾ ಇದ್ದರೂ ತಿನ್ನಲು ಒಂದು ಬ್ರೆಡ್ ತುಂಡು ಕೂಡ ಇರಲಿಲ್ಲ. ಕುಡಿಯಲು ನೀರೂ ಇರಲಿಲ್ಲ. ಯಾರಾದರೂ ಮೇಲಿನಿಂದ ಆಹಾರದ ಪ್ಯಾಕೇಟ್ ಎಸೆಯುತ್ತಾರೋ ಎಂದು ಕಾಯುತ್ತಾ ಕುಳಿತಿದ್ದೆ. ನನ್ನ ಬಳಿ ಇದ್ದ ಕ್ರೆಡಿಟ್, ಡೆಬಿಟ್ ಕಾರ್ಡುಗಳು ಉಪಯೋಗಕ್ಕೆ ಬರಲಿಲ್ಲ. ಹಣಕ್ಕೆ ಬೆಲೆಯಿಲ್ಲ. ತಕ್ಷಣಕ್ಕೆ ಬೇಕಾಗಿರುವುದು ನೀರು ಹಾಗೂ ಆಹಾರ ಎಂಬ ಅರಿವು ನನಗೆ ಉಂಟಾಗಿದ್ದು ಪ್ರವಾಹ ಬಂದಾಗ!’
ಒಂದೂವರೆ ತಿಂಗಳಿನಿಂದ ತಮಿಳುನಾಡನ್ನು ಬಿಟ್ಟೂಬಿಡದೇ ಕಾಡುತ್ತಿರುವ ಮಹಾ ಮಳೆ ಮಾಡಿರುವ ಅನಾಹುತ ಅಷ್ಟಿಷ್ಟಲ್ಲ. ಶತಮಾನದಲ್ಲೇ ಇಷ್ಟೊಂದು ಮಳೆ ಸುರಿದ್ದದಿಲ್ಲ. ಮಳೆಯಿಂದ ಸತ್ತವರ ಸಂಖ್ಯೆ 250 ಕ್ಕೂ ಹೆಚ್ಚು. ಆಸ್ತಿಪಾಸ್ತಿ ನಷ್ಟ ಎಷ್ಟೆಂಬುದು ಇನ್ನೂ ಗೊತ್ತಾಗಿಲ್ಲ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 18 ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಜನರೇಟರ್ ರೂಮಿಗೂ ನೀರು ನುಗ್ಗಿ ಜನರೇಟರ್ ಬಂದ್ ಆಗಿದೆ. ಭಾರೀ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಬಸ್ಸು, ರೈಲು, ವಿಮಾನ ಸೇವೆಗಳು ಸಂಪೂರ್ಣ ಬಂದ್ ಆಗಿದ್ದವು. ಮಳೆ ಪ್ರವಾಹದಿಂದಾಗಿ ರಸ್ತೆಗಳು ನದಿಯಾಗಿ ಮಾರ್ಪಟ್ಟಿದ್ದವು. ನದಿಗಳು ಉಕ್ಕಿ ಹರಿದವು. ಜಲಾಶಯಗಳು ತುಂಬಿ ಹರಿದ ನೀರಿನಲ್ಲಿ ಜನ-ಜಾನುವಾರು ಕೊಚ್ಚಿಹೋದವು.
ಈಶಾನ್ಯ ಮುಂಗಾರು ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವೇ ಚೆನ್ನೈನ ಈ ಕುಂಭದ್ರೋಣ ಮಳೆಗೆ ಕಾರಣ ಎಂಬುದು ಹವಾಮಾನ ತಜ್ಞರ ಅಭಿಮತ. ಚೆನ್ನೈನಲ್ಲಿ ಇಷ್ಟೊಂದು ಭೀಕರ ಮಳೆಯಾಗಲು ಎಲ್ನಿನೋ ಎಂಬುದರ ಪರಿಣಾಮಗಳೇ ಕಾರಣವೆಂದು ವಿಜ್ಞಾನಿಗಳ ಹೇಳಿಕೆ. ಪೆಸಿಫಿಕ್ ಸಾಗರದಲ್ಲಿನ ಬಿಸಿನೀರಿನ ಪ್ರವಾಹಗಳ ಪಥ ಬದಲಾವಣೆಯಿಂದ ಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಏರಿಕೆಯಾಗಿದೆ. ಇದರಿಂದ ಒಂದರ ಹಿಂದೆ ಒಂದು ವಾಯುಭಾರ ಕುಸಿತ ಸಂಭವಿಸಿದೆ. ಹೀಗಾಗಿಯೇ ಚೆನ್ನೈನಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂಬುದು ತಜ್ಞರ ನಿಷ್ಕರ್ಷೆ.
ಇರಬಹುದು. ಭೀಕರ ಮಳೆಗೆ ಇವೆಲ್ಲ ವೈಜ್ಞಾನಿಕ ಕಾರಣಗಳೆಂಬುದನ್ನು ಒಪ್ಪಿಕೊಳ್ಳೋಣ. ಆದರೆ ಎಷ್ಟೇ ಮಳೆ ಸುರಿದರೂ 30-40 ವರ್ಷಗಳ ಹಿಂದೆ ಈ ಪರಿಯ ಅನಾಹುತಗಳು ಸಂಭವಿಸುತ್ತಿರಲಿಲ್ಲ. ಈಗ ಅನಾಹುತಗಳು ಸಂಭವಿಸಿರುವುದಕ್ಕೆ ಪ್ರಕೃತಿ ಕಾರಣವಲ್ಲ. ಆದರೆ ಪ್ರಕೃತಿಯನ್ನು ಧಿಕ್ಕರಿಸಿ, ಬೇಕಾಬಿಟ್ಟಿ ಯೋಜನೆಗಳನ್ನು ರೂಪಿಸಿ, ಯದ್ವಾತದ್ವಾ ಕಟ್ಟಡಗಳನ್ನು ಕಟ್ಟಿರುವುದೇ ಈಗಿನ ಎಲ್ಲಾ ಅನಾಹುತಗಳಿಗೆ ಬಹುತೇಕ ಕಾರಣ. ಚೆನ್ನೈನಲ್ಲಿ ಸುರಿದ ವರ್ಷಧಾರೆ ನಮ್ಮ ನಗರ ಯೋಜನೆಗಳ ಅಸಲಿ ಬಣ್ಣವನ್ನು ಸಂಪೂರ್ಣ ಬಯಲು ಮಾಡಿದೆ. ನಗರವೆಂದರೆ ಕಟ್ಟಡಗಳ ಕಾಂಕ್ರೀಟ್ ಕಾಡು ಅಲ್ಲ, ಇರುವೆಗಳಂತೆ ಜನರಿರುವ ಪ್ರದೇಶವಲ್ಲ, ಅಲ್ಲೂ ಒಂದು ಯೋಜನಾಬದ್ಧ, ಅಚ್ಚುಕಟ್ಟು ವ್ಯವಸ್ಥೆ ಇರಬೇಕು. ಅಲ್ಲಿನ ಬೆಟ್ಟ, ಗುಡ್ಡ, ಕೆರೆ, ಕಾಲುವೆ, ನದಿ, ಸಮುದ್ರ ಮೊದಲಾದ ಪ್ರಾಕೃತಿಕ ಲಕ್ಷಣಗಳಿಗೆ ಅನುಗುಣವಾಗಿ ನಗರ ರೂಪುಗೊಳ್ಳಬೇಕು. ಕೆರೆ, ಕಾಲುವೆ ಮತ್ತು ಜೌಗುಪ್ರದೇಶದಲ್ಲಿ ಕಾಂಕ್ರೀಟ್ ಕಟ್ಟಡಗಳು ಎದ್ದುನಿಂತರೆ ನೀರು ಹರಿದುಹೋಗುವುದಾದರೂ ಎಲ್ಲಿಗೆ? ಆಗ ಶಿಕ್ಷೆ ಅನುಭವಿಸಬೇಕಾದವರು ಮಾತ್ರ ಸಾಮಾನ್ಯ ನಾಗರೀಕರು. ರಿಯಲ್ ಎಸ್ಟೇಟ್ ಮಾಲೀಕರು, ಕಟ್ಟಡ ನಿರ್ಮಾಪಕರು, ಪಾಲಿಕೆಯ ಭ್ರಷ್ಟ ಇಂಜಿನಿಯರ್ಗಳು ಇವರೆಲ್ಲಾ ಹೇಗೋ ಪಾರಾಗುತ್ತಾರೆ.
ಚೆನ್ನೈ ಇರುವುದು ಸಮುದ್ರ ತೀರದಲ್ಲಿ. ಎಷ್ಟೇ ಮಳೆ ಬಂದರೂ ಮಳೆ ನೀರು ಸಮುದ್ರಕ್ಕೆ ಸರಾಗವಾಗಿ ಹರಿದುಹೋಗಬೇಕಿತ್ತು. ರಸ್ತೆಗಳು ನದಿಯಾಗಿ ಮಾರ್ಪಡಬೇಕಾದ ಅಗತ್ಯವಿರಲಿಲ್ಲ. ಆದರೆ ಆಗಿzನು? ಚೆನ್ನೈನ ಹದಗೆಟ್ಟ ರಸ್ತೆಗಳು, ಈ ರಸ್ತೆಗಳನ್ನು ನಿರ್ಮಿಸಿದ ಗುತ್ತಿಗೆದಾರರ ವಂಚನೆಗಳು, ರಸ್ತೆ ನಿರ್ಮಾಣದಲ್ಲಾಗುತ್ತಿರುವ ಲಾಬಿಗಳು, ಅವೈಜ್ಞಾನಿಕ ರೀತಿಯಲ್ಲಿ ಕಟ್ಟಿದ ಕಟ್ಟಡಗಳು, ಕೆಟ್ಟ ಕಳಪೆ ಚರಂಡಿ ವ್ಯವಸ್ಥೆ, ಭ್ರಷ್ಟ ಇಂಜಿನಿಯರ್ಗಳ ದೂರದೃಷ್ಟಿಯಿಲ್ಲದ ಕಳಪೆ ಯೋಜನೆ… ಹೀಗೆ ಚೆನ್ನೈ ಜಲಪ್ರಳಯಕ್ಕೆ ಅದೆಷ್ಟೋ ಕಾರಣಗಳನ್ನು ಪಟ್ಟಿ ಮಾಡಬಹುದು. ರಸ್ತೆ ನಿರ್ಮಾಣ ಕಾರ್ಯ ಸರಿಯಾಗಿ ನಡೆಯದಿದ್ದರೆ ಚೆನ್ನೈನಲ್ಲಿ ಪ್ರವಾಹ ಸದೃಶ ಸ್ಥಿತಿ ನಿರ್ಮಾಣವಾಗಲಿದೆ ಎಂದು ಐಎಎಸ್ ಅಧಿಕಾರಿ ಡಾ.ವಿಜಯ್ ಪಿಂಗಳೆ ಬಹಳ ಹಿಂದೆಯೇ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಕೇವಲ 3 ದಿನಗಳಲ್ಲಿ ಕಳಪೆ ಕಾಮಗಾರಿ ಮಾಡಿದ್ದ 9 ಗುತ್ತಿಗೆದಾರರಿಗೆ 2 ಕೋಟಿ ರೂ. ದಂಡ ವಿಧಿಸಿದ್ದರು. ಆದರೀಗ ಅವರನ್ನೇ ತಮಿಳುನಾಡು ಸರ್ಕಾರ ಎತ್ತಂಗಡಿ ಮಾಡಿದೆ. ಗುತ್ತಿಗೆದಾರರ ವಂಚನೆಗಳ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿದ ಈ ಐಎಎಸ್ ಅಧಿಕಾರಿಯನ್ನು ಭ್ರಷ್ಟ ಗುತ್ತಿಗೆದಾರರು ತಮ್ಮ ಪ್ರಭಾವ ಬಳಸಿ ಬೇರೆಡೆಗೆ ವರ್ಗಾಯಿಸಿದ್ದಾರೆ.
ಈಗ ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲವೆಂಬಂತೆ ಮಳೆಯಿಂದಾದ ಅನಾಹುತಗಳು ಕಣ್ಣಿಗೆ ರಾಚುವಂತಿದೆ. ಕುಡಿಯುವ ನೀರಿನ ಒಂದು ಲೀ. ಬಾಟಲ್ಗೆ 150 ರೂ., ಒಂದು ಲೀ. ಹಾಲಿನ ಬೆಲೆ 100 ರೂ., ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿಕೆ. ತುಂಬಿ ನಿಂತ ನೀರಿನಿಂದ ಹದಗೆಟ್ಟ ರಸ್ತೆಗಳು, ಕಡಿದುಬಿದ್ದ ವಿದ್ಯುತ್ ತಂತಿಗಳು, ಧರೆಗುರುಳಿದ ವಿದ್ಯುತ್ ಕಂಬಗಳು, ಸ್ಥಗಿತಗೊಂಡ ದೂರಸಂಪರ್ಕ ವ್ಯವಸ್ಥೆ… ಹೀಗೆ ಉಂಟಾಗಿರುವ ಅವ್ಯವಸ್ಥೆಗಳನ್ನು ಒಂದು ಹಂತದ ಸುಸ್ಥಿತಿಗೆ ತರಲು ಇನ್ನೂ ಸಾಕಷ್ಟು ದಿನಗಳು ಬೇಕು. ಎಲ್ಲೆಡೆಗಳಿಂದ ಸಂತ್ರಸ್ತರಿಗೆ ನೆರವು ಹರಿದುಬಂದಿದೆ. ಪ್ರಧಾನಿ ಮೋದಿ ಸ್ವತಃ ಚೆನ್ನೈಗೆ ಧಾವಿಸಿ, ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಮೊತ್ತ ಬಿಡುಗಡೆ ಮಾಡಿದ್ದಾರೆ. ಅನೇಕ ತಮಿಳು, ತೆಲುಗು, ಕನ್ನಡ ನಟ-ನಟಿಯರು ತಮ್ಮ ಕೈಲಾದ ಧನ ಸಹಾಯ ನೀಡಿದ್ದಾರೆ. ಇಡೀ ದೇಶವೇ ತಮಿಳುನಾಡಿನ ದುರವಸ್ಥೆಗೆ ಕಣ್ಣೀರು ಮಿಡಿದಿದೆ. ಆದರೆ ದೇಶದಾದ್ಯಂತ ಅಸಹಿಷ್ಣುತೆ ತುಂಬಿದೆ, ಅಸಹನೆ ಹೆಚ್ಚಿದೆ ಎಂದು ಬೊಬ್ಬೆ ಹೊಡೆದ ಬುದ್ಧಿಜೀವಿಗಳು, ಅಮೀರ್-ಶಾರುಕ್ ಖಾನ್ಗಳು ಮಾತ್ರ ಚೆನ್ನೈ ಜಲಪ್ರಳಯದ ಬಗ್ಗೆ ತುಟಿ ಬಿಚ್ಚದಿರುವುದು ಎಂತಹ ಸೋಜಿಗ! ಶಾರುಕ್ ಖಾನ್ ‘ಚೆನ್ನೈ ಎಕ್ಸ್ಪ್ರೆಸ್’ ಎಂಬ ಸಿನಿಮಾ ನಿರ್ಮಿಸಿ ಕೋಟಿ ಕೋಟಿ ಹಣ ಬಾಚಿದ್ದ. ಆದರೀಗ ಚೆನ್ನೈ ಪ್ರವಾಹದಲ್ಲಿ ಮುಳುಗಿದಾಗ ಮಾತ್ರ ಆತ ವಿದೇಶದಲ್ಲೆಲ್ಲೋ ಆರಾಮವಾಗಿ ತಿರುಗಾಡಿಕೊಂಡಿದ್ದಾನೆ. ಬಹುಶಃ ಮುಂದೆ ‘ಚೆನ್ನೈ ಫ್ಲಡ್ಸ್’ ಎಂಬ ಇನ್ನೊಂದು ಅದ್ಭುತ ಚಿತ್ರ ನಿರ್ಮಿಸಿ ಅದರಿಂದ ಮತ್ತಷ್ಟು ಕೋಟಿ ಹಣ ಮಾಡುವುದು ಹೇಗೆ ಎಂದು ಪ್ಲಾನ್ ಮಾಡುತ್ತಿರಬಹುದೇನೋ!
ಆದರೆ ಚೆನ್ನೈ ಪ್ರಳಯದಿಂದ ಉಂಟಾದ ಜನರ ಅಕ್ರಂದನಕ್ಕೆ ನಿಜವಾಗಿ ಮರುಗಿದವರು, ಎಲ್ಲರಿಗಿಂತ ಮೊದಲು ಸಂತ್ರಸ್ತರ ಸೇವೆಗೆ ಧಾವಿಸಿದವರು ‘ಚಡ್ಡಿ’ಗಳೆಂದು ಎಲ್ಲರಿಂದ ಲೇವಡಿಗೊಳಗಾಗಿರುವ ಅದೇ ಆರೆಸ್ಸೆಸ್ ಸ್ವಯಂಸೇವಕರು. ಆರೆಸ್ಸೆಸ್ ಐಸಿಸ್ಗೆ ಸಮಾನವೆಂದು ಕೆಲವು ಬುದ್ಧಿಜೀವಿಗಳು ಫರ್ಮಾನು ಹೊರಡಿಸಿದ್ದರು. ಆದರೆ ಈ ‘ಆರೆಸ್ಸೆಸ್ ಉಗ್ರರು’ ಯಾರ ಪ್ರಾಣವನ್ನೂ ತೆಗೆಯಲು ಹೋಗಲಿಲ್ಲ. ಬದಲಿಗೆ ತಮ್ಮ ಪ್ರಾಣದ ಹಂಗುತೊರೆದು, ಕಂಠಮಟ್ಟದ ನೀರಿನಲ್ಲಿ ನಡೆದು ಸಂತ್ರಸ್ತರಿಗೆ ಅಗತ್ಯವಿರುವ ಆಹಾರ, ಔಷಧಿ, ನೀರು, ಸೂರು ಇತ್ಯಾದಿ ಪೂರೈಸುವಲ್ಲಿ ನಿರತರಾದರು. ತಮಗೆ ಪ್ರಶಸ್ತಿ, ಪುರಸ್ಕಾರ ಅಥವಾ ಸಂಭಾವನೆ ಸಿಗಬಹುದೆಂದು ಆರೆಸ್ಸೆಸ್ ಸ್ವಯಂಸೇವಕರು ಇಂತಹ ಕಷ್ಟದ ಕೆಲಸಕ್ಕೆ ಧುಮುಕಿದ್ದಲ್ಲ. ಅಂತಹ ಆಸೆಯೂ ಅವರಿಗಿಲ್ಲ. ತೊಂದರೆಗೊಳಗಾದವರು, ಸಂಕಟಪಡುತ್ತಿರುವವರು ನಮ್ಮವರೇ, ಅವರ ರಕ್ಷಣೆ ನಮ್ಮ ಹೊಣೆ ಎಂಬ ಮಾನವೀಯ ಕಾಳಜಿಯೊಂದೇ ಅವರಿಗೆ ಪ್ರೇರಣೆಯಾಗಿದ್ದುದು. ಚೆನ್ನೈ ಮಹಾಮಳೆಯಲ್ಲಿ ಒದ್ದೆಮುದ್ದೆಯಾಗಿ, ಪ್ರಾಣದ ಹಂಗುತೊರೆದು ನಿಷ್ಕಾಮ ಸೇವಾಕಾರ್ಯ ಮಾಡಿದ ಈ ಸ್ವಯಂಸೇವಕರು ಮಾಧ್ಯಮಗಳ ಕ್ಯಾಮರ ಕಣ್ಣಿಗೆ ಮಾತ್ರ ಗೋಚರಿಸಲೇ ಇಲ್ಲ. ಸ್ವಯಂಸೇವಕರಿಗೆ ಮಾತ್ರ ಅಂತಹ ಪ್ರಚಾರದ ಅಗತ್ಯವೂ ಇಲ್ಲ. ಏಕೆಂದರೆ ಅವರು ಇಂತಹ ಮಾನವೀಯ ಸೇವಾಕಾರ್ಯ ನಡೆಸುತ್ತಿರುವುದು ಇದೇ ಮೊದಲಲ್ಲ , ಕೊನೆಯದೂ ಅಲ್ಲ. ತಮ್ಮ ಕೊನೆಯುಸಿರಿನ ತನಕ ಇಂತಹ ಕಾರ್ಯಗಳು ನಿರಂತರ. ಅದು ಅವರಿಗೆ ಆರೆಸ್ಸೆಸ್ ಕಲಿಸಿಕೊಟ್ಟ ಸಂಸ್ಕಾರ. ಇಡೀ ದೇಶದ ಜನತೆಯನ್ನು ತನ್ನ ಕುಟುಂಬದ ಸದಸ್ಯರಂತೆ ಕಾಣಬೇಕೆಂದು ಆರೆಸ್ಸೆಸ್ ಕಲಿಸಿದ ಪಾಠವನ್ನು ಅವರೆಂದೂ ಮರೆಯಲಾರರು. ಕ್ರೈಸ್ತ ಮಿಷನರಿಗಳು ಮಾತ್ರ ಇಂತಹ ಸಂದರ್ಭವನ್ನೇ ಬಳಸಿಕೊಂಡು ಸಂತ್ರಸ್ತರಿಗೆ ಬೈಬಲ್ ಹಂಚಿ, ಮತಾಂತರಕ್ಕೆ ಯತ್ನಿಸಿದ್ದು ಅವರ ನಿಜಬಣ್ಣವನ್ನು ತೋರಿಸಿದೆ.
ಚೆನ್ನೈ ಜಲಪ್ರಳಯ ಇಡೀ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ದಿವ್ಯ ಸಂದೇಶ ರವಾನಿಸಿದೆ. ಮುಂಬೈ, ಬೆಂಗಳೂರು, ದೆಹಲಿ ಮೊದಲಾದ ಮಹಾನಗರಗಳು ಒಂದು ಸಾಮಾನ್ಯ ಮಳೆಯನ್ನೂ ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂಬುದನ್ನು ನಮ್ಮ ಆಡಳಿತಗಾರರು, ಅಧಿಕಾರಿಗಳು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಅನಿಯಂತ್ರಿತ ನಗರ ಬೆಳವಣಿಗೆಗೆ ತಕ್ಷಣ ಕಡಿವಾಣ ಹಾಕಲೇಬೇಕು. ಊರು ಕೊಳ್ಳೆಹೋದ ಮೇಲೆ ದಿಡ್ಡಿ ಬಾಗಿಲು ಹಾಕುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಬೇಕೆಂಬ ಪಾಠವನ್ನು ನಾವು ಇನ್ನಾದರೂ ಕಲಿಯುತ್ತೇವಾ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.