ಬೆಳ್ತಂಗಡಿ : ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ, ಪರ್ಯಾಯ ಉದ್ಯೋಗ ಒದಗಿಸದೆ ಬೀಡಿ ಕೈಗಾರಿಕೆಯನ್ನು ನಿಲ್ಲಿಸಲು ಸರಕಾರಗಳು ಮುಂದಾದರೆ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಂತೆ ಬೀಡಿ ಕಾರ್ಮಿಕರೂ ಆತ್ಮಹತ್ಯೆ ಮಾಡಿಕೊಳ್ಳವ ದಿನ ದೂರವಿಲ್ಲ. ಇನ್ನಾದರೂ ಸರಕಾರಗಳು ಎಚ್ಚೆತ್ತುಕೊಂಡು ಕಾರ್ಮಿಕರ ನೆರವಿಗೆ ಬರಲಿ ಎಂದು ಸಿಐಟಿಯು ಕೇಂದ್ರ ಸಮಿತಿಯ ಕಾರ್ಯದರ್ಶಿ ವರಲಕ್ಷ್ಮಿ ಹೇಳಿದರು
ಅವರು ಮಂಗಳವಾರ ಬೆಳ್ತಂಗಡಿಯ ತಾಲೂಕು ಕಚೇರಿಯ ಎದುರುಗಡೆ ಸಿಐಟಿಯು ತಾಲೂಕು ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘ, ದಲಿತ ಹಕ್ಕುಗಳ ಹೋರಾಟ ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಬೀಡಿ ಕೆಲಸಗಾರರ ಸಂಘ, ಬೀಡಿ ಗುತ್ತಿಗೆ ಕೆಲಸ ಮಾಡುವವರ ಸಂಘ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಇತರೇ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರಾವಳಿಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀಡಿ ಉದ್ದಿಮೆ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ನೀಡಿದೆ. ಇದೀಗ ಏಕಾಏಕಿ ಅದನ್ನು ಕ್ಯಾನ್ಸರ್ನ ನೆಪವೊಡ್ಡಿ ನಿಲ್ಲಿಸಲು ಹೊರಟಿರುವ ಕೇಂದ್ರ ಸರಕಾರ ಮೊದಲು ಎಲ್ಲರಿಗೂ ಪರ್ಯಾಯ ಉದ್ಯೋಗಾವಕಾಶಗಳನ್ನು ಕಲ್ಪಿಸಲಿ. ಬಳಿಕ ಬೀಡಿ ನಿಷೇಧದ ಬಗ್ಗೆ ಮಾತನಾಡಲಿ. ರೈತರ ಸಮಸ್ಯೆಗಳಿಗೆ ಪರಿಹಾರ ಕಾಣದೆ ಅವರನ್ನು ಆತ್ಮಹತ್ಯೆಯತ್ತ ತಳ್ಳಿ ಇದೀಗ ಮೃತರಿಗೆ ಪರಿಹಾರ ನೀಡುವ ರೀತಿಯಲ್ಲಿ ಬೀಡಿ ಕಾರ್ಮಿಕರೂ ಆತ್ಮಹತ್ಯೆಯ ಸ್ಥಿತಿಗೆ ಬಂದಾಗ ಮಾತ್ರ ರಾಜಕಾರಣಿಗಳು ಪರಿಹಾರದೊಂದಿಗೆ ಬರುತ್ತಾರೆ. ಸರಕಾರಗಳ, ರಾಜಕಾರಣಿಗಳ ಈ ನಾಟಕವನ್ನು ಹೋರಾಟದ ಮೂಲಕ ಕೊನೆಗೊಳಿಸಬೇಕಾಗಿದೆ ಎಂದರು.
ಕೇಂದ್ರ ಸರಕಾರ ಇದೀಗ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಮುಂದಾಗುತ್ತಿದೆ. ಅದರೊಂದಿಗೆ ರೈತರ ಭೂ ಸ್ವಾಧೀನ ಮಸೂದೆಯೂ ಜಾರಿಯಾಗುತ್ತಿದೆ. ರೈತರ ಕೈಯಿಂದ ಭೂಮಿಯನ್ನು ಕಬಳಿಸಿ ಅದನ್ನು ಬೃಹತ್ ಬಂಡವಾಳಶಾಹಿಗಳಿಗೆ ನೀಡಲು ಮುಂದಾಗುತ್ತಿದೆ. ಮೂಲ ನಿವಾಸಿಗಳನ್ನು ಕೃಷಿಕರನ್ನು ಅವರ ವಾಸಸ್ಥಾನಗಳಿಂದ ಹೊರಹಾಕುವ ವ್ಯವಸ್ಥಿತ ಸಂಚು ಸರಕಾರಗಳಿಂದ ನಡೆಯುತ್ತಿದೆ. ಒಳ್ಳೆಯ ದಿನಗಳನ್ನು ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರದ ಆಡಳಿತದಲ್ಲಿ ದೇಶದಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ರೈತರು ಕಾರ್ಮಿಕರು ಮಹಿಳೆಯರು ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಿಲ್ಲವಾಗಿದೆ. ಸಂಘಟಿತರಾಗಿ ಸರಕಾರದ ವಿರುದ್ದ ಹೋರಾಟಕ್ಕೆ ಇಳಿಯುವ ಅಗತ್ಯವಿದೆ. ಹೋರಾಟದ ಮೂಲಕ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು, ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ಮುಖಂಡರುಗಳಾದ ನೀಲೇಶ್ ಪೆರಿಂಜೆ, ಜಯರಾಮ ಮಯ್ಯ, ಶೇಖರ ಎಲ್., ವಸಂತ ನಡ, ನೆಬಿಸ, ವಿಠಲ ಮಲೆಕುಡಿಯ, ರೋಹಿಣಿ, ಬಾಬು ಕೊಯ್ಯೂರು, ಸಿ ಮಹಮ್ಮದ್, ಡಿ.ಎಚ್.ಇಬ್ರಾಹಿಂ, ಈಶ್ವರಿ, ಶ್ಯಾಮರಾಜ ಪಟ್ರಮೆ ಮತ್ತಿತರರು ವಹಿಸಿದ್ದರು.
ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಸಂತೆ ಕಟ್ಟೆಯಿಂದ ತಾಲೂಕು ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಭಾರೀ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದಾಗ ತಾಲೂಕು ಕಚೇರಿಗೆ ಬರುವ ದಾರಿ ಬಂದ್ ಆಯಿತು. ಕೆಲ ಕಾಲ ತಾಲೂಕು ಕಚೇರಿಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿತು.
ಪ್ರತಿಭಟನೆಯ ಬಳಿಕ ರೈತರ, ಆದಿವಾಸಿಗಳ, ದಲಿತರ, ಬೀಡಿ ಕಾರ್ಮಿಕರ ಹಾಗೂ ಇತರೇ ಕಾರ್ಮಿಕರ ಬದುಕಿನ ಹಕ್ಕಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಹತ್ವದ 30 ಬೇಡಿಕೆಗಳಿರುವ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ತಂಗಡಿ ತಹಶೀಲ್ದಾರರ ಮೂಲಕ ಸಲ್ಲಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.