ಬೆಳ್ತಂಗಡಿ : ಖಾಸಗಿಯವರ ಸಹಭಾಗಿತ್ವದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಪುನರ್ ವಸತಿಕೇಂದ್ರಗಳನ್ನು ತೆರೆದು ಸಮರ್ಪಕ ನಿರ್ವಹಣೆಯ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಅವರು ಸೋಮವಾರ ಉಜಿರೆಯಲ್ಲಿ ಖಾಸಗಿ ಸುದ್ದಿವಾಹಿನಿ ಟಿ.ವಿ. 9 ನವರು ಎಂಡೋ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ಹಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪುನರ್ ವಸತಿ ಕೇಂದ್ರದ ಬಗ್ಗೆ ಚಾನೆಲ್ನವರು, ಸಾನಿಧ್ಯ ಸಂಸ್ಥೆ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಇದೀಗ ಸಂತ್ರಸ್ತರ ಪಟ್ಟಿಯಲ್ಲಿ ಅನರ್ಹರ ಹೆಸರುಗಳೂ ಸೇರ್ಪಡೆಯಾಗಿರುವ ಬಗ್ಗೆ ತಿಳಿದು ಬಂದಿದ್ದು ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು. ಅರ್ಹ ಸಂತ್ರಸ್ತರಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಸರಕಾರ ಸಿದ್ದವಿದೆ. ಅನರ್ಹರು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಜಿರೆಯಲ್ಲಿರುವ ಆರೋಗ್ಯ ಇಲಾಖೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪಾಲನಾ ಕೇಂದ್ರವನ್ನು ಆರಂಭಿಸುವ ಬಗ್ಗೆ ಹಾಗೂ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸುದ್ದಿವಾಹಿನಿಯವರು ಒದಗಿಸುವುದಾಗಿಯೂ ಸಾನ್ನಿಧ್ಯ ಸಂಸ್ಥೆಯವರಿಗೆ ಪಾಲನಾ ಕೇಂದ್ರದ ಜವಾಬ್ದಾರಿಯನ್ನು ನೀಡುವುದಾಗಿಯೂ ಈ ಬಗ್ಗೆ ಸರಕಾರ ಹಾಗೂ ಸಂಸ್ಥೆ ಮಾತುಕತೆ ನಡೆಸಿ ನಿರ್ಧರಕ್ಕೆ ಬರಲಾಗುವುದು ಎಂದು ಸಚಿವರು ತಿಳಿಸಿದರು.
ಕೊಯಿಲದಲ್ಲಿ ಎಂಡೋ ಸಂತ್ರಸ್ಥರ ಪಾಲನಾ ಕೇಂದ್ರಕ್ಕಾಗಿ ಮೀಸಲಿರಿಸಲಾಗಿರುವ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲು ಹಾಗೂ ಶಾಶ್ವತ ಪುನರ್ವಸತಿ ಕೇಂದ್ರವನ್ನು ಆರಂಭಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ವಸಂತ ಬಂಗೇರ ಅವರು, ಎಂಡೋಸಲ್ಫಾನ್ ಸಂತ್ರಸ್ಥರ ಹೆಸರಿನಲ್ಲಿ ಹಲವರು ಅನರ್ಹರು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆಯಿದೆ. ನಿಜವಾದ ಸಂತ್ರಸ್ಥರು ಯೋಜನೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಸಂತ್ರಸ್ತರಿಗಾಗಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ತಪ್ಪುಮಾಡಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಂಡೋಸಲ್ಫಾನ್ ಜಿಲ್ಲಾ ನೋಡಲ್ ಅಧಿಕಾರಿ ಡಾ| ಅರುಣ್ ಕುಮಾರ್, ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಟಿವಿ೯ನ ಕಾರ್ಯಕಾರಿ ನಿರ್ಮಾಪಕ, ನಿರ್ದೇಶಕ ರವಿಕುಮಾರ್, ತಾಂತ್ರಿಕ ಮುಖ್ಯಸ್ಥ ಶ್ರೀಕಾಂತ್, ಮುಖ್ಯ ವರದಿಗಾರ ವಿನಾಯಕ ಗಂಗೊಳ್ಳಿ, ಮಡಂತ್ಯಾರು ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಶೆಟ್ಟಿ, ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.