ಪುತ್ತೂರು : ಪ್ರತೀ ವ್ಯಕ್ತಿಯ ಬಾಹ್ಯವಿಕಾಸ ಮಾತ್ರವಲ್ಲ, ಅಂತರ್ಯದಲ್ಲೂ ವಿಕಾಸ ಕಾಣಬೇಕು.ಇದಕ್ಕೆ ಯೋಗ ಪ್ರಮುಖ ಮಾರ್ಗ.ವ್ಯಕ್ತಿತ್ವ ವಿಕಾಸದ ದೃಷ್ಟಿಯಿಂದ ಯೋಗವನ್ನು ಜೀವನದಲ್ಲಿ ಹಾಸುಹೊಕ್ಕಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಯೋಗ ಸಲಹೆಗಾರ, ಭಾರತ ಸರ್ಕಾರದ ಆಯುಷ್ ಅಧ್ಯಕ್ಷ ಡಾ.ಎಚ್.ಆರ್.ನಾಗೇಂದ್ರ ಹೇಳಿದರು.
ಅವರು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಗ್ರಂಥಪಾಲಕರಿಗೆ ಒತ್ತಡ ನಿರ್ವಹಣೆಯ ತಂತ್ರಗಳು ವಿಷಯದ ಬಗ್ಗೆ ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.ಯೋಗ ಎಂದರೆ ಆಸನದಲ್ಲಿ ಕುಳಿತುಕೊಳ್ಳುವುದು ಎಂದರ್ಥವಲ್ಲ. ಸಮಗ್ರ ವ್ಯಕ್ತಿತ್ವವನ್ನು ವಿಕಾಸದ ಕಡೆಗೆ ಕೊಂಡೊಯ್ಯುವುದೇ ಯೋಗ ಈ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿ ಯೋಗವನ್ನು ಸೇರಿಸಬೇಕೆಂಬ ಪ್ರಯತ್ನ ನಡೆಯುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚರಣೆ ಘೋಷಣೆ ಮಾಡುವಂತೆ ಯುಎನ್ಓ ಮುಂದೆ ಕೇಳಿಕೊಂಡಾಗ, 172 ದೇಶಗಳು ಒಪ್ಪಿಗೆ ನೀಡಿದ್ದವು. ಜಾತಿ, ಮತ ಬೇಧ ಮರೆತು ಯೋಗವನ್ನು ವೈಜ್ಞಾನಿಕ ಸಾಧನವಾಗಿ ಬಳಸಿಕೊಂಡರು ಎಂದರು.ಎನ್ಸಿಟಿಯಲ್ಲಿ ಸೇರಿಸಲು ಸಚಿವೆ ಸ್ಮತಿ ಇರಾನಿ ಯತ್ನಿಸಿದರು. ಪಠ್ಯಕ್ರಮ ತಯಾರಿಸುವ ಹೊಣೆ ತನ್ನ ಹೆಗಲ ಮೇಲೆ ಹಾಕಲಾಯಿತು. ಯೋಗವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ನಿರ್ಧರಿಸಿದಾಗ ಮೂಲ ಆಧಾರ ಯಾವುದು ಎಂಬುದೇ ಗೊಂದಲವಾಯಿತು. ಕೊನೆಗೆ ಶಾಸ್ತ್ರೀಯ ಮಾನದಂಡದ ಪ್ರಕಾರ ಪಠ್ಯಕ್ರಮ ಸಿದ್ಧ ಮಾಡಲಾಯಿತು. ಯೋಗ ಶಿಕ್ಷಣ ಪಡೆದ 64 ಸಾವಿರ ಶಿಕ್ಷಕರು ಈಗಾಗಲೇ ತಯಾರಾಗಿದ್ದಾರೆ. ವರ್ಷಕ್ಕೆ 14 ಸಾವಿರದಷ್ಟು ಶಿಕ್ಷಕರನ್ನು ತಯಾರು ಮಾಡಲಾಗುತ್ತಿದೆ. ಮನುಷ್ಯತ್ವ ನಿರ್ಮಿಸುವ ಶಿಕ್ಷಣ ಇಂದಿನ ಅಗತ್ಯ. ಭಾರತ ಮತ್ತೆ ವೈಭವದ ಸ್ಥಿತಿಗೆ ಹೋಗಲು ಯೋಗದ ಪಠ್ಯಕ್ರಮ ಪೂರಕವಾಗಿದೆ ಎಂದರು.
ಮಂಗಳೂರು ವಿವಿ ಕುಲಸಚಿವ ಕೆಂಪರಾಜು ಮಾತನಾಡಿ, ಇಂದಿನ ಬದುಕಿನ ಶೈಲಿಯಿಂದ ಎಲ್ಲರೂ ಒತ್ತಡದಿಂದ ಬದುಕುವಂತಾಗಿದೆ, ಇದಕ್ಕೆ ಗ್ರಂಥಪಾಲಕರು ಇದರಿಂದ ಹೊರತಾಗಿಲ್ಲ. ಗ್ರಂಥಾಲಯವೇ ಮನೆ ಬಾಗಿಲಿಗೆ ಹೋಗಬೇಕಾದ ಸ್ಥಿತಿಯಿದೆ. ಮುಂದಿನ ದಿನಗಳಲ್ಲಿ ಗ್ರಂಥಾಲಯದ ರೂಪುರೇಷೆ ಬದಲಾಗುವ ಸೂಚನೆಗಳು ಕಾಣುತ್ತಿವೆ. ಈ ಎಲ್ಲಾ ಬದಲಾವಣೆಗೆ ಗ್ರಂಥಪಾಲಕರು, ಗ್ರಂಥಾಲಯ ತೆರೆದುಕೊಳ್ಳದ ಕಾರಣ ಒತ್ತಡ ನಿರ್ಮಾಣವಾಗಿದೆ. ತಾಂತ್ರಿಕತೆಗಳನ್ನು ಬಳಸಿಕೊಂಡು ಬದಲಾವಣೆಗೆ ತಕ್ಕಂತೆ ಒಗ್ಗಿಕೊಂಡಾಗ ಒತ್ತಡ ನಿವಾರಣೆಯಾಗಲಿದೆ ಎಂದರು.
ಗ್ರಂಥಪಾಲಕರ ಸಂಘದ ರಾಜ್ಯ ಅಧ್ಯಕ್ಷ ಡಾ.ಯು.ಎಸ್.ವಿಜಯರಾಜ್ ಕುಮಾರ್, ಮಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಖೈಸರ್ ಎಂ. ಖಾನ್, ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್ ಮಳಿ ಉಪಸ್ಥಿತರಿದ್ದರು.
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ರಾಮಚಂದ್ರ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.