ಪುತ್ತೂರು: ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದೇನೆ. ಈಗಾಗಲೇ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿವೆ. ಮುಂದಿನ ದಿನಗಳಲ್ಲಿ ಪುತ್ತೂರನ್ನು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಸ್ವಾಬಿಮಾನಿ ವೇದಿಕೆ, ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ, ಸಮರ್ಪಣಾ ಮಹಿಳಾ ವೇದಿಕೆ, ವರಮಹಾಲಕ್ಷ್ಮೀ ಪೂಜಾ ಸಮಿತಿ ಶನಿವಾರ ಪುತ್ತೂರು ಗುರುಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ತಾನು ಶಾಸಕಿಯಾಗಿದ್ದ ಸಂದರ್ಭ ಆರಂಭಗೊಂಡ ಮಿನಿವಿಧಾನಸೌಧದ ಕಾಮಗಾರಿ, ತನ್ನ ಅವಧಿಯಲ್ಲಿಯೇ ಉದ್ಘಾಟನೆಗೊಂಡದ್ದು ಖುಷಿ ತಂದಿದೆ. ಸದ್ಯ ಮಿನಿವಿಧಾನಸೌಧ ಮುಂಭಾಗ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ಇದಕ್ಕೂ ಪರಿಹಾರ ಬೇಕಾಗಿದೆ ಎಂದ ಅವರು, ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಈಗಾಗಲೇ 40 ಎಕರೆ ಜಾಗ ಗುರುತಿಸಲಾಗಿದೆ. ಸೂಕ್ತ ಜಮೀನು ದೊರಕಿದರೆ ಐಟಿಐ, ಪೊಲೀಸ್ ತರಬೇತಿ ಕೇಂದ್ರ, ಏರ್ಪೋರ್ಟ್ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಮಾತನಾಡಿ, ಶಕುಂತಳಾ ಶೆಟ್ಟಿ ಅವರು ಈ ಹಿಂದೆಯೂ ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸದಾ ಒಳ್ಳೆಯತನದಿಂದಲೇ ಕೆಲಸ ಮಾಡಿದ ಅವರಿಗೆ ಈಗ ಉತ್ತಮ ಸ್ಥಾನಮಾನ ದೊರೆತಿದೆ ಎಂದರು.
ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಂಜೀವ ಕಲ್ಲೇಗ, ಅಮಳ ರಾಮಚಂದ್ರ, ಅಸಹಾಯಕರ ಸೇವಾ ಟ್ರಸ್ಟ್ನ ಅಧ್ಯಕ್ಷೆ ನಯನಾ ರೈ, ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಜಿ. ಭಟ್, ಸಮರ್ಪಣಾ ಮಹಿಳಾ ವೇದಿಕೆಯ ಅಧ್ಯಕ್ಷೆ ಗಂಗಾರತ್ನ ವಿ. ರೈ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ ಉಪಸ್ಥಿತರಿದ್ದರು.
ಎಂ.ಬಿ.ವಿಶ್ವನಾಥ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನಮೋಹನ್ ಸ್ವಾಗತಿಸಿ, ಸುಭಾಷ್ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.