ವೇಣೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಡಳಿತದ ಪರಿಣಾಮ ಇಂದು ಭಾರತಕ್ಕೆ ಜಾಗತಿಕ ನೇತೃತ್ವ ದೊರಕಿದ್ದು, ಇದರ ಆನಂದವನ್ನು ಪ್ರತಿಯೋರ್ವ ನಾಗರಿಕರೂ ಅನುಭವಿಸುತ್ತಿದ್ದಾರೆ. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆ ಹಾಗೂ ಬಿಜೆಪಿಯ ನಾಯಕತ್ವದಿಂದ ಸಾಧ್ಯವಾಗಿದೆಯೆಂದು ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅಭಿಪ್ರಾಯ ಪಟ್ಟಿದ್ದಾರೆ.
ವೇಣೂರಿನ ಕರಂಬಳ್ಳಿ ಸಂಜೀವ ಶೆಟ್ಟಿ ಸಭಾ ಭವನದ ಡಾ| ವಿ.ಎಸ್.ಆಚಾರ್ಯ ವೇದಿಕೆಯಲ್ಲಿ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಶಿಕ್ಷಣ ವರ್ಗದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ನಮ್ಮ ನಮ್ಮ ಗ್ರಾಮಗಳಲ್ಲಿ ನಾವುಗಳು ಬದಲಾವಣೆಯ ಹರಿಕಾರರಾಗಬೇಕು. ಸಾಮಾಜಿಕ ಪಿಡುಗಾದ ಅಸ್ಪೃಶ್ಯತೆ, ನಿರುದ್ಯೋಗ, ನಿರ್ವಸತಿಗಳನ್ನು ತೊಡೆದು ಹಾಕಲು ಪ್ರತಿಯೋರ್ವರು ಸ್ವಯಂ ಪ್ರೇರಣೆಯಿಂದ ಮುಂದಾಗಿ, ಕತ್ತಲು ತುಂಬಿದ ಜಗತ್ತಿನಲ್ಲಿ ಕತ್ತಲು ಎಂದು ಗೋಳಿಡುವ ಬದಲು ಹಣತೆಯನ್ನು ಹಚ್ಚಿ, ದೀಪ ಬೆಳಗಿಸಿ ಮೌಢ್ಯವನ್ನು ಹೋಗಲಾಡಿಸುವಂತೆ ಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ಮೂರು ದಿನಗಳ ಕಾಲ ಅಭ್ಯಾಸವರ್ಗದಲ್ಲಿ ಕೌಟುಂಬಿಕ ವಾತಾವರಣ ಮೂಡಿದ್ದು, ಜೀವಮಾನದಲ್ಲಿ ನೆನಪಿಟ್ಟುಕೊಳ್ಳಬಹುದಾದ ಸಂಗತಿ ಎಂದು ಪ್ರಸ್ತಾಪಿಸಿ ಯಶಸ್ಸಿಗೆ ಕಾರಣೀಕರ್ತರಾದವರಿಗೆ ಅಭಿನಂದನೆ ಸಲ್ಲಿಸಿದರು.
ಆಶಾ ತಿಮ್ಮಪ್ಪ ಗೌಡ ವೈಯಕ್ತಿಕ ಗೀತೆ ಹಾಡಿದರು. ಸಂತೋಷ್ ಕುಮಾರ್ ಬೋಳಿಯಾರ್ ಸ್ವಾಗತಿಸಿ, ಚೆನ್ನಪ್ಪ ಕೋಟ್ಯಾನ್ ವಂದಿಸಿದರು. ದೇವದಾಸ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುಲೋಚನಾ ಭಟ್, ವಿಭಾಗ ಪ್ರಶಿಕ್ಷಣ ಸಂಚಾಲಕ ಗೋಪಾಲ ಕೃಷ್ಣ ಹೇರಳೆ, ವರ್ಗ ಪ್ರಮುಖ್ ರುಕ್ಮಯ್ಯ ಪೂಜಾರಿ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆದ ಪ್ರಶಿಕ್ಷಣ ವರ್ಗದಲ್ಲಿ ಹತ್ತು ಅವಧಿಗಳು ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮ ನಡೆದ ವಿವಿಧ ವಿಭಾಗಗಳಿಗೆ ಜಿಲ್ಲೆ ಹಾಗೂ ರಾಷ್ಟ್ರ ನಾಯಕರಾಗಿದ್ದ ದಿ| ವೀರ ಸಿಂಹನಾಯಕ್, ದಿ| ನಾರಾಯಣ ಶೆಟ್ಟಿ, ದಿ| ಬಾವುರಾವು ದೇಶಪಾಂಡೆ, ರಾಜಮಾತೆ ವಿಜಯೇರಾಜೇಸಿಂಧ್ಯರ ಹೆಸರನ್ನಿಟ್ಟು ಸ್ಮರಿಸಿಕೊಳ್ಳಲಾಯಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.