ಇತ್ತೀಚೆಗೆ ನಡೆದ ಬಿಹಾರದ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿ ಪಾಲಿಗೆ ಮರೆಯಲಾರದ ಕಹಿ ಪಾಠವಾಗಿತ್ತು ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೋಡಿ ನಾಯಕತ್ವ ಬಿಹಾರದ ಚುನಾವಣೆಯನ್ನು ಗೆಲ್ಲುವಲ್ಲಿ ಸಫಲವಾಗಲಿಲ್ಲ. ಬಿಹಾರದ ಜನರ ಮಾನಸಿಕತೆಯನ್ನು, ಅಲ್ಲಿನ ಜಾತಿ ಸಮೀಕರಣವನ್ನು ಅರ್ಥಮಾಡಿಕೊಳ್ಳುವಲ್ಲಿ ಬಿಜೆಪಿ ಸಂಪೂರ್ಣವಾಗಿ ಎಡವಿತು. ಬಿಹಾರದ ಚುನಾವಣೆಗೆ ಕಾರ್ಯತಂತ್ರ ರೂಪಿಸುವಾಗ ಭಾರತೀಯ ಜನತಾಪಕ್ಷದ ಸೇನಾಪತಿಗಳು ಕದನ ಸೋಲುವ ಗಂಭೀರ ತಪ್ಪುಗಳನ್ನು ಮಾಡಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಹಾರಿ ಚಹರೆಯನ್ನು ಜನರ ಮುಂದಿಡಬೇಕಾಗಿತ್ತು. ಆದರೆ ಚುನಾವಣಾ ಪ್ರಚಾರದ ಭಿತ್ತಿಪತ್ರಗಳಲ್ಲಿ ರಾರಾಜಿಸಿದ್ದು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಭಾವಚಿತ್ರಗಳೇ ಹೊರತು ಸ್ಥಳೀಯ ನಾಯಕರು ಬೆಳಕಿಗೇ ಬರಲಿಲ್ಲ. ಅದೊಂದು ರಾಜ್ಯದ ಚುನಾವಣೆ. ಬಿಹಾರಿಗಳಿಗೆ ಬೇಕಾಗಿದ್ದುದು ತಮ್ಮ ರಾಜ್ಯವನ್ನು ಸಮರ್ಥವಾಗಿ ಆಳಬಲ್ಲ ಒಬ್ಬ ವ್ಯಕ್ತಿ. ಮೋದಿ ಕೇಂದ್ರದಲ್ಲಿ ಈಗಾಗಲೇ ಪ್ರಧಾನಿಯಾಗಿ ಸಮರ್ಥ ಆಡಳಿತ ನಡೆಸುತ್ತಿರುವುದು ಬಿಹಾರಿಗಳ ಗಮನಕ್ಕೆ ಎಂದೋ ಬಂದಿತ್ತು. ಆದರೆ ಬಿಹಾರದಲ್ಲಿ ಸಮರ್ಥ ಆಡಳಿತ ನಡೆಸಬಲ್ಲ ಬಿಜೆಪಿಯ ಪ್ರತಿನಿಧಿ ಯಾರು? ಜನರ ಮನದಲ್ಲೆದ್ದ ಈ ಪ್ರಶ್ನೆಗೆ ಬಿಜೆಪಿ ಅಲ್ಲಿ ಕೊನೆಯವರೆಗೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಮೋದಿಯವರ ಹಲವಾರು ಸಭೆಗಳು ನಡೆದವು. ಅಭಿವೃದ್ಧಿಯ ಕನಸನ್ನು ಬಿಜೆಪಿ ಅಲ್ಲಿ ಬಿತ್ತಿತು. ಆದರೆ ಜನಮನದಲ್ಲೆದ್ದ ಮೇಲಿನ ಪ್ರಶ್ನೆಗೆ ಬಿಜೆಪಿ ಸೂಕ್ತ ಉತ್ತರ ನೀಡದಿದ್ದುದರಿಂದ ಜನರೆಲ್ಲಾ ನಿತಿಶ್ಕುಮಾರ್ ಮಾತ್ರ ಸಮರ್ಥ ಆಡಳಿತವನ್ನು ಬಿಹಾರಕ್ಕೆ ಕೊಡಬಲ್ಲರೆಂದು ಯೋಚಿಸಿ ಮತನೀಡಿದ್ದು ಸಹಜವೇ ಆಗಿತ್ತು.
ಅದೂ ಅಲ್ಲದೆ ತಮ್ಮ ವಿರೋಧಿಗಳನ್ನು ಒಂದಾಗಲು ಬಿಜೆಪಿ ಬಿಟ್ಟಿದ್ದು ಇನ್ನೊಂದು ಪ್ರಮಾದ. ನಿತಿಶ್ ಮತ್ತು ಲಾಲೂ ಬದ್ಧ ರಾಜಕೀಯ ವೈರಿಗಳು. ಈ ಬಾರಿ ಮಾತ್ರ ಅವರಿಬ್ಬರು ಬಿಜೆಪಿಯನ್ನು ಸೋಲಿಸಲು ಒಂದಾದರು. ಅವರ ಜೊತೆಗೆ ಕಾಂಗ್ರೆಸ್ ಕೂಡ ಸೇರಿತ್ತು. ಜೆಡಿಯು ನೇತೃತ್ವದ ಮಹಾಮೈತ್ರಿಕೂಟ ರಚನೆಯಾದಾಗಲೇ ಬಿಜೆಪಿಯ ಸೋಲು ನಿಶ್ಚಿತವಾಗಿತ್ತು. ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಬೇಡವಾಗಿದ್ದ ಗೋಮಾಂಸ ವಿವಾದ, ಮೀಸಲಾತಿ ಕುರಿತ ವ್ಯತಿರಿಕ್ತ ಹೇಳಿಕೆಗಳು, ವಿರೋಧಿಗಳ ವಿರುದ್ಧ ವೈಯಕ್ತಿಕ ನಿಂದನೆಗಳು… ಇವೆಲ್ಲಾ ಬಿಜೆಪಿ ಪಾಲಿಗೆ ಮತ್ತಷ್ಟು ದುಬಾರಿ ಎನಿಸಿತು. ಪರಿಣಾಮವಾಗಿ ಬಿಜೆಪಿ ಬಿಹಾರದಲ್ಲಿ ಸೋಲಬೇಕಾಯಿತು.
* * *
ಬಿಹಾರದಲ್ಲಿ ಬಿಜೆಪಿ ಸೋತ ಮಾತ್ರಕ್ಕೆ ಅದರ ಭವಿಷ್ಯವೇ ಉಡುಗಿ ಹೋಯಿತೆಂದು ವಿಶ್ಲೇಷಿಸುವುದು ತಪ್ಪಾಗುತ್ತದೆ. ಒಂದೊಂದು ರಾಜ್ಯದ ಚುನಾವಣೆಯ ರೀತಿನೀತಿ, ರಾಜಕೀಯ ಸಮೀಕರಣಗಳು ಬೇರೆಯೇ ಇರುತ್ತವೆ. ಒಂದು ರಾಜ್ಯದ ಸಮೀಕರಣವನ್ನು ಅಥವಾ ರಾಜಕೀಯ ಲೆಕ್ಕಾಚಾರವನ್ನು ಮತ್ತೊಂದು ರಾಜ್ಯದ ಚುನಾವಣೆಯೊಂದಿಗೆ ಸಮೀಕರಿಸುವುದು ಸೂಕ್ತವಲ್ಲ. ಉದಾಹರಣೆಗೆ ಮೊನ್ನೆಮೊನ್ನೆ ಕೇರಳದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶವನ್ನೇ ಗಮನಿಸಿ. ಕೇರಳದಲ್ಲಿ ಬಿಜೆಪಿಯದು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಹ ಸ್ಥಿತಿ. ಅಲ್ಲಿನ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇದುವರೆಗೂ ತನ್ನ ಖಾತೆ ತೆರೆದದ್ದೇ ಇಲ್ಲ. ಪ್ರತಿಬಾರಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳು, ’ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ’ ಎಂದು ಭವಿಷ್ಯ ನುಡಿಯುತ್ತಲೇ ಇದ್ದರೂ ಫಲಿತಾಂಶ ಪ್ರಕಟವಾದಾಗ ಮಾತ್ರ ಬಿಜೆಪಿಯ ಹಾದಿ ಇನ್ನೂ ಬಲು ದೂರ ಎಂಬುದು ವೇದ್ಯವಾಗುತ್ತಿರುತ್ತದೆ. ಇದಕ್ಕೆ ಕಾರಣ ಕೇರಳದಲ್ಲಿ ಮತಗಳ ರಾಜಕೀಯ ಧೃವೀಕರಣವಾಗಿರುವುದು. ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಎಂ ಸಾರಥ್ಯದ ಎಲ್ಡಿಎಫ್ ನಡುವೆ ಮತಗಳು ಅಲ್ಲಿ ಹಂಚಿಹೋಗುತ್ತವೆ. ಮುಸ್ಲಿಂ ಲೀಗ್ ಈ ಎರಡು ಮೈತ್ರಿಕೂಟಗಳ ನಡುವೆ ಪ್ರತಿಬಾರಿ ತನ್ನ ರಾಜಕೀಯ ಆಟ ನಡೆಸುತ್ತಲೇ ಇರುತ್ತದೆ. ಈ ಆಟದಿಂದ ರಾಜಕೀಯ ಲಾಭ ಮಾಡಿಕೊಳ್ಳುವುದಷ್ಟೇ ಅದರ ಉzಶ. ಹಾಗಾಗಿ ಬಿಜೆಪಿ ಅಲ್ಲಿ ಇದುವರೆಗೆ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಯೇ ಇಲ್ಲ.
ಆದರೆ ಮೊನ್ನೆ ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯದು ಗಮನಾರ್ಹ, ಅಚ್ಚರಿ ಹುಟ್ಟಿಸುವ ಸಾಧನೆ. ಬಿಜೆಪಿಯ ಮತಗಳಿಕೆಯ ಶೇಕಡಾವಾರು ಪ್ರಮಾಣ 6.25 ರಿಂದ 13.28 ಕ್ಕೆ ಏರಿಕೆಯಾಗಿದೆ. ಅದು ಈ ಬಾರಿ ಎಸ್ಎನ್ಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಇಳಿದಿದ್ದು ಇದಕ್ಕೆ ಪ್ರಮುಖ ಕಾರಣ. ಹೆಚ್ಚಾಗಿ ಇಳವ ಸಮಾಜವನ್ನು ಪ್ರತಿನಿಧಿಸುವ ಎಸ್ಎನ್ಡಿಪಿಯ ಮತದಾರರು ಬಹುತೇಕವಾಗಿ ಎಡಪಂಥೀಯ ಚಿಂತನೆಯುಳ್ಳವರು. ಎಸ್ಎನ್ಡಿಪಿ ಜೊತೆಗಿನ ಮೈತ್ರಿ ಬಿಜೆಪಿಗೆ ಈ ಬಾರಿ ವರವಾಗಿ ಪರಿಣಮಿಸಿದೆ. ಕೇರಳದ ಬಹುತೇಕ ಮುನಿಸಿಪಲ್ ಕಾರ್ಪೊರೇಷನ್ಗಳಲ್ಲಿ ಬಿಜೆಪಿ ತನ್ನ ಹೆಜ್ಜೆ ಊರಿದೆ. ಅನೇಕ ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಕೇರಳದ ರಾಜಧಾನಿ ತಿರುವನಂತಪುರ ಮಹಾನಗರಪಾಲಿಕೆಯ ಒಟ್ಟು 100 ಸ್ಥಾನಗಳಲ್ಲಿ ಬಿಜೆಪಿ ಈ ಬಾರಿ ಗೆದ್ದಿರುವುದು ಬರೋಬ್ಬರಿ 35 ಸ್ಥಾನಗಳು. ಕಳೆದ ಬಾರಿ ಗೆದ್ದಿದ್ದು ಕೇವಲ 6 ಸ್ಥಾನಗಳಲ್ಲಿ ಮಾತ್ರ. ಕೊಜಿಕೋಡ್ ಪಾಲಿಕೆಯಲ್ಲಿ ಬಿಜೆಪಿಯ ಬಲ ಶೂನ್ಯದಿಂದ ೭ಕ್ಕೇರಿದೆ. ತ್ರಿಶೂರ್ ಪಾಲಿಕೆಯಲ್ಲಿ 2 ರಿಂದ 6ಕ್ಕೆ ಏರಿಕೆ. ಕೊಚ್ಚಿ ಪಾಲಿಕೆಯಲ್ಲಿ ಶೂನ್ಯದಿಂದ 2 ಕ್ಕೆ ಏರಿಕೆ. ಒಟ್ಟಾರೆ ಪಾಲಿಕೆ ಸದಸ್ಯರ ಬಲ 9 ರಿಂದ 51 ಕ್ಕೆ ಏರಿಕೆ. ಮುನಿಸಿಪಲ್ ಸದಸ್ಯರ ಬಲ 78 ರಿಂದ 236 ಕ್ಕೆ. ಗ್ರಾಮಪಂಚಾಯತ್ ಸದಸ್ಯರ ಬಲ 380 ರಿಂದ 936 ಕ್ಕೆ.
ಪಾಲಕ್ಕಾಡ್ ಮುನಿಸಿಪಾಲಿಟಿಯಲ್ಲಿ 24 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಈ ಪೈಕಿ ಮಹಿಳೆಯರೇ 15 ಮಂದಿ. ಯುಡಿಎಫ್ ಮತ್ತು ಎಲ್ಡಿಎಫ್ಗೆ ಅಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ! ಕೊಡಂಗಲ್ಲೂರು, ತ್ರಿಪ್ಪುನಿತುರ, ಕಾಸರಗೋಡು, ಥಾನೂರು ಮತ್ತು ಶೋರನೂರು – ಈ ಐದು ಮುನಿಸಿಪಾಲಿಟಿಗಳಲ್ಲಿ ಬಿಜೆಪಿ ಪ್ರಧಾನ ಪ್ರತಿಪಕ್ಷ . ಕೊಡಂಗಲ್ಲೂರು ಈ ಹಿಂದೆ ಸಿಪಿಎಂನ ಭದ್ರ ಕೋಟೆಯಾಗಿತ್ತು. ಈಗ ಅಲ್ಲಿನ ಒಟ್ಟು 44 ಸ್ಥಾನಗಳಲ್ಲಿ ಬಿಜೆಪಿಯದು 16 ಸ್ಥಾನ.
ಮುಸ್ಲಿಂ ಬಾಹುಳ್ಯದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಈ ಬಾರಿ ಮುಸ್ಲಿಂ ಲೀಗ್ ಪಕ್ಷಕ್ಕೆ ಮತದಾರರು ಸರಿಯಾದ ಬುದ್ಧಿ ಕಲಿಸಿದ್ದಾರೆ. 94 ಗ್ರಾಮಪಂಚಾಯಿತಿಗಳ ಪೈಕಿ ಮುಸ್ಲಿಂಲೀಗ್ ಗೆದ್ದಿರುವುದು 54 ಮಾತ್ರ. ಬಿಜೆಪಿಯ ಮತಗಳಿಕೆ ಪ್ರಮಾನ ಶೇ.6.25 ರಿಂದ ಶೇ.13.28ಕ್ಕೆ ಏರಿಕಯಾಗಿದ್ದರೆ, ಎಲ್ಡಿಎಫ್ ಶೇ.39.96 ರಿಂದ ಶೇ.37.36 ಕ್ಕೆ ಕುಸಿದಿದೆ. ಅದೇ ರೀತಿ ಯುಡಿಎಫ್ ಶೇ. 45.55 ರಿಂದ ಶೇ. 37.23 ಕ್ಕೆ ತನ್ನ ಮತಗಳಿಕೆ ಪ್ರಮಾಣ ಕಳೆದುಕೊಂಡಿದೆ. ಕೇರಳದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಯನ್ನು ಸಂಪೂರ್ಣ ಗುಡಿಸಿ ಹಾಕಿದ್ದ ರಾಜಕೀಯ ವಿಶ್ಲೇಷಕರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅತ್ಯಾಶ್ಚರ್ಯ ಮೂಡಿಸಿದೆ. ಕೇರಳದ 60 ವರ್ಷಗಳ ರಾಜಕೀಯ ಇತಿಹಾಸ ಈಗ ಬದಲಾವಣೆಗೆ ತೆರೆದುಕೊಂಡಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿದ್ದಾರೆ. ಈಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೂರಾರು ಸ್ಥಾನಗಳನ್ನು ಬೆರಳೆಣಿಕೆಯ ಮತಗಳ ಅಂತರದಿಂದ ಕಳೆದುಕೊಂಡಿದೆ. ಕೆಲವೆಡೆ ಅದು 20 ಕ್ಕಿಂತಲೂ ಕಡಿಮೆ ಮತಗಳಿಂದ ಸೋತಿದೆ.
ಮಲೆಯಾಳಿ ಮತದಾರರಲ್ಲಿ ಹೊಸ ರಾಜಕೀಯ ಚಿಂತನೆಗೆ ಶುರುವಿಟ್ಟುಕೊಂಡಿದೆ ಎಂಬುದಕ್ಕೆ ಈಗಿನ ಈ ಚುನಾವಣೆಯೇ ಸಾಕ್ಷಿ. ಎಲ್ಡಿಎಫ್ ಮತ್ತು ಯುಡಿಎಫ್ ಆಡಳಿತ ನೋಡಿ ಬೇಸತ್ತು ಹೋಗಿರುವ ಮತದಾರರು ಮೂರನೇ ರಾಜಕೀಯ ಶಕ್ತಿಯೊಂದಕ್ಕೆ ಅವಕಾಶ ನೀಡುವ ಯೋಚನೆಯಲ್ಲಿದ್ದಾರೆ. ಬಿಜೆಪಿ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಆಶಾದಾಯಕವಾಗಬಹುದು ಎನ್ನುವುದಕ್ಕೆ ಇದೊಂದು ದಿಕ್ಸೂಚಿ. ಆದರೆ ಬಿಜೆಪಿಯ ಬೆಳವಣಿಗೆ ಸಹಿಸದ ಎಲ್ಡಿಎಫ್ ಮತ್ತು ಯುಡಿಎಫ್ ಬಿಹಾರದಲ್ಲಿ ಆದಂತೆ ಮಹಾಮೈತ್ರಿ ರಚಿಸಿಕೊಂಡು ಬಿಜೆಪಿಯನ್ನು ತುಳಿದರೆ ಆಶ್ಚರ್ಯವಿಲ್ಲ.
***
ಇಲ್ಲಿ ಕರ್ನಾಟಕದಲ್ಲಿ ಆಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾ ಮತ್ತೆ ಬಿಜೆಪಿ ಅಧಿಕಾರಕ್ಕೇರಲು ಅವಕಾಶ ಕಲ್ಪಿಸುತ್ತಿದೆ. ಬಿಜೆಪಿಯ ಭ್ರಷ್ಟಾಚಾರದ ಕುರಿತು ಆಕಾಶ-ಭೂಮಿ ಒಂದಾಗುವಂತೆ ಒದರುತ್ತಿದ್ದ ಕಾಂಗ್ರೆಸ್ ಮುಖಂಡರು, ಈಗ ಸಿದ್ದರಾಮಯ್ಯ ಸಂಪುಟದ ಭ್ರಷ್ಟಾಚಾರಿ ಸಚಿವರನ್ನು ತೆಪ್ಪಗೆ ಸಹಿಸಿಕೊಳ್ಳತೊಡಗಿದೆ. ತನ್ನ ಮುಖಂಡರ ಭ್ರಷ್ಟಾಚಾರ ಮುಚ್ಚಿಹಾಕಲು ಉಪಲೋಕಾಯುಕ್ತರ ಪದಚ್ಯುತಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಂಗೀಕಾರ ಪಡೆದುಕೊಂಡಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆನ್ನುಹತ್ತಿದ್ದ ಭ್ರಷ್ಟಾಚಾರ ಹಗರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲಿನ ಭ್ರಷ್ಟಾಚಾರ ಆರೋಪಗಳ ಪ್ರಾಸಿಕ್ಯೂಷನ್ಗೆ ಸರಿಯಾದ ವಿವೇಚನೆ ಬಳಸದೆ ಆಗಿನ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದು ಅಕ್ರಮ ಎಂದು ಹೈಕೋರ್ಟ್ ಹೇಳಿರುವುದರಿಂದ ಬಿಎಸ್ವೈ ಈಗ ಕಳಂಕಮುಕ್ತರಾಗಿ ಹೊರಬಂದಿದ್ದಾರೆ. ಬಿಜೆಪಿ ಅವರ ನೇತೃತ್ವದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ, ಮುಂದಿನ ಚುನಾವಣೆಗೆ ಅಣಿಯಾದರೆ ಕಳೆದುಹೋದ ಅಧಿಕಾರ ಮರಳಿ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಅದಕ್ಕಾಗಿ ಸೂಕ್ತ ತಂತ್ರಗಾರಿಕೆಯನ್ನು ಈಗಿನಿಂದಲೇ ಹೆಣೆಯಬೇಕು. ಗುಂಪುಗಾರಿಕೆ, ಸ್ವಾರ್ಥ ರಾಜಕೀಯ, ಅಧಿಕಾರ ದಾಹ ಪ್ರವೃತ್ತಿಗಳಿಂದ ದೂರ ಉಳಿದು, ಆಗಿಹೋದ ಪ್ರಮಾದಗಳಿಂದ ಪಾಠ ಕಲಿತು ಎಚ್ಚರಿಕೆಯ ಹೆಜ್ಜೆಯಿಟ್ಟರೆ ಬಿಜೆಪಿಗೆ ಅವಕಾಶದ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.