ಬೆಳ್ತಂಗಡಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗಟ್ಟಿದೆ. ಗೊಂದಲದ ಗೂಡಾಗಿರುವ ರಾಜ್ಯ ಸರಕಾರದ ವೈಫಲ್ಯಗಳನ್ನು ಜನತೆಗೆ ಸೂಕ್ತ ರೀತಿಯಲ್ಲಿ ಯೋಜನಾ ಬದ್ಧವಾಗಿ ತಿಳಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ಪ್ರಯತ್ನ ನಡೆಯಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.
ಅವರು ವೇಣೂರಿನ ಬಾಹುಬಲಿ ಸಭಾಭವನದಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ ಸಭಾಂಗಣದ ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಪಂ| ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದ ಅಂಗವಾಗಿ ಮೂರು ದಿನಗಳ ದ.ಕ.ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ, ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
ಕಾನೂನು ಅವ್ಯವಸ್ಥೆಯಿಂದ ಕರ್ನಾಟಕವೇ ಕುಸಿದು ಬೀಳುವ ಸ್ಥಿತಿಗೆ ಬಂದಿದೆ. ಅಸಹಿಷ್ಣುತೆ ಹೆಸರಲ್ಲಿ ದೇಶವನ್ನೇ ಒಡೆಯುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಸರಕಾರ ಅನುಷ್ಠಾನಿಸಿದ ಭಾಗ್ಯಲಕ್ಷ್ಮೀ ಯೋಜನೆಯನ್ನು, ದೇವಸ್ಥಾನಗಳ ತಸ್ತೀಕನ್ನು ಈಗಿನ ಸರಕಾರ ನಿಲ್ಲಿಸಿದೆ. ಮುಂದಿನ ದಿನಗಳು ಭಾರತದ್ದು ಎಂದು ವಿಶ್ವವೇ ಹೇಳುತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರಾಜ್ಯದ ಆಡಳಿತವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ನರೇಂದ್ರ ಮೋದಿ ಮತ್ತು ಅವರ ತಂಡ ಭಾರತಕ್ಕಾಗಿ ಅಧ್ಬುತವಾಗಿ ಕೆಲಸ ಮಾಡುತ್ತಿದೆ. ಇನ್ನೆರಡು ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಅಗಾಧವಾಗಿ ಬದಲಾಗಲಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗಳಿಸಲು ಕಾರ್ಯಕರ್ತರು ಯೋಜಿತವಾಗಿ ಕೆಲಸ ಮಾಡಬೇಕಾಗಿರುವ ಅಗತ್ಯವನ್ನು ಅವರು ಮನಗಂಡರು.
ಸಮರ್ಥ, ಸಮೃದ್ಧ, ಸ್ವಾಭಿಮಾನಿ, ಶಕ್ತಿಶಾಲಿ ಭಾರತದ ನಿರ್ಮಾಣಕ್ಕೆ ಬಿಜೆಪಿ ಇದೆಯೇ ಹೊರತು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಂಸದ, ಶಾಸಕ ಯಾರು ಆಗುತ್ತಾರೆ ಎಂಬುದಕ್ಕಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಹೆಗಲಿಗೆ ಗುರುತರ ಜವಾಬ್ದಾರಿ ಬರಲಿದೆ. ವಿಪಕ್ಷಗಳ ಟೀಕೆಗಳಿಗೆ ಉತ್ತರಿಸಲು ಇನ್ನೂ ಸಮರ್ಥರಾಗಬೇಕಾಗಿದೆ. ಗ್ರಾಮ ಪಂ.ಗಳಲ್ಲಿ ಪಕ್ಷ ಗೆದ್ದಂತೆ ಮುಂದಿನ ತಾ.ಪಂ., ಜಿ.ಪಂ.ಗಳ ಚುನಾಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಲು ಒಗ್ಗಟ್ಟಿನ ಪ್ರದರ್ಶನ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಅವರು ಪಕ್ಷವು ತನ್ನ ಗುರಿ ಮುಟ್ಟಲು ಕಾರ್ಯಕರ್ತರು ದಿಕ್ಕು ತಪ್ಪದಂತೆ ಎಚ್ಚರಿಸಲು ಈ ವರ್ಗವನ್ನು ಆಯೋಜಿಸಲಾಗಿದೆ ಎಂದರು.
ವೇದಿಕೆಯಲ್ಲಿ ವರ್ಗದ ಅಧ್ಯಕ್ಷ ರಮಾನಾಥ ಅತ್ತಾರ್ ಉಪಸ್ಥಿತರಿದ್ದರು. ವರ್ಗ ಪ್ರಮುಖ್ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಸ್ವಾಗತಿಸಿದರು. ಸಂಚಾಲಕ ಸುದರ್ಶನ ಮೂಡಬಿದರೆ ವಂದಿಸಿದರು. ದೇವದಾಸ್ ಶೆಟ್ಟಿ ವಂದೇ ಮಾತರಂ ಹಾಡಿ ಕಾರ್ಯಕ್ರಮ ನಿರ್ವಹಿಸಿದರು. ಭಾನುವಾರ ಸಂಜೆ ಸಮಾರೋಪ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.