ಬೆಳ್ತಂಗಡಿ : ಅಕ್ರಮ ಸಕ್ರಮ ಯೋಜನೆಯಲ್ಲಿ ಸಮಿತಿಯಿಂದ ಮಂಜೂರಾಗಿದ್ದರೂ ಇನ್ನೂ ಹಕ್ಕುಪತ್ರ ವಿತರಣೆಯಾಗದ ಪ್ರಕರಣಗಳನ್ನು ಪರಿಶೀಲಿಸಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರು ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡುತ್ತಾ ತಾಲೂಕು ಆಡಳಿತಕ್ಕೆ ಈ ಸೂಚನೆ ನೀಡಿದರು. ಅಕ್ರಮ ಸಕ್ರಮ ಯೋಜನೆಯಲ್ಲಿ ಬಂದಿರುವ ಅರ್ಜಿಗಳು ಎಲ್ಲ ಪರಿಶೀಲನೆಗಳೂ ಮುಗಿದು ಸಮಿತಿಯ ಮುಂದೆ ಬಂದು ಮಂಜೂರಾದರೂ ಹಕ್ಕು ಪತ್ರ ಸಿಗದಿರುವ ಬಗ್ಗೆ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಜಶೇಖರ ಅಜ್ರಿ ಅವರು ಈ ಹಿಂದೆಯೂ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರು ಇಂದು ಮತ್ತೆ ಇದೇ ವಿಚಾರವನ್ನು ಗಮನಕ್ಕೆ ತಂದರು. ಬಂದಿದ್ದ ಸಾರ್ವಜನಿಕರೂ ಇದೇ ವಿಚಾರವನ್ನು ತಿಳಿಸಿದಾಗ ಜಿಲ್ಲಾಧಿಕಾರಿಯವರು ಆದಷ್ಟು ಬೇಗ ಈ ಕಡತಗಳ ಪರಿಶೀಲನೆ ಮತ್ತು ವಿಲೇವಾರಿಗಾಗಿ ಕಡತ ಯಜ್ಞ ನಡೆಸುವಂತೆ ಸೂಚಿಸಿದರು, ಇದಕ್ಕೆ ಮಾರ್ಗದರ್ಶನ ನೀಡುವಂತೆ ಪುತ್ತೂರು ಸಹಾಯಕ ಕಮಿಷನರ್ ಅವರಿಗೂ ಸೂಚನೆ ನೀಡಿದರು.
ಸರ್ವೆ ಇಲಾಖೆಯ ವಿರುದ್ದ ಸಾರ್ವಜನಿಕರು ಹಲವು ದೂರುಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಸರ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕ್ರಮಬದ್ದವಾಗಿ ಕೆಲಸ ಮಾಡುವಂತೆ ಬಂದ ಅರ್ಜಿಗಳನ್ನು ಅರ್ಹತೆಯ ಆಧಾರದ ಮೇಲೆ ಕಡತಗಳನ್ನು ವಿಲೇ ಮಾಡುವಂತೆ ಸೂಚನೆ ನೀಡಿದರು. ಸರ್ವೆ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಯಿತು. ಶಿಶಿಲ ಗ್ರಾಮದ ಸುಬ್ರಾಯ ಮಲೆಕುಡಿಯ ಅವರು ಕಳೆದ ಬಾರಿ ಜಿಲ್ಲಾಧಿಕಾರಿಯವರಲ್ಲಿ ಮನವಿ ಸಲ್ಲಿಸಿ ತನಗೆ ಮಂಜೂರಾಗಿದ್ದ 2.5 ಎಕ್ರೆ ಜಮೀನಿನಲ್ಲಿ 1.5 ಎಕ್ರೆ ಮಾತ್ರ ಲಭಿಸಿದ್ದು ಉಳಿದ ಜಮೀನು ಒದಗಿಸುವಂತೆ ಮನವಿ ಮಾಡಿದ್ದರು ಈ ಮನವಿಗೆ ಸರಿಯಾದ ಉತ್ತರ ಲಭಿಸದಿರುವ ಬಗ್ಗೆ ಅವರು ಮತ್ತೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ತಾಲೂಕು ಆಡಳಿತ ನೀಡಿರುವ ಉತ್ತರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಯವರು ಕೂಡಲೆ ಅವರಿಗೆ ಸಂಪೂರ್ಣ ದಾಖಲೆಗಳೊಂದಿಗೆ ಉತ್ತರ ನೀಡಬೇಕು ಹಾಗೂ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಸೂಚಿಸಿದರು.
ಎಂಡೋಸಲ್ಫಾನ್ ಸಂತ್ರಸ್ಥರ ಮಾಸಾಶನ ಬಾರದಿರುವ ಬಗ್ಗೆ ಬಂದ ದೂರು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ತಡೆಹಿಡಿಯಲಾಗಿರುವ ಮಾಸಾಶನಗಳನ್ನು ಈಗಾಗಲೆ ಸರಿಪಡಿಸಲಾಗಿದ್ದು ಡಿಸೆಂಬರ್ ತಿಂಗಳಿನಿಂದ ಎಲ್ಲರಿಗೂ ಕ್ರಮ ಬದ್ದವಾಗಿ ಮಸಾಶನ ವಿತರಣೆಯಾಗಲಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ವಿವಿಧ ಮನವಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಹಲವು ವಿಚಾರಗಳಲ್ಲಿ ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಪ್ರತಿ ತಿಂಗಳ ಕೊನೆಯ ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಗೆ ಆಬಮಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಈ ಸಂದರ್ಭ ಪುತ್ತೂರು ಸಹಾಯಕ ಕಮೀಷನರ್ ಸತೀಶ್, ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.