ಮಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಎ. 11ರಿಂದ 30ರವರೆಗೆ ನಡೆಯಲಿದ್ದು, ಅದನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸರಕಾರಿ ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲಿ ವಿನಾಯಿತಿ ನೀಡಲಾಗುವುದಿಲ್ಲ. ಸಮೀಕ್ಷೆಯನ್ನು ತಾಳ್ಮೆ ಹಾಗೂ ಅತ್ಯಂತ ಸಮರ್ಪಕವಾಗಿ ನಡೆಸುವಂತೆ ಸ್ಪಷ್ಟಪಡಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಇಂದು ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯ 55ಕಾಲಂಗಳಲ್ಲಿಯೂ ಕುಟುಂಬದ ಸದಸ್ಯರ ಪ್ರತ್ಯೇಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿರುವುದರಿಂದ ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಗಣತಿದಾರರು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕ್ರೈಸ್ತ ಬಾಂಧವರು ಧರ್ಮ ವಿಭಾಗದಲ್ಲಿ ತಮ್ಮ ಧರ್ಮವನ್ನು ನಮೂದಿಸಿ ಆವರಣದಲ್ಲಿ ತಮ್ಮ ತಮ್ಮ ಸಮುದಾಯವನ್ನು ನಮೂದಿಸಲು ಅವಕಾಶವಿದೆ. ಮನ್ಸ ಎಂಬ ಜಾತಿಯ ಉಲ್ಲೇಖವಿದೆ. ಪರಿಶಿಷ್ಟ ಜಾತಿ ಎಂದು ಯಾವುದೇ ಕೋಡ್ ಸಂಖ್ಯೆ ನೀಡಲಾಗಿಲ್ಲ. ಆಯಾಯ ಸಮುದಾಯವನ್ನೇ ವಿಭಾಗಿಸಲಾಗಿದೆ. ಪಟ್ಟಿಯಲ್ಲಿ ಇಲ್ಲದ ಜಾತಿಯ ಉಲ್ಲೇಖವಿದ್ದರೂ ಇತರ ಎಂಬಲ್ಲಿ ಅದನ್ನು ನಮೂದಿಸಿಕೊಳ್ಳಲು ಅವಕಾಶವಿದೆ ಎಂದು ಸಚಿವ ರೈ ಹೇಳಿದರು.
ಹಿಂದಿನ ಫಾರಂನಲ್ಲಿ ಇಲ್ಲದ ಹೊಸ ವಿಚಾರಗಳನ್ನು ಹೊಸ ಫಾರಂಗಳಲ್ಲಿ ಅಳವಡಿಸಲಾಗಿರುವುದರಿಂದ ಗೊಂದಲವಾಗಿದೆ ಎಂದು ಸಭೆಯ ಆರಂಭದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಾನಂದ ದೇವಾಡಿಗ ಅವರು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಹೊಸ ಫಾರಂಗಳನ್ನು ಸಭೆಯಲ್ಲಿ ಭಾಗವಹಿಸಿದ್ದವರಿಗೆ ನೀಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ಯು.ಟಿ. ಖಾದರ್ರವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಬ್ಬ ಸದಸ್ಯರಿಂದಲೂ ವೈಯಕ್ತಿಕ ಮಾಹಿತಿ
ಒಂದೆರಡು ದಿನದ ಮಗು (ಇನ್ನೂ ಹೆಸರಿಡದ)ವನ್ನೂ ಸಮೀಕ್ಷಾ ಪಟ್ಟಿಯಲ್ಲಿ ಕುಟುಂಬದ ಸದಸ್ಯರಾಗಿ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಹೆಸರಿನಲ್ಲಿ ಶಿಶು ಎಂದು ನಮೂದಿಸಲಾಗುತ್ತದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದರೂ, ಬಾಡಿಗೆ ಮನೆಯಲ್ಲಿದ್ದರೂ ಪಡಿತರ ಚೀಟಿಯಲ್ಲಿ ಹೆಸರಿದ್ದಲ್ಲಿ ಅವರನ್ನು ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಒಂದು ಕುಟುಂಬದ ಸದಸ್ಯರು (ತಾತ್ಕಾಲಿಕವಾಗಿ ಬೇರೆ ಕಡೆ ನೆಲೆಸಿದ್ದಲ್ಲಿ) ಎರಡೆರಡು ಕಡೆಗಳಲ್ಲಿ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪ್ರದೀಪ್ ಡಿಸೋಜಾ ಸಮೀಕ್ಷಾ ಪಟ್ಟಿ ಕುರಿತು ಸಮಗ್ರ ಮಾಹಿತಿ ನೀಡಿದರು.
ತಪ್ಪು ಮಾಹಿತಿಯಿಂದ ಮುಂದಿನ ಜನಾಂಗಕ್ಕೆ ಅನ್ಯಾಯ
ಗಣತಿದಾರರು ಮನೆಗಳಿಗೆ ಭೇಟಿ ನೀಡುವ ಸಂದರ್ಭ ಮನೆಯವರು ನೈಜ ಮಾಹಿತಿಗಳನ್ನು ನೀಡುವ ಮೂಲಕ ಸಹಕರಿಸಬೇಕು. ತಪ್ಪು ಮಾಹಿತಿ ನೀಡಿದ್ದಲ್ಲಿ ಮುಂದಿನ ಜನಾಂಗಕ್ಕೆ ಅನ್ಯಾಯ ಮಾಡಿದಂತೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕುಟುಂಬದ ಪ್ರತಿಯೊಬ್ಬ ಸದಸ್ಯರ ವೈಯಕ್ತಿಕ ಮಾಹಿತಿಯನ್ನು ಸಮೀಕ್ಷೆಯಲ್ಲಿ ದಾಖಲಿಸಲಾಗುತ್ತಿದ್ದು, ಧರ್ಮ, ಜಾತಿಗೆ ಸಂಬಂಧಿಸಿ ಪ್ರತ್ಯೇಕವಾಗಿ ಜಾತಿ, ಧರ್ಮವನ್ನು ನಮೂದಿಸಲು ಅವಕಾಶವಿದೆ.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ, ಸಮಾಜ ಕಲ್ಯಾಣ ಅಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.