ದೇಶದಾದ್ಯಂತ ಅಸಹನೆ, ಅಸಹಿಷ್ಣುತೆ ಮೇರೆ ಮೀರುತ್ತಿದೆ ಎಂಬ ಬುದ್ಧಿಜೀವಿಗಳ, ಕೆಲವು ಕಲಾವಿದರ ಆಕ್ರೋಶದ ಹಿಂದೆ ಅವರನ್ನು ಹಾಗೆ ಹೇಳುವಂತೆ ಪ್ರಚೋದಿಸಿರುವವರು ಯಾರು? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆಲೋಚಿಸಿದಾಗಲೆಲ್ಲ ಪ್ರಜ್ಞಾವಂತರಿಗೆ ತಕ್ಷಣ ಅನಿಸುವುದು – ಮಾಧ್ಯಮಗಳ ಅತಿರೇಕದ ಪ್ರಚಾರವೇ ಇದಕ್ಕೆ ಕಾರಣವೆಂದು. ದಾದ್ರಿಯಲ್ಲಿ ನಡೆದ ಒಂದು ಘಟನೆ, ಕರ್ನಾಟಕದಲ್ಲಿ ನಡೆದ ಇನ್ನೊಂದು ಘಟನೆಯನ್ನೇ ವೈಭವೀಕರಿಸಿ ದೇಶದಾದ್ಯಂತ ಅಸಹನೆ ಮಡುಗಟ್ಟಿದೆ ಎಂದು ಬಿಂಬಿಸಿದ್ದೇ ಮಾಧ್ಯಮಗಳು. ಈ ಎರಡು ಘಟನೆಗಳಿಗೂ ಕೇಂದ್ರದ ಎನ್ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರೇ ನೇರವಾಗಿ ಹೊಣೆ ಎಂದು ಆಪಾದಿಸಿದ್ದು ಕೂಡ ಇದೇ ಮಾಧ್ಯಮಗಳು.
ವಿಚಿತ್ರವೆಂದರೆ ದಾದ್ರಿ ಹಾಗೂ ಕಲಬುರ್ಗಿ ಹತ್ಯೆ ಘಟನೆಗಳು ನಡೆದದ್ದು ಬಿಜೆಪಿಯ ಆಳ್ವಿಕೆಯ ರಾಜ್ಯಗಳಲ್ಲಲ್ಲ. ದಾದ್ರಿ ಇರುವುದು ಉತ್ತರ ಪ್ರದೇಶದಲ್ಲಿ. ಅಲ್ಲಿ ಆಡಳಿತ ನಡೆಸುತ್ತಿರುವುದು ಸಮಾಜವಾದಿ ಪಕ್ಷಕ್ಕೆ ಸೇರಿದ ಅಖಿಲೇಶ್ ಸಿಂಗ್ ಯಾದವ್. ಕರ್ನಾಟಕದಲ್ಲಿರುವುದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆದರೆ ಮಾಧ್ಯಮಗಳು ಈ ವಿದ್ಯಮಾನಗಳ ಸಂಬಂಧವಾಗಿ ಅಖಿಲೇಶ್ ಸಿಂಗ್ ಯಾದವ್ ಅಥವಾ ಸಿದ್ಧರಾಮಯ್ಯ ಅವರ ಬಳಿ ಸ್ಪಷ್ಟೀಕರಣ ಕೇಳಲೇ ಇಲ್ಲ. ಈ ಘಟನೆಗಳಿಗೆ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲೇ ಇಲ್ಲ. ದಾದ್ರಿಯಲ್ಲಿ ನಡೆದ ಅಖ್ಲಾಕ್ ಎಂಬ ಮುಸ್ಲಿಮನ ಹತ್ಯೆಗೆ ಉ.ಪ್ರ. ಸರ್ಕಾರ ಜವಾಬ್ದಾರಿ ಹೊರಬೇಕಿತ್ತು. ಅದೇ ರೀತಿ ಸಾಹಿತಿ ಕಲಬುರ್ಗಿ ಹತ್ಯೆಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಿತ್ತು. ಆದರೆ ಮಾಧ್ಯಮಗಳ ದೃಷ್ಟಿಯಲ್ಲಿ ಉ.ಪ್ರ.ದಲ್ಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷದ ಸರ್ಕಾರ ಹಾಗೂ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಪಾತ್ರವೇನೂ ಇಲ್ಲ ಎಂಬಂತಿದೆ. ಅದೇನಿದ್ದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರದ್ದೇ ಹೊಣೆಗಾರಿಕೆ ಎಂಬುದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ, ವಿಶ್ಲೇಷಣೆಗಳನ್ನು ಓದಿದಾಗ ಉಂಟಾಗುವ ಭಾವನೆ.
ಅಖಿಲೇಶ್ ಸಿಂಗ್ ಯಾದವ್ ಹಾಗೂ ಸಿದ್ಧರಾಮಯ್ಯ ಇಬ್ಬರೂ ಹಿಂದುಳಿದ ವರ್ಗಕ್ಕೆ ಸೇರಿದವರು. ಹಾಗಾಗಿ ಅವರನ್ನು ಯಾವುದೇ ಪ್ರಕರಣಕ್ಕೆ ಗುರಿಪಡಿಸುವುದು ಸರಿಯಲ್ಲ ಎಂಬ ಭಾವನೆ ಮಾಧ್ಯಮಗಳದ್ದಿರಬಹುದು. ಅವರೇನಾದರೂ ಬಿಜೆಪಿ ಪಕ್ಷದಲ್ಲಿದ್ದಿದ್ದರೆ ಆಗ ಇದೇ ಮಾಧ್ಯಮಗಳು ಈ ರೀತಿ ಪರಿಭಾವಿಸುತ್ತಿರಲಿಲ್ಲ. ತಕ್ಷಣ ಆ ಇಬ್ಬರು ಮುಖ್ಯಮಂತ್ರಿಗಳು ಘಟನೆಯ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಬೊಬ್ಬೆ ಹೊಡೆಯುತ್ತಿದ್ದವು. ಹಿಂದುಳಿದ ಮುಖಂಡರು ಬಿಜೆಪಿಯಲ್ಲಿದ್ದರೆ ಅವರು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅದೇ ಅವರು ಬಿಜೆಪಿಯೇತರ ಪಕ್ಷದಲ್ಲಿದ್ದರೆ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾದ ಅಗತ್ಯವಿರುವುದಿಲ್ಲ. ಇದೇಕೆ ಹೀಗೆ? ಬಿಜೆಪಿಯಲ್ಲಿ ಯಾರೇ ಇದ್ದರೂ ಅವರೆಲ್ಲ ಕೋಮುವಾದಿಗಳೆಂಬ ಕಳಂಕದ ಹಣೆಪಟ್ಟಿ. ಬಿಜೆಪಿಯೇತರ ಪಕ್ಷಗಳಲ್ಲಿದ್ದರೆ ಕೋಮುವಾದಿಗಳಲ್ಲ, ಜಾತ್ಯತೀತರು ಎಂಬ ಹೊಗಳಿಕೆಯ ಬಿರುದು!
ಈ ಹಿಂದೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಪಕ್ಷಕ್ಕೆ ಯಾರೋ ಒಬ್ಬರು ಹಿತೈಷಿಗಳು ದೇಣಿಗೆಯಾಗಿ ನೀಡಿದ ಹಣ ಸ್ವೀಕರಿಸಿದ್ದನ್ನು ವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿ, ಲಕ್ಷ್ಮಣ್ ಲಂಚ ಪಡೆಯುತ್ತಿದ್ದರೆಂದು ಆರೋಪಿಸಿತು. ಆಗ ಇಡೀ ಮಾಧ್ಯಮ ಸಮೂಹ ಬಂಗಾರು ಲಕ್ಷ್ಮಣ್ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿತು. ಅವರ ಬಂಧನವೂ ಆಯಿತು. ಅಧ್ಯಕ್ಷ ಸ್ಥಾನವನ್ನೂ ಕಳೆದುಕೊಂಡರು. ಅನಂತರ ರಾಜಕೀಯರಂಗದಿಂದಲೇ ಅವರು ಮೂಲೆಪಾಲಾಗಿ, ಇದೇ ಕೊರಗಿನಲ್ಲಿ ಅವರು ಕೊನೆಯುಸಿರೆಳೆದರು. ಬಂಗಾರು ಲಕ್ಷ್ಮಣ್ ಹಾಗೆ ನೋಡಿದರೆ ದಲಿತ ವರ್ಗದ ಮುಖಂಡರು. ಆದರೆ ಅವರು ಬಿಜೆಪಿಯಲ್ಲಿದ್ದುದೇ ಅವರ ಮೇಲಿನ ಆರೋಪ ಗುರುತರವಾಗುವುದಕ್ಕೆ ಕಾರಣ! ಬಂಗಾರು ಲಕ್ಷ್ಮಣ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಪಾರ್ಟಿ ಫಂಡಿಗೆ ಹಣ ಸ್ವೀಕರಿಸಿದ್ದರೆ ಮಾಧ್ಯಮಗಳ ದೃಷ್ಟಿಯಲ್ಲಿ ಅದೊಂದು ಗಂಭೀರ ಅಪರಾಧ ಆಗುತ್ತಲೇ ಇರಲಿಲ್ಲ.
ಪ್ರಧಾನಿ ಮೋದಿ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರು. ಆದರೆ ಅವರು ಬಿಜೆಪಿಯಲ್ಲಿರುವುದರಿಂದ ಕೋಮುವಾದಿ! ಇದು ಮಾಧ್ಯಮಗಳು ಬರೆದ ಷರಾ. ಮೋದಿ ಏನಾದರೂ ಕಾಂಗ್ರೆಸ್ನಲ್ಲಿದ್ದಿದ್ದರೆ ಅವರೊಬ್ಬ ಜಾತ್ಯತೀತ ನಾಯಕನೆಂದು ಇದೇ ಮಾಧ್ಯಮಗಳು ಹಾಡಿ ಹೊಗಳುತ್ತಿದ್ದವು. ಆದರೆ ಅವರು ಬಿಜೆಪಿಯಲ್ಲಿರುವುದರಿಂದಲೇ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲು ಮಾಧ್ಯಮಗಳು ಹೊಂಚು ಹಾಕುತ್ತಲೇ ಇವೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರನ್ನು ಹೇಗಾದರೂ ಮಾಡಿ ಕಟಕಟೆಯಲ್ಲಿ ನಿಲ್ಲಿಸಬೇಕೆಂಬ ಮಾಧ್ಯಮಗಳ ಪ್ರಯತ್ನ ಕೊನೆಗೂ ಈಡೇರಲೇ ಇಲ್ಲ. ತೀಸ್ತಾ ಸೆಟಲ್ವಾಡ್ ಪ್ರಯತ್ನವೂ ಕೈಗೂಡಲಿಲ್ಲ. ಈಗ ಪ್ರಧಾನಿ ಹುದ್ದೆಯಲ್ಲಿರುವಾಗಲಾದರೂ ಅವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂಬುದು ಮಾಧ್ಯಮಗಳ ಹುನ್ನಾರ. ಅವರಿಗೆ ಎಚ್ಚರಿಕೆ ನೀಡುವ, ಅವರನ್ನು ನಾನಾ ಕಾರಣಗಳಿಗಾಗಿ ಹಿಗ್ಗಾಮುಗ್ಗಾ ಟೀಕಿಸುವ ಪ್ರಸಂಗಗಳು ನಡೆಯುತ್ತಲೇ ಇವೆ. ಬಹುಶಃ ಈ ಹಿಂದೆ ಯಾವ ಪ್ರಧಾನಿಗಳೂ ಇಷ್ಟೊಂದು ಟೀಕೆಗಳಿಗೆ ಗುರಿಯಾಗಿರಲಿಲ್ಲ. ದೇವೇಗೌಡರಂತಹ ದುರ್ಬಲ ಪ್ರಧಾನಿ ಕೂಡ ಈ ಪರಿಯ ಟೀಕೆಗಳನ್ನು ಕೇಳಬೇಕಾಗಿ ಬಂದಿರಲಿಲ್ಲ.
ಪ್ರಧಾನಿ ಮೋದಿಯ ಮೇಲೆ ಜಾಗತಿಕ ಆರ್ಥಿಕ ಸಂಶೋಧನೆ ಮತ್ತು ವಿಶ್ಲೇಷಣೆಯ ಮಾನದಂಡವೆನಿಸಿಕೊಂಡಿರುವ ಮೂಡೀಸ್ ಸಂಸ್ಥೆ ಅಸಮಾಧಾನಗೊಂಡಿದೆ ಎಂಬ ವರದಿ ಈಚೆಗೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆಯಿತು. ‘ದೇಶದಲ್ಲಿ ಹೆಚ್ಚುತ್ತಿರುವ ಅಹಿಸಷ್ಣುತೆ ಮತ್ತು ಗೋಮಾಂಸ ವಿವಾದ ಕುರಿತು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಮೂಗುದಾರ ತೊಡಿಸದಿದ್ದರೆ ಜಾಗತಿಕ ಮಟ್ಟದಲ್ಲಿ ಎನ್ಡಿಎ ಸರ್ಕಾರ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳಬೇಕಾಗುತ್ತದೆ’ – ಇದು ಮೂಡೀಸ್ನ ಎಚ್ಚರಿಕೆ ಎಂದು ಮಾಧ್ಯಮಗಳು ಪ್ರಕಟಿಸಿದವು. ಜಾಗತಿಕ ಮಟ್ಟದಲ್ಲಿ ಪ್ರಸಕ್ತ ವಿದ್ಯಮಾನಗಳು ಭಾರತದ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂದು ಮೂಡೀಸ್ ಆತಂಕ ವ್ಯಕ್ತಪಡಿಸಿತ್ತೆಂದು ಮಾಧ್ಯಮಗಳ ವರದಿ.
ಆದರೆ ವಾಸ್ತವವೇ ಬೇರೆ. ಭಾರತ ಸರ್ಕಾರದ ಬಗ್ಗೆ ಮೂಡೀಸ್ ಪ್ರಕಟಿಸಿರುವ ವರದಿ ಅಧಿಕೃತವಾದದ್ದಲ್ಲ ಎಂಬುದು ಈಗ ಗೊತ್ತಾಗಿದೆ. ಮೂಡೀಸ್ ಸಂಸ್ಥೆಯ ಕಿರಿಯ ಅರ್ಥಶಾಸ್ತ್ರಜ್ಞರೊಬ್ಬರ ವೈಯಕ್ತಿಕ ಅಭಿಪ್ರಾಯ ಅದೆಂದು ಮನವರಿಕೆಯಾಗಿದೆ. ಇಂತಹ ಒಂದು ತಪ್ಪು ಸಂದೇಶದ ವರದಿಗೆ ಕೆಲವು ಮಾಧ್ಯಮಗಳ ಬಣ್ಣ ಹಚ್ಚಿ, ಮಸಾಲೆ ಬೆರೆಸಿ ಸುದ್ದಿಯನ್ನು ತಿರುಚಿ ಪ್ರಕಟಿಸಿದ್ದವು. ಆದರೆ ಇದೊಂದು ತಿರುಚಿದ ಸುದ್ದಿಯೆಂಬ ವರದಿ ಪ್ರಕಟವಾಗಿದ್ದು ಮಾತ್ರ ಪತ್ರಿಕೆಗಳ ಒಳಪುಟದ ಯಾವುದೋ ಮೂಲೆಯಲ್ಲಿ! ಅದನ್ನು ಎಷ್ಟು ಮಂದಿ ಓದುಗರು ಗಮನಿಸಿದ್ದಾರೋ ಗೊತ್ತಿಲ್ಲ.
ಭಾರತಕ್ಕೆ ಮನ್ನಣೆ ದೊರಕಿದ ಇನ್ನೊಂದು ಜಾಗತಿಕ ಮಟ್ಟದ ಸುದ್ದಿಯೂ ಪತ್ರಿಕೆಗಳ ಒಳಪುಟದಲ್ಲಿ ಪ್ರಕಟವಾಯಿತು! ಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ 2015 ನೇ ಸಾಲಿನ ವಿಶ್ವದ ಅತ್ಯಂತ ಪ್ರಬಲ ನಾಯಕರ ಪಟ್ಟಿಯಲ್ಲಿ ಪ್ರಧಾನ ನರೇಂದ್ರ ಮೋದಿ ಅವರಿಗೆ 9ನೇ ಸ್ಥಾನ ಲಭಿಸಿದೆ ಎಂಬುದೇ ಆ ಮಹತ್ವದ ಸುದ್ದಿ. ಕಳೆದ ವರ್ಷ ವಿಶ್ವದ ಪ್ರಬಲ ನಾಯಕರ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದ ನರೇಂದ್ರ ಮೋದಿ ಈ ವರ್ಷ 9ನೇ ಸ್ಥಾನಕ್ಕೆ ಜಿಗಿದಿರುವುದು ಮಾಧ್ಯಮಗಳಿಗೆ ಒಂದು ಮಹತ್ವದ ಸುದ್ದಿಯಾಗಬೇಕಿತ್ತು. ಕಳೆದ ವರ್ಷ ೨ನೇ ಸ್ಥಾನದಲ್ಲಿದ್ದ ಅಮೆರಿಕ ಅಧ್ಯಕ್ಷ ಒಬಾಮಾ ಪ್ರಭಾವ ಕಳೆದುಕೊಂಡಿದ್ದು ಈ ವರ್ಷ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಗಿರುವಾಗ 14ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಜಾಗತಿಕ ಮಟ್ಟದಲ್ಲಿ ಸ್ಥಾನ ಏರಿಕೆ ಮಾಡಿಕೊಂಡಿರುವ ಮೋದಿ ಜಾಗತಿಕ ಮಟ್ಟದ ಮನ್ನಣೆಗೆ ಇನ್ನಷ್ಟು ಹೆಚ್ಚು ಪಾತ್ರರಾಗಿದ್ದಾರೆ ಎಂದರ್ಥವಲ್ಲವೆ? ಹಾಗಿದ್ದ ಮೇಲೆ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಮೋದಿ ಮನ್ನಣೆಯ ಸುದ್ದಿಯನ್ನು ಮೊದಲ ಪುಟದಲ್ಲಿ ಪ್ರಕಟಿಸುವ ಸೌಜನ್ಯವನ್ನು ಮಾಧ್ಯಮಗಳೇಕೆ ತೋರಲಿಲ್ಲ? ಮೋದಿ ಕುರಿತ ಅಸಮಾಧಾನದ ಮೂಡೀಸ್ ವರದಿಯನ್ನು ಮೊದಲ ಪುಟದಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟಿಸುವ ಮಾಧ್ಯಮಗಳಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಇನ್ನಷ್ಟು ಹೆಚ್ಚು ಮನ್ನಣೆ ಗಳಿಸಿದ ಮೋದಿ ಸುದ್ದಿ ಮಹತ್ತ್ವದ್ದೆಂದು ಏಕೆ ಅನಿಸಲಿಲ್ಲ? ಮೋದಿ ಬಗ್ಗೆ ಮಾಧ್ಯಮಗಳಿಗೆ ಇಂತಹ ಅಸಹನೆ, ದ್ವೇಷ ಏಕೆ? ಮೋದಿ ಎಷ್ಟಾದರೂ ಈ ದೇಶದ ಪ್ರಧಾನಿಯೆಂಬುದನ್ನು ಮಾಧ್ಯಮಗಳು ಮರೆತೇಬಿಟ್ಟವೆ? ನಿಜವಾಗಿ ಅಸಹನೆ, ಅಸಹಿಷ್ಣುತೆ ಆರಂಭವಾಗಿರುವುದು ಎಡಪಂಥೀಯ ಮನೋಭಾವದ ಮಾಧ್ಯಮಗಳಿಂದಲೇ ಎಂದು ಏಕೆ ವ್ಯಾಖ್ಯಾನಿಸಬಾರದು?
ಕ್ರಿಕೆಟ್ನ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಪಡೆದುಕೊಂಡ ಭಾರತೀಯ ಕ್ರಿಕೆಟಿಗರಿಗೆ ಮಾಧ್ಯಮಗಳು ಕೊಡುವಷ್ಟು ಪ್ರಚಾರವನ್ನು ಪ್ರಧಾನಿ ಮೋದಿಗೇಕೆ ಕೊಡುತ್ತಿಲ್ಲ? ವಿರಾಟ್ ಕೊಯ್ಲಿ ರ್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದರೂ ಮಾಧ್ಯಮಗಳ ಪಾಲಿಗೆ ಅದೊಂದು ಭಾರೀ ಸುದ್ದಿ. ಆದರೆ ಮೋದಿ 14 ರಿಂದ 9 ನೇ ಸ್ಥಾನಕ್ಕೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರೂ ಅದೊಂದು ಸಾಮಾನ್ಯ ಸುದ್ದಿ! ಹೇಗಿದೆ ಮಾಧ್ಯಮಗಳ ತಾರತಮ್ಯ ಧೋರಣೆ!
ಪ್ರಜಾತಂತ್ರ ವ್ಯವಸ್ಥೆಯಲ್ಲಿ 4ನೇ ಆಧಾರಸ್ತಂಭವೆಂದು ಬಿಂಬಿಸಲಾಗಿರುವ ಪತ್ರಿಕಾರಂಗ ಅಥವಾ ಮಾಧ್ಯಮರಂಗವು ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳಿಗಿಂತಲೂ ಹೆಚ್ಚು ಗುರುತರ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂಬುದು ನಿರೀಕ್ಷೆ. ಆದರೆ ಈಗ ಆಗುತ್ತಿರುವುದೇನು? ಮಾಧ್ಯಮಗಳಿಗೂ ವೃತ್ತಿಪರತೆ, ಆತ್ಮಸಾಕ್ಷಿ ಇರಬೇಕಾದ ಅಗತ್ಯ ಇದೆ ಎಂದು ಅನಿಸುವುದಿಲ್ಲವೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.