ಪುತ್ತೂರು: ಕೃಷಿಗೆ ಇಂದು ಯಂತ್ರಗಳ ಬಳಕೆ ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿ ಯಂತ್ರಗಳ ಸಂಶೋಧಿಸುವವರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ದೂರದಲ್ಲೇ ನಿಂತು ತೀರ್ಮಾನ ಮಾಡುವ ಬದಲು ಯಂತ್ರವನ್ನು ವೀಕ್ಷಿಸಿ ಸಾಧಕ ಬಾಧಕಗಳ ಬಗ್ಗೆ ರಚನಾತ್ಮಕವಾಗಿ ಚರ್ಚೆ ಮಾಡಬೇಕಾಗಿದೆ ಎಂದು ಕೃಷಿಕ ಎ.ಪಿ.ಸದಾಶಿವ ಹೇಳಿದರು.
ಅವರು ಬುಧವಾರ ಸವಣೂರಿನ ಗೋಕುಲಂ ಫಾರ್ಮ್ಸ್ನ ಎ.ಆರ್.ಚಂದ್ರ ಅವರ ತೋಟದಲ್ಲಿ ನಡೆದ ಟ್ರಾಕ್ಟರ್ ಬಳಸಿ ಹೈಡ್ರಾಲಿಕ್ ಲಿಫ್ಟ್ನ ಬಳಕೆ ಮತ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿಕರಿಗೆ ಪ್ರಯೋಜನವಾಗುವ ವಿವಿಧ ಆವಿಷ್ಕಾರಗಳು ಈಗಾಗಲೇ ನಡೆದಿದೆ. ಪ್ರತೀ ಆವಿಷ್ಕಾರದ ಹಿಂದೆ ಸತತ ಪ್ರಯತ್ನ ಇರುತ್ತದೆ. ಇದನ್ನು ಕೃಷಿಕರು ಸ್ಮರಿಸಿಕೊಳ್ಳಬೇಕು. ಈ ಹಿಂದೆಯೇ ಚಂದ್ರ ಅವರು ಗೋವು ಸಾಕಾಣಿಕೆ, ಸ್ಲರಿ ಬಳಕೆ, ವಿಶೇಷ ತೋಟದ ಬಗ್ಗೆ ಪ್ರಯತ್ನ ಮಾಡುತ್ತಲೇ ಬಂದಿದ್ದರು. ಇದೀಗ ಮತ್ತೊಂದು ಆವಿಷ್ಕಾರ ಮಾಡಿದ್ದಾರೆ, ಇದರ ಸಾಧಕ ಬಾಧಕಗಳು ಹಾಗೂ ಇನ್ನೂ ಕೃಷಿಕ ಸ್ನೇಹಿಯಾಗಿಸಲು ಪ್ರಯತ್ನ ನಡೆಯಲಿ ಎಂದರು.
ಅತಿಥಿಯಾಗಿದ್ದ ತಾಪಂ ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ, ಕೃಷಿಕರಿಗೆ ಇಂದು ಕಾರ್ಮಿಕರ ಕೊರತೆ ಹೆಚ್ಚಾಗಿ ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿಗೆ ಯಂತ್ರಗಳ ಬಳಕೆ ಅನಿವಾರ್ಯವಾಗಿದೆ. ಹೀಗಾಗಿ ಛಲ ಬಿಡದೆ ಇಂತಹ ಪ್ರಯತ್ನಗಳು ನಡೆದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಯಂತ್ರ ತಯಾರು ಮಾಡಿದ ಮಂಗಳೂರಿನ ದೇವರಾಜ್ ಮಾನಾಯಿ ಮಾತನಾಡಿ, ಇಲ್ಲಿ ನಾವು ಲಾಭನಷ್ಟದ ಬಗ್ಗೆ ಲೆಕ್ಕಾಚಾರ ಹಾಕಿಲ್ಲ, ಒಟ್ಟಾರೆ ನಮ್ಮ ಕೆಲಸ ಯಶಸ್ಸು ಕಾಣಬೇಕಿತ್ತು, ಈಗ ಅದರ ಫಲ ಸಿಕ್ಕಿದೆ. ಈ ಹಿಂದೆ ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅಡಿಕೆ ಹಾಗೂ ತೆಂಗಿನ ಮರ ಏರುವ ಪೆಟ್ರೋಲ್ ಆಧಾರಿತ ಯಂತ್ರವೊಂದನ್ನು ತಯಾರು ಮಾಡಿದ್ದೆ, ಅದು ಶೇ. 80 ರಷ್ಟು ಕೆಲಸ ಆಗಿತ್ತು , ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್ಗೆಂದು ತೆಗದುಕೊಂಡು ಹೋಗಿ ಬಳಿಕ ಸಿಗಲೇ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳೆ ಕಟಾವು ಯಂತ್ರ ಹಾಗೂ ವಿವಿಧ ಯಂತ್ರಗಳನ್ನು ಆವಿಷ್ಕಾರ ಮಾಡಿದ್ದ ಕೋಡಿಬೈಲು ಸತ್ಯನಾರಾಯಣ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಅಡಿಕೆ ಮರ ಏರುವ ಕಾರ್ಮಿಕರಾದ ಶೀನಪ್ಪ ನಾಯ್ಕ ಹಾಗೂ ಲಿಂಗಪ್ಪ ನಾಯ್ಕ ಅವರನ್ನು ಎ.ಆರ್.ಚಂದ್ರ ಗುರುತಿಸಿದರು. ಎ.ಆರ್.ಚಂದ್ರ ಸ್ವಾಗತಿಸಿ ಶಿಕ್ಷಕ ಗಣೇಶ್ ನಡುವಾಲು ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚಂದ್ರ ಅವರು ಆವಿಷ್ಕಾರ ಮಾಡಿದ ಟ್ರಾಕ್ಟರ್ ಬಳಸಿ ಹೈಡ್ರಾಲಿಕ್ ಲಿಪ್ಟ್ನ ಬಳಕೆ ಮತ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.ಸುಮಾರು 150 ಕೃಷಿಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.