‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬುದು ಕನ್ನಡದ ಒಂದು ಹಳೆಯ ಗಾದೆ. ತಥಾಕಥಿತ ಬುದ್ಧಿಜೀವಿಗಳು, ಪ್ರಗತಿಪರರು ದೇಶದಲ್ಲಿ ನಡೆಯುವ ಎಲ್ಲಾ ಕೆಟ್ಟ ವಿದ್ಯಮಾನಗಳಿಗೆ ಆರೆಸ್ಸೆಸ್ ಹಾಗೂ ಪ್ರಧಾನಿ ಮೋದಿ ಸರ್ಕಾರವೇ ಕಾರಣ ಎಂದು ಪ್ರತಿನಿತ್ಯ ಇದೀಗ ಬೊಬ್ಬೆ ಹೊಡೆಯುತ್ತಿರುವಾಗ ಈ ಹಳೆಯ ಗಾದೆ ನೆನಪಾಗದೇ ಇರದು. ಅದು ದಾದ್ರಿಯಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯೆಯೇ ಆಗಲಿ, ಹರಿಯಾಣದಲ್ಲಿ ದಲಿತರ ಸಜೀವ ದಹನದ ಘಟನೆಯೇ ಇರಲಿ, ಇನ್ನೆಲ್ಲೋ ಯಾವುದೋ ಕಾರಣಕ್ಕೆ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯವೇ ಇರಲಿ ಅಥವಾ ಕರ್ನಾಟಕದಲ್ಲಿ ಸಾಹಿತಿ ಕಲ್ಬುರ್ಗಿ ಹತ್ಯೆಯ ಘಟನೆಯೇ ಇರಲಿ… ಇವೆಲ್ಲದರ ಹಿಂದೆ ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯವರ ಕುಮ್ಮಕ್ಕಿದೆ ಎಂಬುದು ಎಡಪಂಥೀಯ ಮಾಧ್ಯಮಗಳ, ಡೋಂಗಿ ವಿಚಾರವಾದಿಗಳ, ಬುದ್ಧಿಜೀವಿಗಳ ಕುತರ್ಕ. ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ಹಾಗೂ ಹಿಂಸೆಗೆ ಆರೆಸ್ಸೆಸ್ಸೇ ಕಾರಣ ಎಂದು ಈ ಮಂದಿ ಬೊಬ್ಬೆ ಹೊಡೆಯುತ್ತಲೇ ಇದ್ದಾರೆ. ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೆಮ್ಮೆಯಿಂದ ಎದೆತಟ್ಟಿ ಹೇಳುತ್ತಿರುವ ಭಾರತದಲ್ಲಿ ಅಸಹಿಷ್ಣುತೆ ಮೆರೆದಾಡುತ್ತಿದೆ. ಜಾತಿ-ಜಾತಿಗಳ ನಡುವೆ ಎತ್ತಿಕಟ್ಟಿ ಹೊಡೆದಾಡಿಸುವ ಪ್ರಕ್ರಿಯೆ ಮುಂದುವರೆಯುತ್ತಿದೆ. ಏನಾಗಿದೆ ಈ ದೇಶಕ್ಕೆ…’ ಎಂದೆಲ್ಲ ಮಾಧ್ಯಮಗಳಲ್ಲಿ ದೊಡ್ಡದೊಡ್ಡ ಘನ ಗಂಭೀರ ಲೇಖನಗಳು ಪ್ರಕಟವಾಗುತ್ತಿವೆ. ದೇಶದಾದ್ಯಂತ ಇದೀಗ ಅಸಹನೆ, ಆತಂಕ, ಅನುಮಾನಗಳ ಹುತ್ತವೇ ತುಂಬಿಕೊಂಡಿದೆ ಎಂಬುದು ಈ ಮಂದಿಯ ವಿತಂಡವಾದ. ಕೆಲವು ಪತ್ರಿಕೆಗಳಂತೂ ಸಾಹಿತ್ಯ ವಲಯದ ಕೆಲವು ಮಂದಿ ತಮಗೆ ದೊರೆತ ಪ್ರಶಸ್ತಿ ವಾಪಸ್ ಕೊಟ್ಟಿರುವುದನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಸಂಪಾದಕೀಯದ ಮೂಲಕ ಷರಾ ಬರೆದುಬಿಟ್ಟಿವೆ.
ಆದರೆ ಒಂದು ಆಶ್ಚರ್ಯದ ಸಂಗತಿಯನ್ನು ಈ ಸಂದರ್ಭದಲ್ಲಿ ನಾವು ಮರೆಯ ಬಾರದು. ದಾದ್ರಿ ಘಟನೆ, ಅಲ್ಲಲ್ಲಿ ಗೋಮಾಂಸ ಭಕ್ಷಣೆಗೆ ಸಿಡಿದ ಪ್ರತಿಭಟನೆಗಳು… ಇವೆಲ್ಲ ಮಾಧ್ಯಮಗಳು ಹಾಗೂ ಕೆಲವು ಬುದ್ಧಿಜೀವಿಗಳಲ್ಲಿ ತಂದಷ್ಟು ಆತಂಕ, ಭೀತಿ ಸಮಾಜದ ಉಳಿದ ಭಾಗದಲ್ಲಿ ಎಲ್ಲೂ ಕಂಡುಬರುತ್ತಿಲ್ಲ. ಒಂದಿಷ್ಟು ಮಾಧ್ಯಮಗಳು ಹಾಗೂ ಹಿಡಿಯಷ್ಟು ಎಡಪಂಥೀಯ ಬುದ್ಧಿಜೀವಿಗಳ ಪ್ರತಿಭಟನೆ ಹೊರತುಪಡಿಸಿದರೆ ಉಳಿದ ಇಡೀ ಸಮಾಜ ಇವರ ‘ತಮಾಷೆ’ಯನ್ನು ತಣ್ಣಗೆ, ಕುತೂಹಲದಿಂದ ನೋಡುತ್ತಿದೆ ಅಷ್ಟೆ. ಸಮಾಜವೇನೂ ಈ ಮಂದಿಯಂತೆ ಕಂಗಾಲಾಗಿಲ್ಲ. ಏಕೆಂದರೆ ಭಾರತದಂತಹ ಅತಿದೊಡ್ಡ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಮಾತ್ರ ಇಂಥವೆಲ್ಲ ನಡೆದದ್ದಲ್ಲ. ಇಂದಿರಾಗಾಂಧಿ ಅಧಿಕಾರದಲ್ಲಿದ್ದಾಗಲೂ ಇಂತಹ ಅದೆಷ್ಟೋ, ಇದಕ್ಕಿಂತಲೂ ಭಯಾನಕವಾದ ಘಟನೆಗಳು ನಡೆದಿದ್ದವು ಎಂದು ಜನತೆಗೆ ಗೊತ್ತು.
1984 ರ ಘಟನೆಯನ್ನೇ ನೆನಪಿಸಿಕೊಳ್ಳೋಣ. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹತ್ಯೆಯಾದ ಬಳಿಕ ಹಲವು ದಿನಗಳ ಕಾಲ ಭುಗಿಲೆದ್ದ ಗಲಭೆಗಳ ಸಂದರ್ಭದಲ್ಲಿ ದೆಹಲಿಯಲ್ಲಿ ೨೦೦೦ಕ್ಕೂ ಅಧಿಕ ಸಿಖ್ಖರನ್ನು ಬರ್ಬರವಾಗಿ ಕೊಲ್ಲಲಾಯಿತು. ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದಕ್ಕೆ ಇದ್ದಿದ್ದು ರಹಸ್ಯವಾಗಿರಲಿಲ್ಲ. ಆಗಿನ ಪ್ರಧಾನಿ ರಾಜೀವ್ಗಾಂಧಿ ಈ ಘಟನೆಯನ್ನು ಸಮರ್ಥಿಸಿಕೊಳ್ಳಲು – ‘ಆಲದ ಮರವೊಂದು ಬಿದ್ದಾಗ ಸುತ್ತಲಿನ ಭೂಮಿ ಕಂಪಿಸುವುದು ಸಹಜ’ – ಎಂದು ತೇಪೆ ಹಚ್ಚಿದ್ದರು. ಅಂದರೆ ಇಂದಿರಾಗಾಂಧಿ ಎಂಬ ಆಲದ ಮರ ಉರುಳಿದಾಗ 2000 ಮಂದಿ ಸಿಖ್ಖರು ದಾರುಣವಾಗಿ ಕೊಲೆಗೀಡಾದದ್ದು ಅಸಹಜವೇನಲ್ಲ ಎಂಬುದು ಅವರ ಮಾತಿನ ಅರ್ಥವಾಗಿತ್ತು. ತಮಾಷೆಯೆಂದರೆ ಇಂತಹ ಭಯಾನಕ ನರಮೇಧ ನಡೆದಾಗಲೂ ಯಾವುದೇ ಜಾತ್ಯತೀತ ನಾಯಕರಾಗಲಿ, ಬುದ್ಧಿಜೀವಿಗಳಾಗಲಿ, ಪ್ರಗತಿಪರರಾಗಲಿ ಈ ಘಟನೆಯನ್ನು ಖಂಡಿಸಲಿಲ್ಲ. ರಾಜೀವ್ಗಾಂಧಿಯವರ ಇಂತಹ ಅಸಂಬದ್ಧ, ಇಡೀ ದೇಶಕ್ಕೆ ತಪ್ಪು ಸಂದೇಶ ನೀಡಿದ ಹೇಳಿಕೆಯನ್ನೂ ಖಂಡಿಸಲಿಲ್ಲ. ನ್ಯಾಯಾಲಯ ಕೂಡ ಏಕೆ ಎಂದು ಕೇಳಲಿಲ್ಲ. ದಾದ್ರಿಯಲ್ಲಿ ಅಖ್ಲಾಕ್ ಎಂಬ ಮುಸ್ಲಿಮನ ಹತ್ಯೆ ಪ್ರತಿಭಟಿಸಿ ಈಗ ಕೆಲವು ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸಿದ್ದಾರಲ್ಲ, ಆಗ 2000 ಮಂದಿ ಸಿಖ್ಖರ ಮಾರಣಹೋಮ ಖಂಡಿಸಿ ಒಬ್ಬೇಒಬ್ಬ ಸಾಹಿತಿ ಕೂಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮರಳಿಸಲಿಲ್ಲ. ಅಷ್ಟೇ ಅಲ್ಲ ಆಗಿನ ವಿದ್ಯಮಾನದ ಕುರಿತು ತನಿಖೆಗೆ ಯಾವುದೇ ನ್ಯಾಯಾಲಯ ಅಥವಾ ವಿಶೇಷ ತನಿಖಾ ದಳ ನೇಮಕಗೊಳ್ಳಲಿಲ್ಲ.
೧೯೭೫ರ ತುರ್ತುಪರಿಸ್ಥಿತಿ ದಿನಗಳ ಫ್ಲಾಶ್ಬ್ಯಾಕ್ಗೆ ಹೋಗೋಣ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ… ಹೀಗೆ ಎಲ್ಲ ಬಗೆಯ ಮೂಲಭೂತ ಸ್ವಾತಂತ್ರ್ಯಗಳು ಹರಣವಾಗಿದ್ದಾಗ, ದೇಶದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದ್ದಾಗ ಬುದ್ಧಿಜೀವಿಗಳು, ಪ್ರಗತಿಪರರು ಆಗ ಏಕೆ ಪ್ರತಿಭಟಿಸಲಿಲ್ಲ? ತಮಗೆ ದೊರಕಿದ ಪ್ರಶಸ್ತಿಗಳನ್ನು ಆಗ ಏಕೆ ಹಿಂದಿರುಗಿಸಲಿಲ್ಲ? ಪ್ರಜಾತಂತ್ರದ ಬುಡಕ್ಕೇ ಕೊಡಲಿ ಏಟು ಬಿದ್ದಿರುವ ಸಂಗತಿ ಈ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಗೋಚರಿಸಲಿಲ್ಲವೇ? ನನಗೆ ತಿಳಿದಂತೆ ಡಾ. ಶಿವರಾಮ ಕಾರಂತ ಹಾಗೂ ಒಂದಿಬ್ಬರು ಹಿರಿಯ ಸಾಹಿತಿಗಳನ್ನು ಹೊರತುಪಡಿಸಿದರೆ ಇಡೀ ದೇಶದಲ್ಲಿ ಬೇರೆ ಯಾವ ಸಾಹಿತಿಗಳೂ ತುರ್ತುಪರಿಸ್ಥಿತಿ ಪ್ರತಿಭಟಿಸಿ ಪ್ರಶಸ್ತಿ ಹಿಂದಿರುಗಿಸಲಿಲ್ಲ. ಆಗ ಈ ಎಡಪಂಥೀಯ ಬುದ್ಧಿಜೀವಿಗಳು, ಸಾಹಿತಿಗಳು ಎಲ್ಲಿ ಹೋಗಿದ್ದರು? ಹೆದರಿ ಹೇಡಿಗಳಾಗಿದ್ದರೇ? ಅಥವಾ ಪ್ರಜಾತಂತ್ರಕ್ಕೆ ಒದಗಿದ ಗಂಡಾಂತರದ ಅರಿವೇ ಅವರಿಗೆ ಆಗಲಿಲ್ಲವೇ? ಆಗ ಬಹುತೇಕ ಸೆಕ್ಯುಲರ್ ಮುಖಂಡರು, ಮಾಧ್ಯಮಗಳು ಹಾಗೂ ಬುದ್ಧಿಜೀವಿಗಳು ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದವರೇ ಆಗಿದ್ದರು. ತುರ್ತುಪರಿಸ್ಥಿತಿ ಪ್ರತಿಭಟಿಸಿ ಜೈಲಿಗೆ ಹೋದವರಲ್ಲಿ ಅತಿಹೆಚ್ಚು ಸಂಖ್ಯೆ ಆರೆಸ್ಸೆಸ್ ಗುಂಪಿನದ್ದಾಗಿತ್ತು. ಅದೇ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ೩೪ ಸಾಹಿತಿಗಳು ಅಕಾಡೆಮಿ ಪುರಸ್ಕಾರಗಳನ್ನು ಸ್ವೀಕರಿಸಿದ್ದರು. ಅವರ ಪೈಕಿ ಇಬ್ಬರು – ಸರ್ವಪಲ್ಲಿ ಗೋಪಾಲ್ ಹಾಗೂ ಭೀಷ್ಮಸಹಾನಿ – ಸೆಕ್ಯುಲರ್ಗಳಿಗೆ ಆರಾಧ್ಯ ದೈವಗಳು. ಆಗ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಗುಲಾಮ್ ನಬಿ ಖಯಾಲ್ ಈಗ ದೇಶದಲ್ಲಿ ಫ್ಯಾಸಿಸಂ ವಿಜೃಭಿಸುತ್ತಿದೆ ಎಂಬ ಕಾರಣ ಮುಂದೊಡ್ಡಿ ಪ್ರಶಸ್ತಿ ವಾಪಸ್ ಮಾಡಿದ್ದಾರೆ. ಆಗ ಇವರಿಗೆ ಪ್ರಜಾತಂತ್ರಕ್ಕೆ ಗಂಡಾಂತರ ಬಂದಿದ್ದು ಗೊತ್ತಿರಲಿಲ್ಲವೇ? ಪ್ರಜಾತಂತ್ರದ ಉಳಿವಿಗಾಗಿ ತಾನು ಅಕಾಡೆಮಿ ಪ್ರಶಸ್ತಿ ಪಡೆಯಕೂಡದು ಎಂದೇಕೆ ಖಯಾಲ್ಗೆ ಆಗ ಅನಿಸಲಿಲ್ಲ?
ತಮಾಷೆಯೆಂದರೆ ಎಡಪಂಥೀಯ ಬುದ್ಧಿಜೀವಿಗಳು ಹಾಗೂ ಕೆಲವು ಮಾಧ್ಯಮಗಳು ಈಗ ಯಾರನ್ನು ಫ್ಯಾಸಿಸ್ಟರು ಎಂದು ಜರಿಯುತ್ತಿರುವರೋ ಅದೇ ಆರೆಸ್ಸೆಸ್ನವರೇ ತುರ್ತು ಪರಿಸ್ಥಿತಿ ವಿರುದ್ಧ ದೇಶದಾದ್ಯಂತ ಹೋರಾಟ ನಡೆಸಿ, ಅದರಲ್ಲಿ ಯಶಸ್ವಿಯಾಗಿದ್ದರು. ಯೋಜನಾಬದ್ಧವಾಗಿ ಅಹಿಂಸಾತ್ಮಕ ಹೋರಾಟ ಸಂಘಟಿಸಿದ್ದು ಅದೇ ಆರೆಸ್ಸೆಸ್. ಒಂದು ಕಡೆ ಶಾಂತಿಯುತ ಚಳುವಳಿ ಮೂಲಕ ಇಂದಿರಾಗಾಂಧಿಯವರ ಹಾದಿ ತಪ್ಪಿಸುತ್ತಾ, ಮತ್ತೊಂದು ಕಡೆ ಭೂಗತ ಚಟುವಟಿಕೆ ಮೂಲಕ ಸರ್ವಾಧಿಕಾರವನ್ನು ತೊಲಗಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿದ್ದು ಅದೇ ಆರೆಸ್ಸೆಸ್. ಅದೇ ಕಾರಣಕ್ಕಾಗಿ ಆಗ ಜಯಪ್ರಕಾಶ್ ನಾರಾಯಣ್ ‘ಆರೆಸ್ಸೆಸ್ ಫ್ಯಾಸಿಸ್ಟ್ ಆಗಿದ್ದರೆ ನಾನು ಕೂಡ ಫ್ಯಾಸಿಸ್ಟ್’ ಎಂದಿದ್ದರು.
ಹರಿಯಾಣದಲ್ಲಿ ಈಚೆಗೆ ನಡೆದ ದಲಿತರ ಸಜೀವ ದಹನ ಪ್ರಕರಣ ಅತ್ಯಂತ ಖಂಡನೀಯ. ಅದು ನಡೆಯಬಾರದಿತ್ತು. ಆದರೆ ಹಿಂದೆಂದೂ ಅಂತಹ ಘಟನೆ ನಡೆದೇ ಇರಲಿಲ್ಲ ಎಂಬಂತೆ ಮಾಧ್ಯಮಗಳು ಬಿಂಬಿಸುತ್ತಿರುವುದೇಕೆ? ಕರ್ನಾಟಕದ ಕಂಬಾಲಪಲ್ಲಿ ಹಾಗೂ ಬದನವಾಳದಲ್ಲಿ ನಡೆದ ದಲಿತರ ಸಾಮೂಹಿಕ ಹತ್ಯೆ ಪ್ರಕರಣಗಳು ಇದಕ್ಕಿಂತ ಭೀಕರವಾಗಿರಲಿಲ್ಲವೇ? ಆಗ ಅದನ್ನು ಏಕೆ ಇದೇ ಮಾಧ್ಯಮಗಳು ಹಾಗೂ ಬುದ್ಧಿಜೀವಿಗಳು ಖಂಡಿಸಲಿಲ್ಲ? ಕಂಬಾಲಪಲ್ಲಿ ಹಾಗೂ ಬದನವಾಳದಲ್ಲಾದ ದಲಿತರ ಹತ್ಯೆ ಪ್ರತಿಭಟಿಸಿ ಏಕೆ ಒಬ್ಬನಾದರೂ ಸಾಹಿತಿ ಪ್ರಶಸ್ತಿ ಹಿಂದಿರುಗಿಸಲಿಲ್ಲ? ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಅಂಬೇಡ್ಕರ್ ಪ್ರತಿಮೆಗೆ ಮಸಿ ಬಳಿದು ಅವಮಾನಿಸಿದ ಘಟನೆ ನಡೆದಿತ್ತು. ಅದೊಂದು ಪ್ರತಿಭಟನೆಗೆ ಅತ್ಯಂತ ಯೋಗ್ಯವಾದ ಘಟನೆಯೇ ಆಗಿತ್ತು. ಆದರೆ ಬುದ್ಧಿಜೀವಿಗಳು ಈ ಘಟನೆಯನ್ನು ಎಷ್ಟರಮಟ್ಟಿಗೆ ಖಂಡಿಸಿದ್ದಾರೆ? ಯಾವೊಬ್ಬ ಸಾಹಿತಿಯೂ ಆಗ ಈ ಘಟನೆ ಖಂಡಿಸಿ ಪ್ರಶಸ್ತಿ ಹಿಂದಿರುಗಿಸಿದ ನಿದರ್ಶನವಿಲ್ಲ. ಏಕೆಂದರೆ ಈ ಘಟನೆ ನಡೆದದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ! ಬಿಜೆಪಿ ಅಧಿಕಾರವಿದ್ದ ರಾಜ್ಯಗಳಲ್ಲಲ್ಲ! ಅಂದರೆ ಬುದ್ಧಿಜೀವಿಗಳ, ಮಾಧ್ಯಮಗಳ ಪ್ರತಿಭಟನೆಗಳೆಲ್ಲವೂ ರಾಜಕೀಯಪ್ರೇರಿತ ಎಂದಾಯಿತಲ್ಲವೇ.
ಈಚೆಗೆ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿಯೊಬ್ಬರು ಇದಕ್ಕೆ ಈಗಿನ ಕೇಂದ್ರ ಸರ್ಕಾರದ ಹಿಂದುತ್ವ ಧೋರಣೆಯೂ ಕಾರಣ ಎಂದಿದ್ದಾರೆ! ದೇಶದಲ್ಲಿ ಎಲ್ಲಿ ಏನೇ ಅನ್ಯಾಯದ ಪ್ರಸಂಗಗಳು ನಡೆದರೂ ಅವುಗಳ ಹಿಂದೆ ಆರೆಸ್ಸೆಸ್ ಮತ್ತು ಅದರ ಸಹವರ್ತಿಗಳ ಕೈವಾಡವನ್ನೇ ಕಾಣುವ ಕಾಮಾಲೆ ದೃಷ್ಟಿಕೋನ ಇದು! ಏನೇ ಘಟನೆ ನಡೆದರೂ ಕೇಂದ್ರದಲ್ಲಿನ ಮೋದಿ ಸರ್ಕಾರದ ಮೌನ ಕುಮ್ಮಕ್ಕು ಇದೆಯೆಂಬ ಕ್ಷುಲ್ಲಕ ಆಪಾದನೆ. ಒಟ್ಟಿನಲ್ಲಿ ಈಗಾಗುತ್ತಿರುವ ತಲ್ಲಣಗಳಲ್ಲೆಲ್ಲ ರಾಜಕೀಯ ಪಕ್ಷಪಾತವನ್ನು ಹುಡುಕುವ ಪ್ರವೃತ್ತಿ ಸ್ಪಷ್ಟವಾಗಿದೆ. ದಾದ್ರಿ ಘಟನೆ ನಡೆದದ್ದು ಉತ್ತರ ಪ್ರದೇಶದಲ್ಲಿ. ಅಲ್ಲದೇ ಆ ಘಟನೆಯ ಹಿಂದಿದ್ದದ್ದು ವೈಯಕ್ತಿಕ ವೈಷಮ್ಯವೇ ಹೊರತು ಮಾಧ್ಯಮಗಳು ತಿಳಿಸಿರುವಂತೆ ಕೋಮು ಭಾವನೆಯಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಇಂತಹ ಘಟನೆಗೆ ಅಲ್ಲಿನ ರಾಜ್ಯ ಸರ್ಕಾರ ಹೊಣೆ ಹೊರಬೇಕಾಗಿತ್ತಲ್ಲವೇ? ಅಖಿಲೇಶ್ ಯಾದವ್ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದಕ್ಕೆ ದಾದ್ರಿ ಘಟನೆ ಒಂದು ದ್ಯೋತಕ ಎಂದು ಗಟ್ಟಿಯಾಗಿ ಹೇಳುವ ಧೈರ್ಯವನ್ನು ಯಾವ ಮಾಧ್ಯಮವೂ ಮಾಡಲಿಲ್ಲ. ದಾದ್ರಿಯ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯೆ ಘಟನೆಗೆ ಭಾರಿ ಪ್ರಚಾರ ನೀಡಿದ ಮಾಧ್ಯಮಗಳು ಕರ್ನಾಟಕದ ಮೂಡಬಿದ್ರಿಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಘಟನೆ ನಡೆದಾಗ ಏಕೆ ಅದೇ ಪ್ರಮಾಣದ ಪ್ರಚಾರ ನೀಡಲಿಲ್ಲ? ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಕೊಂದು ಹಾಕಿದ್ದು ಮುಸ್ಲಿಂ ಸಂಘಟನೆಗೆ ಸೇರಿದ ಕೆಲವು ದುಷ್ಕರ್ಮಿಗಳು ಎಂಬುದು ಈಗ ಬಯಲಾಗಿದೆ. ಪೊಲೀಸರು ಈ ಸಂಬಂಧ ಕೆಲವರನ್ನು ಬಂಧಿಸಿಯೂ ಇದ್ದಾರೆ. ಆದರೆ ಇದನ್ನೊಂದು ವೈಯಕ್ತಿಕ ಜಗಳದ ವಿಷಯವೆಂದು ಮಾಧ್ಯಮಗಳು ಬಿಂಬಿಸಲು ಯತ್ನಿಸಿರುವುದು ಎಷ್ಟರ ಮಟ್ಟಿಗೆ ಸರಿ? ಅಖ್ಲಾಕ್ ಇರಲಿ, ಪ್ರಶಾಂತ್ ಪೂಜಾರಿಯೇ ಇರಲಿ ಇಬ್ಬರೂ ಮನುಷ್ಯರೇ. ಇಬ್ಬರ ಹತ್ಯೆಯೂ ಖಂಡನೀಯ. ಆದರೆ ಪ್ರಶಾಂತ್ ಪೂಜಾರಿ ಹತ್ಯೆಗೆ ಚಕಾರ ಕೂಡ ಇಲ್ಲ. ಆತನೊಬ್ಬ ಮನುಷ್ಯ ಜೀವಿಯೇ ಅಲ್ಲ ಎಂಬ ಭಾವನೆಯೇ? ಮನುಷ್ಯತ್ವಕ್ಕೂ ಕೋಮು ಬಣ್ಣ ಬಳಿಯುವ ಹುನ್ನಾರವೇ?
ಒಟ್ಟಾರೆ ಎಡಪಂಥೀಯ ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ ಮಾಧ್ಯಮಗಳಿಗೆ ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್ ಸಂಘಟನೆಯನ್ನು ಹೇಗಾದರೂ ಮಾಡಿ ಕಟಕಟೆಯಲ್ಲಿ ನಿಲ್ಲಿಸಲೇಬೇಕೆಂಬ ಹಠ ಎದ್ದುಕಾಣುತ್ತಿದೆ. ಮೋದಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಬುದ್ಧಿಜೀವಿಗಳಿಗೆ ಕಾಲಕಾಲಕ್ಕೆ ಸಿಗುತ್ತಿದ್ದ ಪ್ರಶಸ್ತಿ, ಪರಾಕು, ಪ್ರಚಾರ, ಇನ್ನಿತರ ಸರ್ಕಾರ ಸವಲತ್ತಿಗೆ ಈಗ ಕತ್ತರಿ ಬಿದ್ದಿರುವುದು ಮೋದಿ ವಿರುದ್ಧ ಕತ್ತಿ ಮಸೆಯುತ್ತಿರುವುದಕ್ಕೆ ಇನ್ನೊಂದು ಕಾರಣ. ಆರೆಸ್ಸೆಸ್ ಈ ಹತಾಶವಾದಿಗಳಿಗೆ ಒಂದು ‘ಬಾಕ್ಸಿಂಗ್ ಬ್ಯಾಗ್’ನಂತೆ ಕಾಣಿಸುತ್ತಿದೆ. ಅದಕ್ಕೇ ಸಮಯ ಸಿಕ್ಕಿದಾಗಲೆಲ್ಲ ಅದರ ಮೇಲೆ ಪ್ರಹಾರ ನಡೆಸುತ್ತಲೇ ಇರುತ್ತಾರೆ.
ಅದೆಷ್ಟು ದಿನ ಇಂತಹ ಪ್ರಹಾರ ನಡೆಯುತ್ತಿರುತ್ತದೋ ನೋಡಿಯೇ ಬಿಡೋಣ. ಮೋದಿ ವಿರುದ್ಧ ದಶಕಗಳ ಕಾಲದಿಂದ, ಅವರನ್ನು ಕಟಕಟೆಯಲ್ಲಿ ನಿಲ್ಲಿಸಲು ಷಡ್ಯಂತ್ರ ನಡೆಯುತ್ತಲೇ ಇದೆ. ಅದು ಎಲ್ಲಿಗೆ ತಲುಪಲಿದೆ ಎಂಬುದನ್ನೂ ನೋಡಿಯೇ ಬಿಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.