ಒಂದು ಸಮಯದಲ್ಲಿ ಸಂಕಷ್ಟಗಳಿಂದ ಬೇಸತ್ತು ಜೀವನವೇ ದುಸ್ತರವಾಗಿದೆ ಎಂದು ಭಾವಿಸಿದ್ದ ಒಂಟಿ ಕಾಲ ರೈತ ರಾಮಚಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೀಗ ಅವರು ನೂರಾರು ಜನರಿಗೆ ಸ್ಫೂರ್ತಿ ತುಂಬುವ ಸಾಧಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ರಾಮಚಂದ್ರ ಕಳೆದ 18 ವರ್ಷದಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ, ಎಲ್ಲಾ ಕಾರ್ಯವನ್ನೂ ಒಂದು ಕಾಲಲ್ಲೇ ಮಾಡಬೇಕಾದ ಅನಿವಾರ್ಯತೆ ಅವರದ್ದು, ಆದರೆ ಯಾರೊಬ್ಬರ ಸಹಾಯವನ್ನೂ ಪಡೆಯದೆ ಸ್ವಾವಲಂಬಿಯಾಗಿ ಅವರು ಕಾಯಕ ಮಾಡುತ್ತಿದ್ದಾರೆ. ತನ್ನ ಗದ್ದೆಯಲ್ಲಿ ಕೃಷಿ ಕಾಯಕ ಮುಗಿದ ತಕ್ಷಣ ಪಕ್ಕದ ನಗರಕ್ಕೆ ತೆರಳಿ ಕೂಲಿ ಕೆಲಸ ಮಾಡುತ್ತಾರೆ.
ತನ್ನ ಎಡೆಬಿಡದ ಕಾಯಕದಿಂದಾಗಿ ಅವರು ಉತ್ತಮ ಜೀವನ ನಿರ್ವಹಿಸುತ್ತಿದ್ದಾರೆ ಮತ್ತು ತಮ್ಮಿಬ್ಬರು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದ್ದಾರೆ.
ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೆ ಒದ್ದಾಟ ನಡೆಸಿದ್ದ ರಾಮಚಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು, ಆದರೆ ತನ್ನ ಸಾವಿನ ಬಳಿಕ ಕುಟುಂಬದ ಗತಿಯೇನು ಎಂದು ನೆನೆದು ಅವರು ತಮ್ಮ ನಿರ್ಧಾರವನ್ನು ಹಿಂಪಡೆದರು. ಸಂಕಷ್ಟವನ್ನು ಎದುರಿಸಿದರು, ಅವಿರತವಾಗಿ ದುಡಿದರು. ಅದರ ಫಲವಾಗಿ ಇಂದು ಅವರು ಉತ್ತಮ ರೈತ ಎನಿಸಿಕೊಂಡಿದ್ದಾರೆ.
ಅಂಗವಿಕಲತೆಯನ್ನು ಹಿಮ್ಮಟ್ಟಿ, ಆರ್ಥಿಕ ಸಂಕಷ್ಟವನ್ನು ಸವಾಲಾಗಿ ಪರಿಗಣಿಸಿ ಛಲದಂಕಮಲ್ಲನಂತೆ ಜೀವನ ನಡೆಸುತ್ತಿರುವ ರಾಮಚಂದ್ರ, ಆತ್ಮಹತ್ಯೆಗೆ ಶರಣಾಗಲು ಮುಂದಾಗುತ್ತಿರುವ ನೂರಾರು ರೈತರಿಗೆ ಮಾದರಿ. ಅವರಂತೆ ಜೀವನವನ್ನು ಎದುರಿಸಿದರೆ ಕಷ್ಟಗಳು ಸುಲಭವಾಗಿ ಪರಿಹಾರವಾಗುತ್ತದೆ. ಎಲ್ಲದಕ್ಕೂ ಆತ್ಮಹತ್ಯೆ ಪರಿಹಾರವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.