
ನವದೆಹಲಿ: ಭಾರತ-ಚೀನಾ ಗಡಿಯ ಸಮೀಪದ ಅತ್ಯಂತ ದೂರದ ಪ್ರದೇಶದಲ್ಲಿರುವ ಚುಮುರ್ ಎಂಬ ಚಿಕ್ಕ ಹಳ್ಳಿಯನ್ನು ಭಾರತದ ಮೊದಲ ಮಾದರಿ ಗಡಿ ಗ್ರಾಮ (Model Border Village) ಆಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಬುಧವಾರ ಚುಮುರ್ನಲ್ಲಿ ಈ ಯೋಜನೆಯ ಅಡಿಪಾಯ ಹಾಕಿದ್ದಾರೆ.
16,700 ಅಡಿ ಎತ್ತರದಲ್ಲಿರುವ ಈ ಹಳ್ಳಿ ಲಡಾಖ್ನ ಪೂರ್ವ ಭಾಗದ ಚಾಂಗ್ಥಾಂಗ್ ಪ್ರದೇಶದಲ್ಲಿದೆ. ವೈಬ್ರಂಟ್ ವಿಲೇಜ್ ಕಾರ್ಯಕ್ರಮದಡಿಚುಮುರ್ ಹಳ್ಳಿಯು ಕೇಂದ್ರ ಸರ್ಕಾರದ ವೈಬ್ರಂಟ್ ವಿಲೇಜ್ ಪ್ರೋಗ್ರಾಮ್ (VVP) ಅಡಿಯಲ್ಲಿ ಲಡಾಖ್ನಲ್ಲಿ ಆಯ್ಕೆಯಾದ ಮೊದಲ ಗ್ರಾಮವಾಗಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಸ್ವಾವಲಂಬಿ ಗಡಿ ಗ್ರಾಮಗಳ ಅಭಿವೃದ್ಧಿ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ ಗ್ರಾಮಗಳು, ಪ್ರವಾಸೋದ್ಯಮ ಸೌಲಭ್ಯಗಳು ಮತ್ತು ಆರ್ಥಿಕವಾಗಿ ಸಬಲೀಕೃತಗೊಂಡ ಗ್ರಾಮಗಳನ್ನು ರೂಪಿಸುವುದು,
ಈಗ ಆಯ್ಕೆಯಾಗಿರುವ ಹಳ್ಳಿಯ ವಿಶೇಷತೆಯೆಂದರೆ ಇಲ್ಲಿನ ಒಟ್ಟು ಜನಸಂಖ್ಯೆ 91. ಒಟ್ಟು 24 ಕುಟುಂಬಗಳು ಇವೆ. ಇದು ಭಾರತ-ಚೀನಾ ನಿಯಂತ್ರಣ ರೇಖೆ (LAC) ಸಮೀಪವಿದೆ. ಹೆಚ್ಚಿನ ಜನರು ಪಶ್ಮಿನಾ ಮೇಕೆ ಸಾಕಾಣಿಕೆಯನ್ನು ವೃತ್ತಿಯಾಗಿ ಹೊಂದಿದ್ದಾರೆ.
ಈ ಹಳ್ಳಿಯು ಕಠಿಣ ಹವಾಮಾನ, ದುರ್ಗಮ ಪ್ರದೇಶ ಮತ್ತು ಸೀಮಿತ ಆರ್ಥಿಕ ಅವಕಾಶಗಳಿಂದಾಗಿ ಜನರು ವಲಸೆ ಹೋಗುತ್ತಿರುವ ಪ್ರದೇಶಗಳಲ್ಲಿ ಒಂದು. ಈಗ ಸರ್ಕಾರ ಇಂತಹ ಗಡಿ ಪ್ರದೇಶಗಳಲ್ಲಿ ನಾಗರಿಕರ ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುತ್ತಿದೆ.
ಲಡಾಖ್ ಆಡಳಿತದ ಪ್ರಕಾರ, ಯೋಜನೆಯಡಿ ಹಳ್ಳಿಯ ಎಲ್ಲಾ 24 ಕುಟುಂಬಗಳಿಗೂ ಹವಾಮಾನಕ್ಕೆ ತಾಳುವಂತಹ ಆಧುನಿಕ ಮನೆಗಳನ್ನು ನಿರ್ಮಿಸಲಾಗುತ್ತದೆ. ಈ ಮನೆಗಳ ಗೋಡೆಗಳು ತಾಪ ನಿರೋಧಕ (thermally insulated) ವ್ಯವಸ್ಥೆಯನ್ನು ಹೊಂದಿರುತ್ತವೆ. ಇದರಿಂದ ತೀವ್ರ ಶೀತ ಮತ್ತು ಹವಾಮಾನದಿಂದ ರಕ್ಷಣೆ ಸಿಗುತ್ತದೆ. ಹಳ್ಳಿಯಲ್ಲಿ ಹೋಮ್ಸ್ಟೇಗಳನ್ನು ಉತ್ತೇಜಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ. ಇದರಿಂದ ಸ್ಥಳೀಯರಿಗೆ ಹೊಸ ಆದಾಯದ ಮಾರ್ಗಗಳು ದೊರೆಯಲಿವೆ. ಈ ಯೋಜನೆಯು ಗಡಿ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಮಹತ್ವದ ಪ್ರಯತ್ನದ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



