ನಾಗ್ಪುರ: ಪ್ರತಿಯೊಬ್ಬರನ್ನು ಒಗ್ಗೂಡಿಸುವುದು ನಮ್ಮ ಸಂಸ್ಕೃತಿ, ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸಂಸ್ಕೃತಿ. ಕಾಲದೊಂದಿಗೆ ನೈತಿಕತೆ ಬದಲಾಗಬಹುದು ಆದರೆ ನಮ್ಮ ಮೂಲ ಮೌಲ್ಯಗಳು ಯಾವಾಗಲೂ ಜೀವಂತವಾಗಿರುತ್ತದೆ. ಶಾಶ್ವತ ಮೌಲ್ಯಗಳ ಆಧಾರದಲ್ಲಿ ಸಾಮಾಜಿಕ ಬದಲಾವಣೆಗಳು ಆಗುತ್ತದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ವಿಜಯದಶಮಿ ಆಚರಣೆಯ ಅಂಗವಾಗಿ ನಾಗ್ಪುರದ ರೆಶಿಮ್ಭಾಗ್ ಮೈದಾನದಲ್ಲಿ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತೀಯತೆಯನ್ನು ಮನಸ್ಸಲ್ಲಿ ಇಟ್ಟುಕೊಂಡು, ಅದನ್ನೇ ಆತ್ಮವನ್ನಾಗಿಸಿಕೊಂಡು ಅದರ ಆಧಾರದ ಮೇಲೆ ಒಳ್ಳೆಯ, ಸತ್ಯ ಮತ್ತು ನ್ಯಾಯಸಮ್ಮತವಾದುದನ್ನು ಉಳಿದ ಜಗತ್ತಿನಿಂದ ಪಡೆದುಕೊಳ್ಳಬೇಕು ಎಂದರು.
ಭಾರತದ ಪ್ರಸ್ತುತ ಸ್ಥಿತಿಗತಿಯನ್ನು ಗಮನಿಸಿದರೆ ಆಶಾವಾದ ಮೂಡುತ್ತದೆ. ಕೆಲವು ವರ್ಷಗಳ ಹಿಂದೆ ನಿರಾಸೆಯ, ನಂಬಿಕೆಯೇ ಇಲ್ಲದ ವಾತಾವರಣವಿತ್ತು, ಆದರೆ ಅದೀಗ ನಿವಾರಣೆಯಾಗಿದೆ. ನಿರೀಕ್ಷೆಯ ವಾತಾವರಣ ಸೃಷ್ಟಿಯಾಗಿದೆ. ನಿರೀಕ್ಷೆ ಪೂರ್ಣಗೊಳ್ಳುತ್ತದೆ ಎಂಬ ಆಶಯ ಮೂಡುತ್ತಿದೆ. ಕೊನೆಯ ವ್ಯಕ್ತಿಯವರೆಗೂ ಈ ಆಶಾದಾಯಕ ಬದಲಾವಣೆಯ ಅಲೆ ತಲುಪಿದೆ, ಇದು ಬದುಕಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತಿದೆ, ಭವಿಷ್ಯ ಪ್ರಜ್ವಲಗೊಳ್ಳುತ್ತದೆ ಎಂಬ ಪ್ರತಿಯೊಬ್ಬರ ನಂಬಿಕೆ ರಾಷ್ಟ್ರೀಯತೆಯಾಗಿದ್ದು ಅದನ್ನು ಪೋಷಿಸಬೇಕಿದೆ ಎಂದರು.
ಕಳೆದ ಎರಡು ವರ್ಷದಿಂದ ವಿಶ್ವದಲ್ಲೇ ಭಾರತದ ಘನತೆ ಹೆಚ್ಚಾಗುತ್ತಿದೆ. ನೆರೆಯ ದೇಶಗಳೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬೆಳೆಸಲು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಧನಾತ್ಮಕ ಫಲಿತಾಂಶವನ್ನು ನೀಡಿದೆ. ವಿಶ್ವಕ್ಕೆ ಇಂದು ಸ್ವಾಭಿಮಾನ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಹೊಸ ಆಧುನಿಕ ಭಾರತದ ಪರಿಚಯವಾಗುತ್ತಿದೆ. ಭಾರತದ ಹೊಸ ಅವತಾರವನ್ನು ಆಶಾವಾದಿಂದ ಜಗತ್ತು ನೋಡುತ್ತಿದ್ದು, ನಮ್ಮ ಯೋಗ, ಗೀತೆ ಮತ್ತು ತಥಾಗತಗಳನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಜಗತ್ತು ಸ್ವೀಕಾರ ಮಾಡುತ್ತಿದೆ. ಭಾರತದ ಪರಂಪರೆಯನ್ನು ರಕ್ಷಿಸಲು ಆಡಳಿತ ಮಟ್ಟದಲ್ಲೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಭಾರತ ಯಾವಾಗಲೂ ಜಗತ್ತನ್ನು ತನ್ನ ಕುಟುಂಬವೆಂದೇ ಭಾವಿಸಿಕೊಂಡಿದೆ. ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಂತಾರಾಷ್ಟ್ರೀಯ ಹಿತಾಸಕ್ತಿ ಎರಡನ್ನೂ ನಾವು ಸಮೋತಲನದಿಂದ ನಿಭಾಯಿಸಿಕೊಂಡು ಬಂದಿದ್ದೇವೆ.
ತೊಂದರೆಯಲ್ಲಿ ಇರುವ ಇತರ ದೇಶಗಳಿಗೂ ಭಾರತ ಸಹಾಯಹಸ್ತ ಚಾಚುತ್ತಿದೆ ಎಂದ ಅವರು, ಅಪಾಯಕಾರಿ ನೆರೆಯ ದೇಶದ ಬಗ್ಗೆ ಕೇಂದ್ರ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನಿ ಡಾ.ವಿ.ಕೆ. ಸಾರಸ್ವತ್ ಅವರು ವಹಿಸಿದ್ದರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.