ಮಂಗಳೂರು : ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ಸ್ ಪುತ್ತೂರು ಲಾಂಛನದಲ್ಲಿ ಕೆ.ಚಂದ್ರಶೇಖರ ರೈ ಅಕ್ಷಯ ಪುತ್ತೂರು ಮತ್ತು ಯತೀಶ್ ಕುಮಾರ್ ಆಳ್ವ ನಿರ್ಮಾಣದ ‘ರೈಟ್ ಬೊಕ್ಕ ಲೆಫ್ಟ್’ ನಡುಟು ಕುಡೊಂಜಿ ತುಳು ಚಲನಚಿತ್ರ ನವಂಬರ್ 5ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ 14 ಟಾಕೀಸ್ಗಳಲ್ಲಿ ತೆರೆಕಾಣಲಿದೆ.
ಯತೀಶ್ ಆಳ್ವ ಚಿತ್ರಕತೆ ಸಂಭಾಷಣೆ ಬರೆದು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಲೆಫ್ಟ್ ರೈಟ್ ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಸಿನಿಪೊಲಿಸ್, ಬಿಗ್ಸಿನೆಮಾ, ಉಡುಪಿ, ಕಾರ್ಕಳ, ಮೂಡಬಿದ್ರೆ, ಬಿ.ಸಿ.ರೋಡ್ ಬೆಳ್ತಂಗಡಿ, ಪುತ್ತೂರು, ಸುರತ್ಕಲ್, ಸುಳ್ಯ, ಕಾಸರಗೋಡು ಮತ್ತು ಮಣಿಪಾಲದಲ್ಲಿ ತೆರೆಕಾಣಲಿದೆ.
ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಕುಂಬ್ರ ದಯಾಕರ ಆಳ್ವ, ಛಾಯಾಹರ್ಷಾ, ನಮಿತಾ ಶರಣ್, ಮೊಹೈರ್ ಶೆಟ್ಟಿ, ಮರ್ವಿನ್ ಅಭಿನಯಿಸಿದ್ದಾರೆ. ನೃತ್ಯ: ಪ್ರಶಾಂತ್, ಕಲಾನಿರ್ದೇಶನ: ದಯೇಶ್ ಪಡುಬಿದ್ರೆ, ಸಂಗೀತ ಡಾ.ನಿತೀನ್ ಆಚಾರ್ಯ.
ರೈಟ್ ಬೊಕ್ಕ ಲೆಫ್ಟ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯಲ್ಲಿ ೩೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಸಂಪೂರ್ಣ ತುಳುವರಿಂದ ತುಳುವರಿಗಾಗಿ ತುಳುನಾಡಿನಲ್ಲೇ ನಿರ್ಮಾಣವಾದ ಪ್ರಥಮ ಚಿತ್ರ ಎಂಬುದು ಈ ಚಿತ್ರದ ಹೆಗ್ಗಳಿಕೆ.
ರಂಗ ಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸಕ್ರಿಯರಾಗಿರುವ ಯತೀಶ್ ಕುಮಾರ್ ಆಳ್ವರವರು ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ದುಡಿದು ಪರಿಣಿತಿ ಹೊಂದಿರುತ್ತಾರೆ. ಕನ್ನಡ, ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ ದುಡಿದ ಅನುಭವ ಕೂಡಾ ಇವರಲ್ಲಿ ಇದೆ. ಈಗಾಗಲೇ ತುಳುವಿನಲ್ಲಿ ಪ್ರಥಮವಾಗಿ ದೂರದರ್ಶನ ಚಂದನವಾಹಿನಿಗಾಗಿ ‘ರೈಟ್ ಪೋಯಿ’ ಎಂಬ ಧಾರಾವಾಹಿ ಯನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಿದ ಖ್ಯಾತಿ ಇವರದ್ದು.
ಈಗ ಚಲನಚಿತ್ರವಾಗಿ ಮೂಡಿಬರಲಿರುವ ‘ರೈಟ್ ಬೊಕ್ಕ ಲೆಫ್ಟ್’ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ ಮತ್ತು ನಿರ್ದೇಶನದೊಂದಿಗೆ ಛಾಯಾ ಗ್ರಹಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಲವಾರು ಹೊಸ ಅಪ್ಪಟ ತುಳು ಪ್ರತಿಭೆಗಳನ್ನು ಈ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ.
ಚಿತ್ರದ ನಿರ್ಮಾಪಕರಲ್ಲಿ ಓರ್ವರಾದ ಚಂದ್ರಶೇಖರ ರೈ ಇವರು ಕೃಷಿ ಹಾಗೂ ಹಲವಾರು ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲ ತುಳು ಅಭಿಮಾನಿ. ಚಲನ ಚಿತ್ರ ರಂಗದಲ್ಲಿ ಇದು ಇವರ ಪ್ರಥಮ ಕೃಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.