News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬ್ರಿಟಿಷರ ವಿರುದ್ಧ ಬಾಲೆದಿಂಡನ್ನೇ ಅಸ್ತ್ರವಾಗಿ ಹೋರಾಡಿದ್ದ ಪಾ-ಟೋಗನ್

ಪಾ-ಟೋಗನ್ ನೆಂಗ್ಮಿಂಜಾ ಸಂಗ್ಮಾ ಬಹುಶಃ ಈ ಹೆಸರನ್ನು ಈಶಾನ್ಯ ಭಾರತೀಯರನ್ನು ಹೊರತುಪಡಿಸಿ ಇತರರು ಕೇಳಿರುವುದು ಬಲು ವಿರಳವೇ ಆಗಿರಬಹುದು. ಯಾಕೆಂದರೆ ನಾವು ಕಲಿತ ಪಠ್ಯ ಪುಸ್ತಕಗಳು ಬ್ರಿಟಿಷರನ್ನು, ಮೊಘಲರನ್ನು ವೈಭವೀಕರಿಸುವುದರಲ್ಲಿ ವ್ಯಸ್ತವಾಗಿದ್ದವೇ ಹೊರತು ತೆರೆಮರೆಯ ಸ್ವಾತಂತ್ರ್ಯ ವೀರರನ್ನು ಪರಿಚಯಿಸಿಕೊಡುವ ಕಾರ್ಯವನ್ನು ಮಾಡಿಲ್ಲ.

ಸಂಗ್ಮಾ ಅವರ ರಕ್ತದಲ್ಲಿ ಗಾರೋ ಬೆಟ್ಟಗಳ ಸ್ವಾತಂತ್ರ್ಯದ ಬೀಜ ಬಿತ್ತು ಎಂಬುದು ಜನಜನಿತವಾದ ಮಾತು. ಬಾಳೆ ದಿಂಡಿನ ಆಯುಧಗಳನ್ನು ಬಳಸಿಕೊಂಡು ಅವರು ಬ್ರಿಟಿಷರನ್ನು ಅವರು ಎದುರಿಸಿದ ಕಥೆಯೇ ಬಲು ರೋಚಕ. ಬೆಟ್ಟಗಳ ಮೇಲೆ ಯಾವುದೇ ಆಧುನಿಕ ಸೌಲಭ್ಯಗಳು, ಆಯುಧಗಳು ಇಲ್ಲದ ಕಾಲದಲ್ಲಿ ಬಾಲೆ ದಿಂಡಿನ ಆಯುಧಗಳನ್ನು ಒಳಸಿ ಒಬ್ಬಾತ ಬ್ರಿಟಿಷರಂತಹ ಬ್ರಿಟಿಷರನ್ನೇ ಎದುರಿಸಿದ ಅಪ್ರತಿಮ ಸಾಹಸದ ಗಾಥೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಲೇಬೇಕಾಗಿದೆ. ಅಂತಹ ಒಂದು ಸಣ್ಣ ಪ್ರಯತ್ನವನ್ನು ಈ ಲೇಖನ ಮಾಡುತ್ತದೆ.

ಹಾಗಾದರೆ ಈ ಪಾ-ಟೋಗನ್ ನೆಂಗ್ಮಿಂಜಾ ಸಂಗ್ಮಾ ಯಾರು?

ಮೇಘಾಲಯದ ಗಾರೋ ಬೆಟ್ಟಗಳಲ್ಲಿ ಹುಟ್ಟಿದ ದಿಟ್ಟಯೋಧ ಮತ್ತು ಸ್ವಾತಂತ್ರ್ಯ ಹೋರಾಟಗಾರನೇ ಟೋಗನ್ ನೆಂಗ್ಮಿಂಜಾ ಸಂಗ್ಮಾ. ಈಸ್ಟ್ ಗಾರೋ ಹಿಲ್ಸ್‌ನ ವಿಲಿಯಂನಗರ ಬಳಿಯ ಸಮಂದಾ ಗ್ರಾಮದಲ್ಲಿ ಸುಮಾರು 1840-45ರ ಸುಮಾರಿಗೆ (ನಿಖರ ದಿನಾಂಕ ದಾಖಲೆಯಿಲ್ಲ) ಗಾರೋ ಎಂಬ ಟಿಬೆಟೋ-ಬರ್ಮನ್ ಭಾಷೆ ಮಾತನಾಡುವ ಕುಟುಂಬಕ್ಕೆ ಸೇರಿದ ಆದಿವಾಸಿ ಸಮುದಾಯದಲ್ಲಿ ಹುಟ್ಟಿದ ಇವರು
1870ರ ದಶಕದಲ್ಲಿ ಬ್ರಿಟಿಷ್ ಆಕ್ರಮಣಕಾರರ ವಿರುದ್ಧ ದಿಟ್ಟ ಸಂಘರ್ಷವನ್ನು ನಡೆಸಿ ಇತಿಹಾಸದ ಪುಟದಲ್ಲಿ ಅಜರಾಮರರಾಗಿದ್ದಾರೆ. ಅವರ ಅಪ್ರತಿಮ ತ್ಯಾಗದ ಸ್ಮರಣಾರ್ಥ ಡಿಸೆಂಬರ್ 12, 1872 ಅನ್ನು ಮೇಘಾಲಯದಲ್ಲಿ ‘ಪಾ ತೋಗನ್ ನೆಂಗ್ಮಿನ್ಜಾ ಸಾಂಗ್ಮಾ ದಿನ’ವಾಗಿ ಆಚರಿಸಲಾಗುತ್ತದೆ. ಅಂದು ಸಾರ್ವಜನಿಕ ರಜೆಯೂ ಇದೆ. ಸಂಗ್ಮಾ ಅವರ ತಂದೆ-ತಾಯಿಯ ಹೆಸರು ದಾಖಲೆಯಲ್ಲಿ ಇಲ್ಲ, ಆದರೆ ಸಾಂಪ್ರದಾಯಿಕ ಕುಟುಂಬದಲ್ಲಿ ಇವರು ಬೆಳೆದರು. ಬಾಲ್ಯದಿಂದಲೇ ಅರಣ್ಯ ಜೀವನ, ಬೇಟೆ, ಕೃಷಿ ತಿಳಿದವರು. ಗಾರೋ ಸಮುದಾಯದ ಇತರ ಯುವಕರಂತೆ ದಾವ್ ಖಡ್ಗ ಬಳಕೆಯಲ್ಲಿ ಇವರು ನಿಪುಣರು.
ಗಾರೋ ಬೆಟ್ಟಗಳ ಮೇಲೆ ಬ್ರಿಟಿಷರ ಕಣ್ಣು ಬಿದ್ದಿದ್ದು ಯಾಕೆ?
ಗಾರೋ ಬೆಟ್ಟಗಳು (ಈಗಿನ ಮೇಘಾಲಯದ ಗಾರೋ ಹಿಲ್ಸ್) 18ನೇ ಶತಮಾನದ ಕೊನೆಯಲ್ಲಿ ಬ್ರಿಟಿಷರಿಗೆ “ಅಪರಿಚಿತ ಭೂಮಿ” ಆಗಿದ್ದವು. ಆದರೆ 1850-70ರ ದಶಕದಲ್ಲಿ ಅವರ ಕಣ್ಣು ಈ ಪ್ರದೇಶದ ಮೇಲೆ ಬೀಳಲಾರಂಭಿಸಿತ್ತು. ಇದಕ್ಕೆ ಮುಖ್ಯವಾಗಿ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿವೆ. ಗಾರೋ ಬೆಟ್ಟಗಳು ಅಸ್ಸಾಂ ಚಹಾ ಪ್ರದೇಶಕ್ಕೆ ಹೊಂದಿಕೊಂಡಿದ್ದವು. 1860ರಲ್ಲಿ ಅಸ್ಸಾಂ ಚಹಾ ಕೈಗಾರಿಕೆ ಬೆಳೆಯುತ್ತಿತ್ತು, ಹೊಸ ತೋಟಗಳಿಗೆ ಭೂಮಿ ಬೇಕಿತ್ತು. ಅಷ್ಟೇ ಅಲ್ಲದೇ ಗಾರೋದಲ್ಲಿ ಅಡಿಕೆ ತೋಟಗಳು ಸಮೃದ್ಧವಾಗಿದ್ದವು. ಬ್ರಿಟಿಷರು ಇವುಗಳನ್ನು ರಫ್ತಿಗೆ ಬಳಸಿಕೊಳ್ಳಲು ಬಯಸಿದ್ದರು. ಗಾರೋ ಬೆಟ್ಟಗಳ
 ಚಿಸೋಬಿಬ್ರಾ, ರೋಂಗ್ರಾಂಗ್ ಬಳಿ ಕಬ್ಬಿಣ ಅದಿರು ದೊರೆಯುತ್ತಿತ್ತು. ಬ್ರಿಟಿಷರ ರೈಲು, ಕಾರ್ಖಾನೆಗಳಿಗೆ ಇದರ ಅಗತ್ಯವಿತ್ತು. ಇಲ್ಲಿ ಬೆಳೆಯುತ್ತಿದ್ದ ಸಾಗವಾನಿ, ರಬ್ಬರ್ ಮರಗಳು ಬ್ರಿಟಿಷ್ ನೌಕಾಪಡೆಗೆ ಹಡಗು ನಿರ್ಮಾಣಕ್ಕೆ ಬೇಕಾಗಿತ್ತು. ಮಾತ್ರವಲ್ಲದೇ ಇಲ್ಲಿನ ಗ್ರಾಮಗಳನ್ನು ತಮ್ಮ ಆಡಳಿತಕ್ಕೆ ಒಳಪಡಿಸಿ ತೆರಿಗೆ ವಸೂಲಿ ಮಾಡುವ ಯೋಚನೆ ಬ್ರಿಟಿಷರಿಗಿತ್ತು. ಗಾರೋ ಬೆಟ್ಟಗಳು ಅಸ್ಸಾಂ (ಈಶಾನ್ಯ) ಮತ್ತು ಬಂಗಾಳ (ದಕ್ಷಿಣ) ನಡುವಿನ ಪ್ರಮುಖ ದಾರಿಯಾಗಿತ್ತು. ಇದು ಭೂತಾನ್, ಟಿಬೆಟ್, ಬರ್ಮಾ ಗಡಿಗಳಿಗೆ ಹತ್ತಿರವಾದ ಕಾರಣ  ಚೀನಾ, ರಷ್ಯಾದ ಭಯ ಇತ್ತು. ಗಾರೋ ಯೋಧರು ಅಸ್ಸಾಂನ ಇತರ ಬಂಡಾಯಗಳಿಗೆ ಸಹಾಯ ಮಾಡುತ್ತಿದ್ದರು. ಹೀಗಾಗಿ ಬ್ರಿಟಿಷರು “ಈ ಬೆಟ್ಟಗಳನ್ನು ಶಾಂತಗೊಳಿಸದಿದ್ದರೆ ಈಶಾನ್ಯ ಭಾರತ ಅಸ್ಥಿರವಾಗುತ್ತದೆ ಎಂದೇ ಭಾವಿಸಿದ್ದರು. 
ಬಾಳೆ ದಿಂಡಿನ ಆಯುಧಗಳ ವಿಶೇಷತೆ
ಗಾರೋ ಬೆಟ್ಟಗಳು ದಟ್ಟ ಅರಣ್ಯ, ಗುಡ್ಡಗಾಡು, ಒಣ ಗಾಳಿಗಳಿಂದ ಕೂಡಿದ್ದವು. ಬ್ರಿಟಿಷರ ಬಂದೂಕು, ಗುಂಡು, ಕುದುರೆ ಸೈನ್ಯವನ್ನು ಅಲ್ಲಿನ ಜನರಿಗೆ ನೇರವಾಗಿ ಎದುರಿಸುವುದು ಸಾಧ್ಯವಿರಲಿಲ್ಲ. ಆದರೆ ಪಾ ಟೋಗನ್ ಅವರು  ಭೂಮಿಯ ಸ್ಥಳೀಯ ಸಂಪನ್ಮೂಲಗಳನ್ನೇ ಆಯುಧವನ್ನಾಗಿ ಮಾಡಿದರು – ವಿಶೇಷವಾಗಿ ಬಾಳೆ ಮರದ ದಿಂಡನ್ನು ಬ್ರಿಟಿಷರ ವಿರುದ್ಧ ಪ್ರಮುಖ ಆಯುಧವನ್ನಾಗಿ ಬಳಸಿದರು. 

ದೊಡ್ಡ ಬಾಳೆ ಮರದ ಕಾಂಡವನ್ನು 2-3 ಅಡಿ ಉದ್ದ, 1 ಅಡಿ ಅಗಲಕ್ಕೆ ಕತ್ತರಿಸಿ ಒಳಗಿನ ನಾರು ತುಂಬಿದ ಭಾಗವನ್ನು ಒಣಗಿಸದೆ ತಾಜಾವಾಗಿ ಇಟ್ಟುಕೊಳ್ಳುತ್ತಿದ್ದರು. ನೀರು ಮತ್ತು ಗಟ್ಟಿ ನಾರು ಬುಲೆಟ್‌ಪ್ರೂಫ್ ಪದರವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದಕ್ಕೆ ಮೇಲೆ ಬಿದಿರು ಅಥವಾ ಮರದ ಚೌಕಟ್ಟು ಹಾಕಿ ಕೈಯಲ್ಲಿ ಹಿಡಿಯಲು ಸಹಾಯಕವಾಗುವಂತೆ ಹಿಡಿಕೆ ತಯಾರಿಸಲಾಗುತ್ತಿತ್ತು. ಇದನ್ನು ಬ್ರಿಟಿಷರು ಆಗಮಿಸುತ್ತದ್ದಂತೆ ಅತ್ಯಂತ ಚಾಣಾಕ್ಷ ರೀತಿಯಲ್ಲಿ ಪ್ರಯೋಗಿಸಲಾಗುತ್ತಿತ್ತು. ಗುಡ್ಡದ ಮೇಲಿನಿಂದ ಕೆಳಗೆ ಇಳಿಯುತ್ತಾ ಬ್ರಿಟಿಷ್ ಸೈನಿಕರ ಮೇಲೆ ಬಾಣ-ಈಟಿ ಸುರಿಸುತ್ತಿದ್ದರು. ಎರಡು ಬಾಲೆ ದಿಂಡಿನ  ಗುರಾಣಿಗಳನ್ನು ಎದೆ-ತಲೆಗೆ ಹಿಡಿದು ಮುಂದೆ ಸಾಗುತ್ತಿದ್ದರು. ಬ್ರಿಟಿಷರ ಗುಂಡು ಗುರಾಣಿಯ ನೀರಿನ ಪದರದಲ್ಲಿ ತಗ್ಗಿ ನಿಲ್ಲುತ್ತಿತ್ತು (ನೀರು ಗುಂಡಿನ ವೇಗ ಕಡಿಮೆ ಮಾಡುತ್ತಿತ್ತು, ನಾರು ತಡೆಯುತ್ತಿತ್ತು. ಇದರಿಂದ 5-10 ನಿಮಿಷಗಳ ಕಾಲ ಯೋಧರು ನಿರಾತಂಕವಾಗಿ ಬ್ರಿಟಿಷರ ಮೇಲೆ ದಾಳಿ ಮಾಡಬಹುದಿತ್ತು. ಬಾಲೆ ದಿಂಡಿನ ಈ ಆಯುಧ ತೂಕ ಕಡಿಮೆ ಅಂದರೆ 4ರಿಂದ 5 ಕೆ.ಜಿ ಇರುತ್ತಿತ್ತು, ಇದನ್ನು ಹಿಡಿದು ಬೆಟ್ಟದಲ್ಲಿ ಓಡಾಡಲು ಸುಲಭವಾಗಿತ್ತು. ಪ್ರತಿ ಗ್ರಾಮದಲ್ಲೂ ಬಾಳೆ ತೋಟ ಇದ್ದ ಕಾರಣ ಖರ್ಚಿಲ್ಲದೆ ಇದನ್ನು ತಯಾರಿಸಬಹುದಾಗಿತ್ತು.

ಬಾಳೆ ದಿಂಡಿನ ಜಲಬಾಂಬ್” ತಾಜಾ ಬಾಳೆ ಕಾಂಡವನ್ನು ಮಧ್ಯದಲ್ಲಿ ಕೊರೆದು ಒಳಗೆ ವಿಷದ ಬಾಣದ ತುದಿ ಅಥವಾ ಕೆಂಪು ಮಣ್ಣಿನಿಂದ ಗುಂಡು ತುಂಬಿಸಲಾಗುತ್ತಿತ್ತು. ಮೇಲೆ ಬಿದಿರಿನ ಕವರ್ ಹಾಕಿ, ಬಿಸಿಲಿಗೆ ಸಿಡಿಯುವಂತೆ ಇಡುತ್ತಿದ್ದರು. ಬ್ರಿಟಿಷ್ ಸೈನ್ಯ ಕಿರಿದಾದ ಗುಡ್ಡದ ದಾರಿಯಲ್ಲಿ ಬಂದಾಗ, ಮೇಲಿನಿಂದ ಈ ದಿಂಡುಗಳನ್ನು ಉರುಳಿಸುತ್ತಿದ್ದರು. ಬಿಸಿಲು/ಗುಂಡಿನ ಶಾಖಕ್ಕೆ ದಿಂಡು ಸಿಡಿದು, ನೀರು + ವಿಷದ ತುಣುಕುಗಳು ಚೆಲ್ಲಾಪಿಲ್ಲಿಯಾಗಿ ಸುರಿಯುತ್ತಿತ್ತು. ಸೈನಿಕರ ಕಣ್ಣು-ಮುಖಕ್ಕೆ ಬಿದ್ದು ಏನು ಕಾಣದಂತೆ ಮಾಡುತ್ತಿತ್ತು. ಆಗ ಗಾರೋ ಯೋಧರು ದಾವ್ ಖಡ್ಗದಿಂದ ಅವರ ಮೇಲೆ ದಾಳಿ ಮಾಡುತ್ತಿದ್ದರು.

 ಬಾಳೆ ದಿಂಡಿನ “ಅಗ್ನಿ ತಡೆಗೋಡೆ” ಬೆಂಕಿಯನ್ನು ತಡೆಯಲು ಬಾಳೆ ದಿಂಡಿನ “ಅಗ್ನಿ ತಡೆಗೋಡೆಯನ್ನು ಕೂಡ ಮಾಡಲಾಗುತ್ತಿತ್ತು. ಬ್ರಿಟಿಷರು ಗ್ರಾಮಕ್ಕೆ ಬೆಂಕಿ ಹಚ್ಚಿದಾಗ, ಗ್ರಾಮಸ್ಥರು ಬಾಳೆ ದಿಂಡುಗಳ ಗೋಡೆ ಮಾಡಿ ಅಗ್ನಿಯನ್ನು ತಡೆಯುತ್ತಿದ್ದರು. ಇದರಿಂದ, ಗಾರೋ ಯೋಧರಿಗೆ ಪಲಾಯನ ಮತ್ತು ಪ್ರತಿದಾಳಿಗೆ ಸಮಯ ಸಿಗುತ್ತಿತ್ತು.

“ಬಾಳೆ ಮರವೇ ನಮ್ಮ ಕವಚ, ಗಾರೋ ಬೆಟ್ಟಗಳೇ ನಮ್ಮ ಕೋಟೆ” ಎಂದು  ಪಾ ತೋಗನ್‌ರ ಮಾತು ಬಹಳ ಪ್ರಸಿದ್ಧವಾಗಿದೆ.
ಬ್ರಿಟಿಷ್‌ ಆಫೀಸರ್‌ ಕ್ಯಾಪ್ಟನ್ ಜೇಮ್ಸ್ ವಿಲಿಯಂಸನ್ ಎಂಬಾತ ತನ್ನ ಡೈರಿಯಲ್ಲಿ (ಅಸ್ಸಾಂ ಆರ್ಕೈವ್ಸ್‌ನಲ್ಲಿ ಇದೆ) ಪಾ ಟೋಗನ್‌ ಅವರ ಬಗ್ಗೆ ಬರೆದಿದ್ದು ಹೀಗೆ:
“ಡಿಸೆಂಬರ್ 11, 1872: ನಾವು ಮ್ಯಾಚಾ ರೋಂಗ್‌ಕ್ರೆಕ್ ಗುಡ್ಡಕ್ಕೆ ಏರಿದೆವು. ಗಾರೋ ಯೋಧರು ಬಾಳೆ ಗುರಾಣಿ ಹಿಡಿದು ಬಂದರು. ನಮ್ಮ ಗುಂಡುಗಳು ನೀರಿನಲ್ಲಿ ಮುಳುಗಿ ನಿಲ್ಲುತ್ತಿದ್ದವು. ಆದರೆ ಅವರ ನಾಯಕ – ಟೋಗನ್ – ಒಬ್ಬನೇ ಮೂರು ಗುಂಡು ತಡೆದು, ನನ್ನ ಕಣ್ಣನ್ನು ದಿಟ್ಟಿಸಿ ನೋಡಿ ನಕ್ಕ! ಅವನ ಕಣ್ಣುಗಳಲ್ಲಿ ಭಯವಿಲ್ಲ, ಕೇವಲ ಕರುಣೆ ಇತ್ತು. ನಾನು ಗುಂಡು ಹಾರಿಸಿದೆ. ಅವನು ಬಿದ್ದ. ಆದರೆ ಅವನ ಸಾವು ನಮ್ಮ ಗೆಲುವಲ್ಲ – ನಮ್ಮ ಸೋಲಿನ ಆರಂಭ”. ಈ ಮಾತು ಶತ್ರುಗಳ ಕಣ್ಣಲ್ಲೂ ಟೋಗನ್  ಎಷ್ಟು ಶೂರನಾಗಿದ್ದ ಎಂಬುದನ್ನು ತೋರಿಸುತ್ತದೆ.

“ಕಾಗೆಯ ಗೂಡಿನ ಗುಪ್ತಚರ” – ಬುದ್ಧಿವಂತಿಕೆಯ ಕಥೆಅದು 1871ರ ಮಳೆಗಾಲ. ಬ್ರಿಟಿಷ್ ಸೈನ್ಯದ 500 ಮಂದಿ ರೋಂಗ್ರಾಂಗ್ ಗ್ರಾಮಕ್ಕೆ ಬರುತ್ತಿದ್ದರು ಎಂಬ ಸುದ್ದಿ ಬಂತು. ಆದರೆ ಎಷ್ಟು ಮಂದಿ? ಯಾವ ದಾರಿ? ತಿಳಿಯದೇ ಇದ್ದರೆ ಬ್ರಿಟಿಷರ ದಾಳಿಗೆ ಗ್ರಾಮಸ್ಥರು ಬಲಿಯಾಗುವ ಅಪಾಯವಿತ್ತು.

ಆದರೆ ಚಾಣಾಕ್ಷ ಪಾ ತೋಗನ್ ಕಾಗೆಗಳನ್ನೇ ಗುಪ್ತಚರ ಮಾಡಿದರು.  ಹೌದು ಗಾರೋ ಬೆಟ್ಟಗಳಲ್ಲಿ ಕಪ್ಪು ಕಾಗೆಗಳು (Jungle Crow) ಸಾವಿರಾರು ಸಂಖ್ಯೆಯಲ್ಲಿ ಇರುತ್ತವೆ. ಟೋಗನ್‌ ಅವರು 10 ಯೋಧರಿಗೆ ಒಂದೊಂದು ಕಾಗೆಯ ಗೂಡು ಕಟ್ಟಲು ಆದೇಶಿಸಿದರು. ಬ್ರಿಟಿಷರು ಆಗಮಿಸುವ ದಾರಿಯುದ್ಧಕ್ಕೂ ಮರಗಳ ಮೇಲೆ ಗೂಡು ಕಟ್ಟಲು ಮುಂದಾದರು. ಪ್ರತಿ ಗೂಡಿನಲ್ಲಿ ಒಂದು ಕಾಗೆಯ ಮರಿಯನ್ನು ಇಟ್ಟು, ಕೆಂಪು ಬಟ್ಟೆಯ ತುಂಡು ಕಟ್ಟಿದರು. ಬ್ರಿಟಿಷ್ ಸೈನ್ಯ ಬಂದಾಗ ಕೆಂಪು ಬಣ್ಣಕ್ಕೆ ಆಕರ್ಷಿತರಾಗಿ ಕಾಗೆಗಳು ಗಟ್ಟಿಯಾಗಿ ಕೂಗಿ, ಗೂಡುಗಳ ಮೇಲೆ ಹಾರಾಡತೊಡಗಿದವು. ದೂರದಿಂದಲೇ ಕಣ್ಗಾವಲು ಇರಿಸುತ್ತಿದ್ದ ಪಾ ಟೋಗನ್ ಕಾಗೆಗಳ ಗುಂಪು ಎಲ್ಲಿ ಜೋರಾಗಿ ಕೂಗುತ್ತಿದೆಯೋ, ಅಲ್ಲಿ ಬ್ರಿಟಿಷ್‌ ಉಪಸ್ಥಿತಿ ಇದೆ ಎಂದು ಅರಿತು ತಮ್ಮ ಯೋಧರಿಗೆ ದಾಳಿ ಮಾಡಲು ಆದೇಶಿಸುತ್ತಿದ್ದರು.  ಸಮಯಕ್ಕೆ ಸರಿಯಾಗಿ ದಾಳಿ ಮಾಡಿದ ಪರಿಣಾಮ ಬ್ರಿಟಿಷರ 30 ಮಂದಿ ಸತ್ತರು, ಉಳಿದವರು ಹಿಂದೆ ಸರಿದು ಓಡಿಹೋದರು. ವಿಶೇಷವೆಂದರೆ ಗಾರೋ ಮಕ್ಕಳು ಇಂದಿಗೂ ಕಾಗೆಯ ಗೂಡು ಮಾಡಿ ಅದನ್ನೇ “ಪಾ ತೋಗನ್‌ರ ಗುಪ್ತಚರ” ಎನ್ನುತ್ತಾ ಆಟವಾಡುತ್ತಾರೆ.

 

 

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top