ಬೆಂಗಳೂರು: ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಟೆಂಡರ್ನಲ್ಲಿ ಸುಮಾರು 15,568 ಕೋಟಿ ರೂಪಾಯಿಯ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಈ ಅವ್ಯವಹಾರದ ಗಾತ್ರ ಇನ್ನೂ ದೊಡ್ಡದೇ ಇದೆ ಎಂದು ದೂರಿದರು. ಎಸ್ಕಾಂಗಳು ಕೆಇಆರ್ಸಿ ನಿಯಮಗಳಿಗೆ ಬದ್ಧವಾಗಿರಬೇಕು. ಕೆಇಆರ್ಸಿ ನಿಯಮಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ ಎಂದು ವಿವರಿಸಿದರು. ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಹುದೇ ಹೊರತು ಖಾಯಂ ಗ್ರಾಹಕರು, ಹೊಸ ಗ್ರಾಹಕರಿಗೆ ಈ ಸ್ಮಾರ್ಟ್ ಮೀಟರನ್ನು ಕಡ್ಡಾಯ ಮಾಡುವಂತಿಲ್ಲ ಎಂದರು. ಪವರ್ ಪಾಯಿಂಟ್ ಪ್ರದರ್ಶನವನ್ನೂ ನೀಡಿದರು.
ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ ಎಂದು ತಿಳಿಸಿದರು. ಕೆಟಿಪಿಪಿ ಕಾಯ್ದೆಯಡಿ ಬಿಡ್ ಕೆಪ್ಯಾಸಿಟಿಯನ್ನು ಟೆಂಡರ್ನಲ್ಲಿ ತಿಳಿಸಿಲ್ಲ. ಅದು 6,800 ಕೋಟಿ ಇರಬೇಕಿತ್ತು. ಬಿಡ್ಡಿಂಗ್ ಸಾಮಥ್ರ್ಯ ಇಲ್ಲದಿರುವುದೇ ಮೊದಲ ಹಗರಣ ಎಂದು ಆಕ್ಷೇಪಿಸಿದರು.
ಕೆಟಿಪಿಪಿ ಕಾಯ್ದೆ ಪ್ರಕಾರ ವ್ಯವಹಾರವು 1,920 ಕೋಟಿ ಇರಬೇಕಾಗಿತ್ತು. ಟೆಂಡರ್ನಲ್ಲಿ ಬರೀ 107 ಕೋಟಿ ಎಂದು ನಮೂದಿಸಿದ್ದಾರೆ. ಬ್ಲ್ಯಾಕ್ಲಿಸ್ಟ್ ಆದ ಕಂಪೆನಿಗೆ ಕೊಡುವುದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದರೂ ಉತ್ತರ ಪ್ರದೇಶದಲ್ಲಿ ಬ್ಲ್ಯಾಕ್ ಲಿಸ್ಟ್ ಆದ ಬಿಸಿಐಟಿಎಸ್ ಅನ್ನು ಪರಿಗಣಿಸಿದ್ದಾರೆ ಎಂದು ದೂರಿದರು. ಈ ಯೋಜನೆಯ ಅಂದಾಜು ವೆಚ್ಚ 571 ಕೋಟಿ ಎಂದು ತಿಳಿಸಿ ನಂತರ ತಿದ್ದುಪಡಿ ಮಾಡಿದ್ದಾರೆ. ಟೆಂಡರ್ನ ಒಟ್ಟು ಮೊತ್ತ ತಿಳಿಸದೇ ಟೆಂಡರ್ ಕರೆಯಲಾಗಿದೆ ಎಂದು ಟೀಕಿಸಿದರು.
ಕೆಟಿಪಿಪಿ ಕಾಯ್ದೆಯೂ ಇಲ್ಲ; ಕೇಂದ್ರ ಸರಕಾರದ ನಿಯಮಾವಳಿಯನ್ನೂ ಜಾರಿ ಮಾಡಿಲ್ಲ; ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಡಿಜಿಟಲ್ ಮೀಟರ್ ಅಳವಡಿಸಿದ ವ್ಯಕ್ತಿಯನ್ನು ಪರಿಗಣಿಸಿದ್ದಾರೆ. ಪ್ರಿಬಿಡ್ನಲ್ಲಿ ರಾಜಶ್ರೀ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಗರಿಷ್ಠ ಸ್ಮಾರ್ಟ್ ಮೀಟರ್ ತಯಾರಾಗುತ್ತದೆ. ಅರ್ಹರನ್ನು ಹೊರಗಿಟ್ಟು ಬರೀ ಫೋನ್ ತಯಾರಕರನ್ನು ಆಯ್ಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕೇಂದ್ರ ಸರಕಾರದ ನಿಯಮಗಳ ಪ್ರಕಾರ 1 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು. ಅದನ್ನು ಬಿಟ್ಟು ಉತ್ಪಾದನೆಯೇ ಮಾಡದ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆಯನ್ನೇ ಮಾನದಂಡ ಮಾಡಿದ್ದಾರೆ. ಮೊದಲು ಟ್ರಾನ್ಸ್ಫಾರ್ಮರ್, ಫೀಡರ್ಗಳಿಗೆ ಇದನ್ನು ಅಳವಡಿಸಿ ಸಾಗಾಟದಲ್ಲಿ ಆಗುವ ನಷ್ಟವನ್ನು ತಿಳಿಯಬೇಕಿತ್ತು. ಬಳಿಕ ರಾಜ್ಯದ ಗ್ರಾಹಕರಿಗೆ ಇದನ್ನು ಅಳವಡಿಸಬೇಕಿತ್ತು. ಕೇಂದ್ರದ ಆರ್ಡಿಎಸ್ಎಸ್ ಅಡಿ ಸಿಗುವ 3 ಸಾವಿರ ಕೋಟಿಯನ್ನು ಬಳಸಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ, ತೆಲಂಗಾಣ, ಕೇರಳದಲ್ಲಿ ಕಡಿಮೆ ಮೊತ್ತಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದೊಂದು ಮೀಟರ್ಗೆ 17 ಸಾವಿರ ಆಗುತ್ತದೆ. ಅದೇ ಬೇರೆ ರಾಜ್ಯದಲ್ಲಿ ಪ್ರತಿ ಮೀಟರ್ಗೆ 7,740 ರೂ. ಆಗಲಿದೆ. ಬೆಸ್ಕಾಂ ಮತ್ತಿತರ ಎಸ್ಕಾಂಗೆ ಹೋಲಿಸಿದರೆ ಇದು 9,260 ರೂ. ಹೆಚ್ಚು ಎಂದು ತಿಳಿಸಿದರು.
ಬಿಹಾರದಲ್ಲೂ ಇದೇ ಮಾದರಿಯ ಹಗರಣ ನಡೆದಿದ್ದು, ಐಎಎಸ್ ಅಧಿಕಾರಿ, ಸಚಿವರು ಬಂಧಿತರಾಗಿದ್ದಾರೆ ಎಂದು ಗಮನ ಸೆಳೆದರು. ಸ್ಮಾರ್ಟ್ ಮೀಟರ್, ಸಾಫ್ಟ್ವೇರ್, ಔಟ್ಲೆಟ್, ಸಿಬ್ಬಂದಿ ಸಂಬಳವನ್ನು ವೆಚ್ಚವಾಗಿ ತೋರಿಸಿದ್ದಾರೆ ಎಂದರು. ಕೆಟಿಪಿಪಿ ಕಾಯ್ದೆಯನ್ನು ಎಲ್ಲ ಹಂತದಲ್ಲೂ ಉಲ್ಲಂಘಿಸಿದ್ದಾರೆ. ಭಂಡತನ, ಧೈರ್ಯದಲ್ಲಿ ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಇದೊಂದು ಹಗಲುದರೋಡೆ; ಸರಕಾರ ಇದಕ್ಕೆ ಉತ್ತರ ಕೊಡಬೇಕು. ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲು ಕಾನೂನಿಲ್ಲದೇ ಅದನ್ನು ಕಡ್ಡಾಯ ಮಾಡುತ್ತಿದ್ದಾರೆ. ಬ್ಲ್ಯಾಕ್ ಲಿಸ್ಟ್ ಆದವರಿಗೆ ಕೊಡಲಾಗಿದೆ ಎಂದು ದೂರಿದರು. ಸತ್ಯವನ್ನು ಹೇಳಿದ್ದೇವೆ. ಇದು ರಾಜಕೀಯ ಪ್ರೇರಿತ ಅಲ್ಲ ಎಂದು ಸ್ಪಷ್ಟಪಡಿಸಿದರು. ಸರಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಮರ್ಪಕವಾಗಿ ಬಿಸಿ ಮುಟ್ಟಿಸುವುದಾಗಿ ಎಚ್ಚರಿಸಿದರು.
ಇಂಧನ ಇಲಾಖೆ ಅತಿವೇಗವಾಗಿ ಅಂದರೆ, ಶೇ 30ಕ್ಕೂ ಹೆಚ್ಚು ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ವಹಿವಾಟು, ಬಳಕೆ, ಉಪಯೋಗ- ಶೇ 50ಕ್ಕೂ ಹೆಚ್ಚು ಇದೇ ಇಲಾಖೆಯದು ಆಗಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ವಿದ್ಯುತ್ ಬಳಸಿ ಚಲಾಯಿಸುವ ವಾಹನಗಳೂ ಬಂದಿವೆ. ಬಟ್ಟೆ ಒಗೆಯುವುದು, ಅಡುಗೆ, ಬಿಸಿನೀರು, ಮಿಕ್ಸಿ- ಎಲ್ಲವೂ ವಿದ್ಯುತ್ ಬಳಕೆಯ ಆಧರಿತವಾಗಿವೆ ಎಂದು ಹೇಳಿದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ಎಂ.ಡಿ. ಪಂಕಜ್ ಪಾಂಡೆ ಮತ್ತು ಬೆಸ್ಕಾಂ ಎಂ.ಡಿ. ಶಿವಶಂಕರ್ ಅವರು ನಿನ್ನೆ ಪತ್ರಿಕಾಗೋಷ್ಠಿ ಮಾಡಿ ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಏನೂ ತಪ್ಪಾಗಿಲ್ಲ ಎಂದಿದ್ದಾರೆ ಎಂದರು.
ಸ್ಮಾರ್ಟ್ ಮೀಟರ್ ಮತ್ತು ಇದರ ಸಾಫ್ಟ್ವೇರ್ ವಿಷಯದಲ್ಲಿ ಭ್ರಷ್ಟಾಚಾರದ ಕುರಿತು ದಾಖಲೆಸಮೇತ ತಿಳಿಸುವುದಾಗಿ ಹೇಳಿದರು. ಸದನದಲ್ಲೂ ಈ ವಿಷಯ ಪ್ರಸ್ತಾಪವಾಗಿದೆ ಎಂದರು. ಶಾಸಕ ಎಸ್.ಆರ್ ವಿಶ್ವನಾಥ್ ಅವರೂ ಈ ಬಗ್ಗೆ ಸದನದಲ್ಲಿ ಮಾತನಾಡಿದ್ದಾರೆ ಎಂದು ವಿವರಿಸಿದರು. ಆದರೆ ಸಚಿವರು ಈ ಕುರಿತು ಸ್ಪಷ್ಟ ಉತ್ತರ ನೀಡಿಲ್ಲ ಎಂದು ಟೀಕಿಸಿದರು.
ಶಾಸಕ ಎಸ್.ಆರ್ ವಿಶ್ವನಾಥ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.