ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬೆಲೆ ಏರಿಕೆಯ ಗ್ಯಾರಂಟಿಯನ್ನು ಬಹಳ ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ನಾಡಿನ ಜನತೆಗೆ ಬಣ್ಣದ ಹಬ್ಬ ಹೋಳಿಯ ಶುಭಾಶಯ ಕೋರಿದರು. ನಾಡಿನ ಬೆನ್ನೆಲುಬಾದ ರೈತರ ಬದುಕು ಹಸನಾಗಲಿ; ಎಲ್ಲ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.
ಈ ಸರಕಾರ ಬೆಲೆ ಏರಿಕೆಯನ್ನು ನಿರಂತರವಾಗಿ ನೀಡುತ್ತಿದೆ. ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ನೀರಿನ ದರ ಎರಡನೇ ಬಾರಿಗೆ ಹೆಚ್ಚಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಬಜೆಟ್ ಮೇಲೆ ಈ ವಿಷಯಗಳ ಕುರಿತು ಚರ್ಚಿಸಲಿದ್ದೇವೆ ಎಂದರು.
ರಾಜ್ಯದ ಬಜೆಟ್ ಕುರಿತು ಅಧಿವೇಶನದಲ್ಲಿ ಚರ್ಚೆ ಆರಂಭವಾಗಿದೆ. ನಾನು ಕೂಡ ಬಜೆಟ್ ಬಗ್ಗೆ ಚರ್ಚೆ ಆರಂಭಿಸಿದಾಗ ಆಡಳಿತ ಪಕ್ಷದ ಸದಸ್ಯರು, ಅಧಿಕಾರಿಗಳು ಇರಲಿಲ್ಲ; ಹಾಗಾಗಿ ಮಾತು ಮೊಟಕುಗೊಳಿಸಿದೆ. ಸೋಮವಾರ ಅಥವಾ ಮಂಗಳವಾರ ಮಾತನಾಡಲಿದ್ದೇನೆ ಎಂದರು.
ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ನಾಡಿನ ಜನರ, ಕೃಷಿಕರ, ಬಡವರ ಕಣ್ಣೀರನ್ನು ಒರೆಸಬೇಕಿದ್ದ ಬಜೆಟ್, ಆ ನಿರೀಕ್ಷೆಗಳನ್ನು ಸಾಕಾರಗೊಳಿಸಿಲ್ಲ ಎಂದು ಅವರು ಟೀಕಿಸಿದರು.
ತಮಿಳುನಾಡಿನ ರಾಜಕಾರಣವು ಕೇಂದ್ರ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಅವರು ಕೇಂದ್ರ ವಿರೋಧಿ ನೀತಿಗಳಿಂದ ಬೇಳೆ ಬೇಯಿಸಿಕೊಳ್ಳುತ್ತಾರೆ. ಹಲವಾರು ದಶಕಗಳಿಂದ ಇದನ್ನು ನೋಡುತ್ತ ಬರುತ್ತಿದ್ದೇವೆ. ರೂಪಾಯಿಯನ್ನು ತಮಿಳು ಭಾಷೆಯಲ್ಲಿ ಬರೆಯುವ ಮೂಲಕ ಇದೊಂದು ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಈ ಬೆಳವಣಿಗೆ ದೇಶಕ್ಕೆ ಮಾರಕ. ರಾಷ್ಟ್ರೀಯ ಶಿಕ್ಷಣ ನೀತಿ ವಿಷಯದಲ್ಲೂ ಇದೇ ಧೋರಣೆಯನ್ನು ರಾಜ್ಯದ ಸರಕಾರ, ತಮಿಳುನಾಡಿನ ಸರಕಾರಗಳು ಅನುಸರಿಸುತ್ತಿವೆ. ಡಿ ಲಿಮಿಟೇಶನ್ ವಿಚಾರದಲ್ಲೂ ಕೇಂದ್ರದ ಗೃಹ ಸಚಿವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ದೇಶದ ಒಳಿತಿಗಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಒನ್ ನೇಶನ್ ಒನ್ ಇಲೆಕ್ಷನ್ ಬಗ್ಗೆ ಆಲೋಚಿಸಿದ್ದಾರೆ. ಡಿ ಲಿಮಿಟೇಶನ್ ವಿಚಾರ ಮುಂದಿಟ್ಟು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ರಾಜ್ಯದ ಮುಖ್ಯಮಂತ್ರಿಗಳೂ ಅದಕ್ಕೆ ಧ್ವನಿಗೂಡಿಸುವುದು ವಿಪರ್ಯಾಸ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಗಳಿಗೆ ನೈಜ ಕಳಕಳಿ ಇದ್ದರೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಅಲ್ಲಿನ ಮುಖ್ಯಮಂತ್ರಿಗಳ ಮನ ಒಲಿಸುವ ಪ್ರಯತ್ನವನ್ನು ಮಾಡಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ತಮಿಳುನಾಡಿನ ಸಚಿವರು ಬಂದಾಗ ಅವರಿಗೆ ರಾಜಾತಿಥ್ಯ ನೀಡಿದ್ದಾರೆ. ಆದರೆ, ನಮ್ಮ ಮುಖ್ಯಮಂತ್ರಿಗಳು ಮತ್ತು ಸರಕಾರವು ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ ನೀರು ಹರಿಸುವ ಕುರಿತು ಮಾತನಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಡಿ ಲಿಮಿಟೇಶನ್ ವಿಚಾರದಲ್ಲಿ ತಮಿಳುನಾಡಿನ ಸರಕಾರ ದೇಶವಿರೋಧಿ ನಡೆ ಅನುಸರಿಸುತ್ತಿದೆ. ಅದಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಧ್ವನಿಗೂಡಿಸುವುದು ನಿಜಕ್ಕೂ ದುರ್ದೈವ ಎಂದರು.
ಸಿದ್ದರಾಮಯ್ಯನವರು ಕೇಂದ್ರದ ಜೊತೆ ರಾಜಕೀಯ ಸಂಘರ್ಷಕ್ಕೆ ಇಳಿದಿದ್ದಾರೆ. ಇದರಿಂದ ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಬಹುದು. ಆದರೆ, ಇದು ರಾಜ್ಯದ ಜನತೆಗೆ ಮಾರಕ ಎಂದರಲ್ಲದೆ, ಈಚೆಗೆ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಶ್ಲಾಘನೆ ಮಾಡಿದ್ದಾರೆ. ಇವತ್ತು ಪ್ರಧಾನಿ ಮತ್ತು ಹಣಕಾಸು ಸಚಿವೆ ಮಧ್ಯಸ್ಥಿಕೆಯಿಂದಾಗಿ ಜಮ್ಮು- ಕಾಶ್ಮೀರಕ್ಕೆ ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತಿದೆ ಎಂದಿದ್ದಾರೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಯಾಕೆ ಈ ರೀತಿ ಕೇಂದ್ರ ಸರಕಾರದ ಜೊತೆಗೆ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ? ಅದರಿಂದ ರಾಜ್ಯಕ್ಕೆ ಯಾವ ರೀತಿ ಒಳಿತಾಗಲು ಸಾಧ್ಯ ಎಂದು ಕೇಳಿದರು. ಇದನ್ನೂ ಸದನದಲ್ಲಿ ಮಾತನಾಡುವುದಾಗಿ ತಿಳಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರೂ ರಾಜ್ಯದ ಜನತೆಗೆ ಹೋಳಿ ಶುಭಾಶಯ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.