ನವದೆಹಲಿ: ಮೀನುಗಾರಿಕೆ ವೇಳೆ ನಾಪತ್ತೆ ಆಗಿರುವ ನಾರಾಯಣ ಮೊಗವೀರ ಅವರ ಕುಟುಂಬಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರ ಮೊತ್ತವನ್ನು ಇನ್ನೆರಡು ದಿನದಲ್ಲಿ ನೀಡಬೇಕು. ಆ ಮೂಲಕ ಮನೆ ಯಜಮಾನನನ್ನು ಕಳೆದುಕೊಂಡ ಕುಟುಂಬದ ನೋವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬೈಂದೂರು ಶಾಸಕ ಗಂಟಿಹೊಳೆ ಆಗ್ರಹಿಸಿದ್ದಾರೆ
ಜಿಲ್ಲಾ ಪಂಚಾಯತಿನಲ್ಲಿ ಕ್ಷೇತ್ರದ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಬಗೆಗಿನ ಚರ್ಚೆ ವೇಳೆ ಶಾಸಕರು ಈ ಆಗ್ರಹ ಮಾಡಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರದ ಮೀನುಗಾರಿಕೆ ಯೋಜನೆಗಳು ಹಾಗೂ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಗಂಟಿಹೊಳೆಯವರು, ಜನವರಿ 2 ರಂದು ಪರ್ಸಿನ್ ಬೋಟ್ ನಲ್ಲಿ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆ ಆಗಿರುವ ಬಡ ಮೀನುಗಾರರಾದ ನಾರಾಯಣ ಮೊಗವೀರ ಇವರ ಸುಳಿವು ಸಿಗದೇ ಇರುವುದು ಅತ್ಯಂತ ದುಃಖದಾಯಕ ಸಂಗತಿಯಾಗಿದೆ. ನಾರಾಯಣ ಮೊಗವೀರರ ಮನೆಗೆ ತೆರಳಿ ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಿರುತ್ತೇನೆ. ನಾಪತ್ತೆಯಾಗಿರುವ ಅವರನ್ನು ಹುಡುಕಲು ಜಿಲ್ಲಾಡಳಿತಕ್ಕೆ ಹಾಗೂ ಸಂಬಂದಿಸಿದ ಇಲಾಖೆಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಈವರೆಗೂ ಮೀನುಗಾರರನ್ನು ಹುಡುಕಲು ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸಾಧ್ಯವಾಗದೆ ಇರುವುದು ಹಾಗೂ ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸದೇ ಇರುವುದು ಖಂಡನೀಯ. ಬಡ ಮೀನುಗಾರರ ನೋವಿಗೆ ಸ್ಪಂದಿಸುವ ಜಿಲ್ಲಾಡಳಿತ ಈ ಬಗ್ಗೆ ದಿವ್ಯ ನಿರ್ಲಕ್ಷ ತೋರಿದೆ ಎಂದರು.
ಮೀನುಗಾರರ ಸಂಕಷ್ಟ ಸಮಯದಲ್ಲಿಯೇ ಬಳಕೆ ಯಾಗುವ ಸಂಕಷ್ಟ ಪರಿಹಾರ ನಿಧಿಯಡಿ ರೂ 10 ಲಕ್ಷ ತುರ್ತು ಪರಿಹಾರ ನೀಡಲು ಜನವರಿ 10 ರಂದು ಆದೇಶ ಪತ್ರ ಆಗಿ 7 ದಿನ ಕಳೆಯುತ್ತಾ ಬಂದರೂ ಈವರೆಗೂ ನೊಂದವರ ಮನೆ ಬಾಗಿಲಿಗೆ ತೆರಳಿ ಚೆಕ್ ವಿತರಿಸುವ ಹಾಗೂ ನಿಮ್ಮ ಸಂಕಷ್ಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಹೇಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹಾಗಾಗಿ ಇನ್ನೆರಡು ದಿನದಲ್ಲಿ ಪರಿಹಾರ ಮೊತ್ತದ ಚೆಕ್ ನ್ನು ಮೀನುಗಾರರ ಕುಟುಂಬಕ್ಕೆ ನೀಡಬೇಕು. ಆ ಮೂಲಕ ಮನೆಯ ಯಜಮಾನನನ್ನು ಕಳೆದು ಕೊಂಡು ನೋವಿನಲ್ಲಿರುವ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಸರಕಾರ ನೆರವು ನೀಡಬೇಕು. ಇದು ಆಗದೇ ಇದ್ದಲ್ಲಿ ಪ್ರತಿಭಟಿಸಿಯಾದರೂ ಆ ಕುಟುಂಬಕ್ಕೆ ನ್ಯಾಯ ಒದಗಿಸಲು ಸಿದ್ದನಿದ್ದೇನೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.