ಬೈಂದೂರು: ಮೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ATP ಸೇವೆಯನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಬೈಂದೂರು ಶಾಸಕ ಗುರರಾಜ್ ಗಂಟಿಹೊಳೆ ಅವರು ಮೆಸ್ಕಾಂ ಎಂಡಿ ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಳೆದ 15 ವರ್ಷಗಳಿಂದ ಮೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿ ಗ್ರಾಹಕರ ವಿದ್ಯುತ್ ಬಿಲ್ ಪಾವತಿ ಸಲುವಾಗಿ ATP( Any Time Payment ) ಯಂತ್ರಗಳ ಮೂಲಕ ಆಪರೇಟರ್ಗಳು ಗ್ರಾಹಕರಿಗೆ ಅನುಕೂಲವಾಗುವ ಸಮಯದಲ್ಲಿ ವಿದ್ಯುತ್ ಬಿಲ್ ಪಡೆದುಕೊಂಡು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದರು. ಮೆಸ್ಕಾಂ ನ ಬಿಲ್ ಪಾವತಿ ಕೌಂಟರ್ ಇದ್ದರೂ ATP ಮೂಲಕ ಸರಕಾರಿ ಕಚೇರಿ ಅವಧಿ ಮೀರಿಯೂ ಹಾಗೂ ರಜಾ ದಿನಗಳಲ್ಲಿ ಯಾವುದೇ ವ್ಯತ್ಯಯ ಇಲ್ಲದೇ ಬಿಲ್ ಪಾವತಿ ಆಗುತಿತ್ತು. ಆದರೆ ಪ್ರಸ್ತುತ ಡಿಸೆಂಬರ್ ಅಂತ್ಯಕ್ಕೆ ಸದರಿ ಸೇವೆಗಳ ಗುತ್ತಿಗೆ ಅವಧಿ ಮುಕ್ತಾಯ ಗೊಂಡ ಕಾರಣ ನೀಡಿ ಗುತ್ತಿಗೆಯನ್ನು ನವೀಕರಣ ಮಾಡದೇ ಮೆಸ್ಕಾಂ ಜನವರಿ ಒಂದರಿಂದ ATP ಯಂತ್ರ ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.
ಇದರಿಂದ ಆನ್ ಲೈನ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ನೆಟ್ ವರ್ಕ್ ಸಮಸ್ಯೆ ಇರುವ ದೂರದ ಊರಿಂದ ಮೆಸ್ಕಾಂ ಕಚೇರಿಗೆ ಬರುವ ಗ್ರಾಹಕರಿಗೆ ಅನಾನುಕೂಲವಾಗಲಿದೆ. ವಿಶೇಷವಾಗಿ ವಯೋ ವೃದ್ಧರಿಗೆ, ಅಶಕ್ತರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಕಳೆದ 15 ವರ್ಷ ಗಳಿಂದ ATP ಆಪರೇಟರ್ ಆಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದ ನಿರ್ವಾಹಕರು ಉದ್ಯೋಗ ಕಳೆದು ಕೊಂಡು ಜೀವನ ಭದ್ರತೆಯನ್ನು ಕಳೆದು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲುವ ಪರಿಸ್ಥಿತಿ ಹಾಗೂ ಮೆಸ್ಕಾಂ ಗೆ ನಿಯಮಿತವಾಗಿ ಪಾವತಿ ಆಗುತ್ತಿದ್ದ ಬಿಲ್ ಪಾವತಿಯೂ ವಿಳಂಬವಾಗಲಿದೆ. ಹಾಗಾಗಿ ATP ಸೇವೆಯನ್ನು ಮುಕ್ತಾಯಗೊಳಿಸುವ ಆದೇಶ ನೀಡಿರುವ ಮೆಸ್ಕಾಂ ತನ್ನ ಆದೇಶವನ್ನು ಮರು ಪರಿಶೀಲಿಸಿ ಮೆಸ್ಕಾಂ ATP ಸೇವೆಯನ್ನು ಪುನರಾರಂಭಿಸಲು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬೈಂದೂರು ಶಾಸಕರು ಪತ್ರ ಮುಖೇನ ಆಗ್ರಹ ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.