ಬೆಂಗಳೂರು: ಬೆಂಗಳೂರಿಗೆ ಅತಿ ಸಮೀಪದಲ್ಲಿರುವ ಬಂಗಾರಪೇಟೆಯಲ್ಲಿ ಅಂಗನವಾಡಿ ಮೇಲ್ಛಾವಣಿ ಬಿದ್ದು 7 ಮಕ್ಕಳು ಆಸ್ಪತ್ರೆಗೆ ಸೇರಿದ್ದಾರೆ. 4 ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಇದೇನಾ ಮುಖ್ಯಮಂತ್ರಿಗಳ ಬಡವರ ಪರ ಕಾಳಜಿ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಮಂಜುಳಾ ಅವರು ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಎಲ್ಲಿದ್ದಾರೆ? ಅವರನ್ನು ಹುಡುಕಿಕೊಡಿ ಮುಖ್ಯಮಂತ್ರಿಗಳೇ ಎಂದು ಕೇಳಿದರು. ಇಲ್ಲಿಗೆ ಬಡವರ- ಕೂಲಿಕಾರರ ಮಕ್ಕಳು ಬರುತ್ತಾರೆ. ಅವರಿಗೆ ಯಾವ ರಕ್ಷಣೆ ಇದೆ? ಈ ಸರಕಾರವು ಯಾವ ನೈತಿಕತೆ ಮೇಲೆ ಸದಾ ವಿಪಕ್ಷವನ್ನು ಟೀಕೆ ಮಾಡುತ್ತಿದೆ ಎಂದು ಕೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಮನೆ ಮತ್ತು ಕಚೇರಿಯಿಂದ ಹೊರಕ್ಕೆ ಬಂದು ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ ಸರಿಪಡಿಸಲಿ; ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಾಣಂತಿಯರ ಸಾವು ನಿತ್ಯೋತ್ಸವವಾಗಿ ರಾಜ್ಯ ತಲ್ಲಣಗೊಂಡ ಸಂದರ್ಭದಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಮನೆ ಮತ್ತು ಕಚೇರಿಯಿಂದ ಹೊರಗೆ ಬಂದು ಕೆಲಸ ಮಾಡುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಅವರು ಸಚಿವೆಯಾಗಿದ್ದಾರೆ. ಇದೇನಾ ಈ ಸರಕಾರ ಮಹಿಳೆಯರಿಗೆ ಕೊಡುವ ಗೌರವ ಮತ್ತು ನ್ಯಾಯ ಎಂದು ಕೇಳಿದರು.
ಗೃಹ ಸಚಿವರ ತವರು ಜಿಲ್ಲೆ ಮಧುಗಿರಿಯಲ್ಲಿ ಡಿವೈಎಸ್ಪಿಯೊಬ್ಬರು ಠಾಣೆಗೆ ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಠಾಣೆಯಲ್ಲೇ ಮಾಡಿದ್ದಾರೆ. ಇದು ರಾಜ್ಯದಲ್ಲಿ ಮಹಿಳೆಯರಿಗೆ ಪೊಲೀಸ್ ಠಾಣೆಯಲ್ಲೇ ರಕ್ಷಣೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಗೃಹ ಇಲಾಖೆಯಲ್ಲಿ ಹೊಕ್ಕಿರುವ ಹೆಗ್ಗಣಗಳನ್ನು ಹೊರಹಾಕಿ ಪೊಲೀಸ್ ಇಲಾಖೆಗೆ ಬರುವ ಮತ್ತು ರಾಜ್ಯದಲ್ಲಿ ಬದುಕುವ ಮಹಿಳೆಯರಿಗೆ ಈ ಸರಕಾರ, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸುರಕ್ಷತೆಯನ್ನು ಕೊಡಬೇಕೆಂದು ಅವರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.